ಬೆಂಗಳೂರು: ಬಸ್ ಪ್ರಯಾಣ ದರ ಹೆಚ್ಚಳದ ಬೆನ್ನಲ್ಲೇ ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆಗೆ ಬಿಎಂಆರ್‌ಸಿಎಲ್ ಮುಂದಾಗಿದೆ. ಸದ್ಯ ತೀವ್ರ ದರ ಏರಿಕೆ ಪರಿಣಾಮ ತಪ್ಪಿಸಲು ಪ್ರಯಾಣಿಕರಿಗೆ ಭಾನುವಾರ, ಪೀಕ್ ಅವರ್ ಅಲ್ಲದ ಅವಧಿ ಹಾಗೂ ರಾಷ್ಟ್ರೀಯ ಹಬ್ಬದ ದಿನಗಳಲ್ಲಿ ಶೇ 5 ರಷ್ಟು ರಿಯಾಯಿತಿ ನೀಡುವಂತೆ ಮೂವರು ಸದಸ್ಯರ ಸರ್ಕಾರಿ ಸಮಿತಿಯೊಂದು ಶಿಫಾರಸು ಮಾಡಿದೆ. ನಮ್ಮ ಮೆಟ್ರೋದಲ್ಲಿ ಸದ್ಯ ಕನಿಷ್ಠ ಪ್ರಯಾಣ ದರ 10 ರೂ.ನಿಂದ ಗರಿಷ್ಠ 60 ರೂ. ಇದೆ. 2017ರಲ್ಲಿ ಕೊನೆಯ ಬಾರಿ ಮೆಟ್ರೋ ಪ್ರಯಾಣ ದರ ಪರಿಷ್ಕರಣೆಯಾಗಿತ್ತು. ಇದೀಗ ದರ ಪರಿಷ್ಕರಣೆ ನಿಟ್ಟಿನಲ್ಲಿ ಸಾರ್ವಜನಿಕರು, ಸಂಘ ಸಂಸ್ಥೆಗಳಿಂದ ಸಲಹೆ, ಅಭಿಪ್ರಾಯ ಸಂಗ್ರಹಿಸಿ ವರದಿ ನೀಡಲು ಬಿಎಂಆರ್‌ಸಿಎಲ್ ಸಮಿತಿ ರಚಿಸಿತ್ತು.
ಅದರಂತೆ ನಮ್ಮ ಮೆಟ್ರೋದ ಮೊದಲ ದರ ನಿಗದಿ ಸಮಿತಿಯು(ಎಫ್ಸಿಸಿ) ತನ್ನ ಅಂತಿಮ ವರದಿಯಲ್ಲಿ ಶೇ 40-45 ರಷ್ಟು ದರ ಹೆಚ್ಚಳದ ಬಗ್ಗೆ ಶಿಫಾರಸು ಮಾಡಿದೆ. ಈ ನಡುವೆ ಪ್ರಯಾಣಿಕರ ತೀವ್ರ ದರ ಏರಿಕೆ ಪರಿಣಾಮ ತಪ್ಪಿಸಲು ವಾರಾಂತ್ಯ ಭಾನುವಾರ, ನಾನ್ ಪೀಕ್ ಅವರ್ (ಬೆಳಗ್ಗೆ 8 ಗಂಟೆ, ಸಂಜೆ 4 ಗಂಟೆ ಮತ್ತು ರಾತ್ರಿ 9 ಗಂಟೆ) ಹಾಗೂ ಮೂರು ರಾಷ್ಟ್ರೀಯ ರಜಾದಿನಗಳಲ್ಲಿ (ಜ.26, ಆ 15 ಮತ್ತು ಅ.2) ರಂದು ಪ್ರಯಾಣಿಕರಿಗೆ ಶೇ 5 ರಿಯಾಯಿತಿ ನೀಡುವಂತೆ ಶಿಫಾರಸು ಮಾಡಿದೆ.
ಮೆಟ್ರೋ ರೈಲು ನಿಗಮ ಮಂಡಳಿ ಜ.17 ರಂದು ಈ ಶಿಫಾರಸುಗಳನ್ನು ಪರಿಗಣಿಸಲಿದ್ದು, ರೈಲ್ವೆ ಸಚಿವಾಲಯದ ಕಾರ್ಯìದರ್ಶಿ ನೇತೃತ್ವದ ಆಡಳಿತ ಮಂಡಳಿ ಸಭೆಯಲ್ಲಿ ದರ ಏರಿಕೆ ಕುರಿತು ಅಂತಿಮ ತೀರ್ಮಾನವಾಗಬೇಕಿದೆ. ಇಂಧನ ವೆಚ್ಚ, ವೇತನ, ನಿರ್ವಹಣೆ ವೆಚ್ಚ ಮೊದಲಾದ ಅಂಶಗಳನ್ನು ಪರಿಗಣಿಸಿ ನಮ್ಮ ಮೆಟ್ರೋ ರೈಲ್ವೆ ಕಾಯ್ದೆ 2002ರ ಸೆಕ್ಷನ್ 33 ಮತ್ತು 34ರ ಅಡಿಯಲ್ಲಿ ಬಿಎಂಆರ್ ಸಿಎಲ್ ದರ ನಿಗದಿ ಸಮಿತಿ ನಮ್ಮ ಮೆಟ್ರೋ ದರ ಏರಿಕೆ ಬಗ್ಗೆ ಶಿಫಾರಸು ಸಲ್ಲಿಸಿದೆ. ಇದರೊಟ್ಟಿಗೆ ಸ್ಮಾರ್ಟ್ ಕಾರ್ಡ್ ಮತ್ತು ಕ್ಯೂಆರ್ ಕೋಡ್ ಮೂಲಕ ಟಿಕೆಟ್ ಪಡೆಯುವವರಿಗೆ ಶೇ 5 ರ ರಿಯಾಯಿತಿ ಮುಂದುವರಿಸುವಂತೆ ತಿಳಿಸಿದೆ.
ಯಾವುದು ನಾನ್ ಪೀಕ್ ಅವರ್? ಮೆಟ್ರೋ ಸೇವೆ ಮುಂಜಾನೆ ಆರಂಭವಾದ ಸಮಯದಿಂದ ಬೆಳಗ್ಗೆ 8 ಗಂಟೆಯವರೆಗೆ, ಮಧ್ಯಾಹ್ನದಿಂದ ಸಂಜೆ 4 ಗಂಟೆಯವರೆಗೆ ಮತ್ತು ರಾತ್ರಿ 9 ಗಂಟೆಯಿಂದ ಮೆಟ್ರೋ ಸೇವೆ ಮುಗಿಯುವರೆಗಿನ ಸಮಯವನ್ನು ಪೀಕ್ ಅವರ್ ಅಲ್ಲದ ಅವಧಿ ಎಂದು ಮೆಟ್ರೋ ಪ್ರಯಾಣ ದರ ಪರಿಷ್ಕರಣೆಗಾಗಿ ರಚಿಸಿದ್ದ ಸಮಿತಿಯ ವರದಿಯಲ್ಲಿ ಉಲ್ಲೇಖೀಸಲಾಗಿದೆ.