Advertisement

ಮತ್ತೆ 42 ಬೋಗಿ ಪೂರೈಕೆಗೆ ಬೇಡಿಕೆ

12:21 AM Feb 11, 2020 | Lakshmi GovindaRaj |

ಬೆಂಗಳೂರು: ಇತ್ತ ನಮ್ಮ ಮೆಟ್ರೋ ಎರಡನೇ ಹಂತದ ವಿಸ್ತರಿಸಿದ ಮಾರ್ಗಗಳು ಸಜ್ಜುಗೊಳ್ಳುತ್ತಿರುವ ಬೆನ್ನಲ್ಲೇ ಅತ್ತ ಕಾರ್ಯಾಚರಣೆಗಾಗಿ ಬೋಗಿಗಳ ಪೂರೈಕೆಗೆ ಸಿದ್ಧತೆ ನಡೆಯುತ್ತಿದೆ. ಎರಡು ವಿಸ್ತರಿಸಿದ ಮಾರ್ಗಗಳಿಗೆ ಸುಮಾರು 42 ಬೋಗಿಗಳು ಅಂದರೆ ಏಳು ಮೆಟ್ರೋ ರೈಲುಗಳ ಪೂರೈಕೆಗೆ ಸಂಬಂಧಿಸಿದಂತೆ ಭಾರತ್‌ ಅರ್ತ್‌ ಮೂವರ್ ಲಿ., (ಬಿಇಎಂಎಲ್‌)ಗೆ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌) ಪ್ರಸ್ತಾವನೆ ಸಲ್ಲಿಸಿದೆ.

Advertisement

ಹೊಸ ಮಾರ್ಗಗಳು ಲೋಕಾರ್ಪಣೆಗೊಳ್ಳುತ್ತಿದ್ದಂತೆ ಅದಕ್ಕೆ ಅನುಗುಣವಾಗಿ ಈ ರೈಲುಗಳು ಸೇರ್ಪಡೆಗೊಳ್ಳಲಿವೆ. ಮೂಲಗಳ ಪ್ರಕಾರ ಡಿಸೆಂಬರ್‌ ಒಳಗೆ ಪೂರೈಕೆ ಆಗಲಿವೆ. ಇದರ ವೆಚ್ಚ 400 ಕೋಟಿ ರೂ. ಆಗಲಿದೆ. ಸದ್ಯ 42 ರೈಲುಗಳು ಕಾರ್ಯಾಚರಣೆ ಮಾಡುತ್ತಿವೆ. ಇನ್ನೂ ಎಂಟು ರೈಲುಗಳು ಡಿಪೋದಲ್ಲಿದ್ದು, ಅದರಲ್ಲಿ ಎರಡು ಸಾಮಾನ್ಯವಾಗಿ ಬ್ಯಾಕ್‌ಅಪ್‌ (ತುರ್ತು ಸಂದರ್ಭದಲ್ಲಿ ಬಳಕೆ) ಆಗಿ ಇಡಲಾಗಿರುತ್ತದೆ.

ಇದರೊಂದಿಗೆ ಮತ್ತೆ ಆರು ರೈಲುಗಳನ್ನು ಪೂರೈಸುವಂತೆ ಮನವಿ ಮಾಡಲಾಗಿದೆ. ಈ ಮಧ್ಯೆ ಯಲಚೇನಹಳ್ಳಿ-ಅಂಜನಾಪುರ ಟೌನ್‌ಶಿಪ್‌ ಹಾಗೂ ಮೈಸೂರು ರಸ್ತೆ-ಕೆಂಗೇರಿ ನಡುವಿನ ಮಾರ್ಗಗಳು ವರ್ಷಾಂತ್ಯದ ಒಳಗೆ ಸೇವೆಗೆ ಅಣಿಯಾಗಲಿವೆ. ಆಗ ಮಾರ್ಗ ವಿಸ್ತರಣೆಯಿಂದ ಸಹಜವಾಗಿ ಹೆಚ್ಚು ರೈಲುಗಳು ಬೇಕಾಗುತ್ತವೆ. ಈ ಹಿನ್ನೆಲೆಯಲ್ಲಿ ಅಗತ್ಯಕ್ಕೆ ಅನುಗುಣವಾಗಿ ಮೆಟ್ರೋ ರೈಲುಗಳಿಗೆ ಈಗ ಬೇಡಿಕೆ ಇಡಲಾಗಿದೆ ಎಂದು ಬಿಎಂಆರ್‌ಸಿಎಲ್‌ ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ಹೇಳಿದರು.

ಉದ್ದೇಶಿತ ಕೆಂಗೇರಿ ಮಾರ್ಗವು 6.46 ಕಿ.ಮೀ. ಹಾಗೂ ಕನಕಪುರ ರಸ್ತೆ ಮಾರ್ಗವು 6.29 ಕಿ.ಮೀ. ಇದೆ. ಇಲ್ಲಿ ಪ್ರತಿ ನಿಲ್ದಾಣಕ್ಕೆ ತಲಾ ಒಂದರಂತೆ ತೆಗೆದುಕೊಂಡರೂ ಕನಿಷ್ಠ 12 ರೈಲುಗಳ ಅವಶ್ಯಕತೆ ಇದೆ. ಈಗಾಗಲೇ ಆರು ರೈಲುಗಳು ಇರುವುದರಿಂದ, ಉಳಿದ ಏಳು ರೈಲುಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮುಂದಿನ ಕೆಲವೇ ತಿಂಗಳಲ್ಲಿ ಇವುಗಳನ್ನು ಪೂರೈಸುವ ಭರವಸೆಯನ್ನು ಬಿಇಎಂಎಲ್‌ ನೀಡಿದೆ.

ಸವಕಳಿ ಲೆಕ್ಕಾಚಾರ?: ಉಳಿದ ನಾಲ್ಕು ಮಾರ್ಗಗಳಿಗೂ ಈಗಲೇ ಬೇಡಿಕೆ ಇಡಬಹುದು. ಆದರೆ, ಬೇಗ ಪೂರೈಕೆ ದಿನದಿಂದ ಆ ಬೋಗಿಗಳ ಸವಕಳಿ ದಿನ ಲೆಕ್ಕಹಾಕಲಾಗುತ್ತದೆ. ಉದಾಹರಣೆಗೆ 10 ವರ್ಷ ವಾರಂಟಿ ಅವಧಿಯೊಂದಿಗೆ ಇದೇ ವರ್ಷ ಎಲ್ಲ ಬೋಗಿಗಳನ್ನು ಹಸ್ತಾಂತರಿಸಲಾಯಿತು ಎಂದುಕೊಳ್ಳೋಣ, ಆದರೆ ಉಳಿದ ಮಾರ್ಗಗಳ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳಲು ಇನ್ನೂ ಎರಡು-ಮೂರು ವರ್ಷ ತೆಗೆದುಕೊಳ್ಳಬಹುದು.

Advertisement

ಆಗ, ಉಪಯೋಗ ಆಗದಿದ್ದರೂ ಮೂರು ವರ್ಷ ಸವಕಳಿ ಅವಧಿ ಸೇರುತ್ತದೆ. ಮೊದಲ ಹಂತದಲ್ಲಿ ಬಿಎಂಆರ್‌ಸಿಎಲ್‌ ಈ ತಪ್ಪು ಮಾಡಿತ್ತು. ಆದ್ದರಿಂದ ಈ ಬಾರಿ ಕಾಮಗಾರಿ ಪ್ರಗತಿ ಆಧರಿಸಿ ಬೇಡಿಕೆಗಳನ್ನು ಇಡಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ವಿವರಿಸಿದರು. ಇನ್ನು ಸಮಗ್ರ ಯೋಜನಾ ವರದಿ (ಡಿಪಿಆರ್‌) ಪ್ರಕಾರ ಪೀಣ್ಯದಲ್ಲಿ ಆರು ಬೋಗಿಗಳ 30 ರೈಲುಗಳು ಹಾಗೂ ಬೈಯಪ್ಪನಹಳ್ಳಿಯ 6 ಬೋಗಿಗಳ 19 ರೈಲುಗಳು ನಿಲುಗಡೆ ಆಗುತ್ತಿವೆ.

2041ಕ್ಕೆ ಮೆಟ್ರೋ ಜಾಲ ವಿಸ್ತರಿಸಲಿದ್ದು, ರೈಲುಗಳ ಸಂಖ್ಯೆ ಕೂಡ ದುಪ್ಪಟ್ಟಾಗುತ್ತದೆ. ಆಗ ಪ್ರಸ್ತುತ ಘಟಕಗಳು ಸಾಕಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ನಾಲ್ಕು ಹೆಕ್ಟೇರ್‌ ಜಾಗದಲ್ಲಿ ಅಂಜನಾಪುರ ಟೌನ್‌ಶಿಪ್‌ನಲ್ಲಿ ಹಾಗೂ 12 ಹೆಕ್ಟೇರ್‌ ಜಾಗದಲ್ಲಿ ಕೆಂಗೇರಿಯಲ್ಲಿ ಡಿಪೋ ನಿರ್ಮಿಸಲು ಯೋಜಿಸಲಾಗಿದೆ. ಇವೆರಡೂ ಕ್ರಮವಾಗಿ 17 ಮತ್ತು 37 ರೈಲು ನಿಲುಗಡೆ ಸಾಮರ್ಥ್ಯ ಹೊಂದಿರಲಿವೆ. ಆದರೆ, ನೈಸ್‌ ಭೂಸ್ವಾಧೀನ ಎರಡೂ ಕಡೆಗಳಲ್ಲಿ ಕಗ್ಗಂಟಾಗಿದ್ದು, ಬಿಎಂಆರ್‌ಸಿಎಲ್‌ ಅಧಿಕಾರಿಗಳಿಗೆ ತಲೆನೋವಾಗಿದೆ.

ಒತ್ತಡ ನಿಭಾಯಿಸುವುದೇ ಸವಾಲು: “ನಮ್ಮ ಮೆಟ್ರೋ’ ಗರಿಷ್ಠ ಫ್ರಿಕ್ವೆನ್ಸಿ (ರೈಲುಗಳ ನಡುವಿನ ಸಂಚಾರ ಸಮಯದ ಅಂತರ) 3 ನಿಮಿಷ ಆಗಿದೆ. ಅಂದರೆ ಪ್ರತಿ 3 ನಿಮಿಷಕ್ಕೊಂದು ರೈಲು ಓಡಿಸುವ ವ್ಯವಸ್ಥೆ ಹೊಂದಿದೆ. ಪ್ರಸ್ತುತ “ಪೀಕ್‌ ಅವರ್‌’ನಲ್ಲಿ ಪ್ರತಿ 4.50ರಿಂದ 5 ನಿಮಿಷಕ್ಕೊಂದು ರೈಲು ಕಾರ್ಯಾಚರಣೆ ಮಾಡುತ್ತಿದೆ. ಇದನ್ನು ಪ್ರಯಾಣಿಕರ ಒತ್ತಡಕ್ಕೆ ಅನುಗುಣವಾಗಿ ಗರಿಷ್ಠ 3 ನಿಮಿಷಕ್ಕೆ ತಗ್ಗಿಸಲು ಸಾಧ್ಯವಿದೆ.

ಇದಕ್ಕಿಂತ ಕಡಿಮೆ ಅಂತರ ಕಷ್ಟ. ಮೊದಲ ಮತ್ತು ಎರಡನೇ ಹಂತಕ್ಕೂ ಇದೇ ವ್ಯವಸ್ಥೆ ಅನ್ವಯ ಆಗುತ್ತದೆ. ಆದರೆ ಮೆಟ್ರೋ ಜಾಲ ವಿಸ್ತರಣೆಯೊಂದಿಗೆ ಪ್ರಯಾಣಿಕರ ಬೇಡಿಕೆ ಹೆಚ್ಚಾಗಲಿದ್ದು, ಅದನ್ನು ನಿಭಾಯಿಸುವುದು ಬಿಎಂಆರ್‌ಸಿಎಲ್‌ಗೆ ಸವಾಲು ಆಗಲಿದೆ. ಪ್ರತಿ ಟರ್ಮಿನಲ್‌ನಲ್ಲಿ 200-300 ಮೀಟರ್‌ ದೂರ ಹೋಗಿ ರೈಲು ಹಳಿ ಬದಲಾಯಿಸಿಕೊಂಡು ಬರಬೇಕಾಗುತ್ತದೆ.

ಆರು ಬೋಗಿಗಳ ರೈಲಿಗೆ ಒಬ್ಬ ಲೋಕೊ ಪೈಲಟ್‌ ಇರುತ್ತಾರೆ. ಅವರು ಒಂದು ತುದಿಯಿಂದ ಇಳಿದು, ಮತ್ತೂಂದು ತುದಿಗೆ ಓಡಿ ಹೋಗಿ, ಅಲ್ಲಿಂದ ರೈಲು ಚಾಲನೆ ಮಾಡಿಕೊಂಡು ಬರಬೇಕಾಗುತ್ತದೆ. ಇದಕ್ಕೆ ಕನಿಷ್ಠ 3-4 ನಿಮಿಷ ಸಮಯ ಬೇಕಾಗುತ್ತದೆ. ಈ ಸಮಯ ತಗ್ಗಿಸಲು ರೈಲಿನಲ್ಲಿ ಎರಡೂ ತುದಿಯಲ್ಲಿ ತಲಾ ಒಬ್ಬರು ಪೈಲಟ್‌ಗಳನ್ನು ನಿಯೋಜಿಸಬೇಕಾಗುತ್ತದೆ. ಆಗ, ಮಾನವಸಂಪನ್ಮೂಲ ಹೆಚ್ಚಿಸಬೇಕಾಗುತ್ತದೆ.

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next