ಬೆಂಗಳೂರು: ವಿಧಾನಸಭೆ ಚುನಾವಣೆ ಮುಗಿದರೂ ಬಹಳಷ್ಟು ಮುಖಂಡರು, ಕಾರ್ಯಕರ್ತರು ಅದರ ಗುಂಗಿನಿಂದ ಹೊರಬರದ ಕಾರಣ ಲೋಕಸಭಾ ಚುನಾವಣೆ ಸಿದ್ಧತೆಗೆ ಹಿನ್ನಡೆಯಾಗುವುದನ್ನು ಮನಗಂಡಿರುವ ಬಿಜೆಪಿ,ವಿಜಯದಶಮಿ ಹಬ್ಬದ ನಂತರ ಪೂರ್ಣ ಪ್ರಮಾಣದಲ್ಲಿ ಸಿದ್ಧತಾ ಕಾರ್ಯ ಆರಂಭಿಸಲು ಮುಂದಾಗಿದೆ.
ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ಸರ್ಕಾರ ರಚನೆ ಸಾಧ್ಯವಾಗದ ಬಳಿಕ ಬಿಜೆಪಿ ಲೋಕಸಭಾ ಚುನಾವಣೆಗೆ ಸಿದ್ಧತೆ ಆರಂಭಿಸಿತ್ತು. ಇದಕ್ಕೆ ಬಹುತೇಕ ನಾಯಕರು, ಮುಖಂಡರಿಂದ ನಿರೀಕ್ಷಿತ ಸ್ಪಂದನೆ ಸಿಗಲಿಲ್ಲ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಅನೇಕ ಸೂಚನೆಗಳನ್ನು ರಾಜ್ಯ ನಾಯಕರಿಗೆ ನೀಡಲಾಗಿತ್ತು.
ವಿಶೇಷ ಸಭೆ ನಡೆಸಿ ಎಲ್ಲ ಸೂಚನೆಗಳ ಜಾರಿಗೆ ತಂಡ ರಚಿಸುವಂತೆಯೂ ಸೂಚಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್‌ನಲ್ಲಿ ವಿಶೇಷ ಸಭೆ ನಡೆದರೂ ನಂತರದ ಚಟುವಟಿಕೆಗಳು ಕ್ರಿಯಾಶೀಲವಾಗಿ ನಡೆಯಲಿಲ್ಲ. ಹಿರಿಯ ನಾಯಕರು ಮೂರು ತಂಡಗಳಾಗಿ ಕೈಗೊಳ್ಳಬೇಕಿದ್ದ ರಾಜ್ಯ ಪ್ರವಾಸ ಅರ್ಧಕ್ಕೆ ಮೊಟಕುಗೊಂಡಿತು.
ಸ್ಥಳೀಯ ಸಂಸ್ಥೆ ಚುನಾವಣೆ ಬಳಿಕ ಪ್ರವಾಸ ಮುಂದುವರಿಸುವುದಾಗಿ ಹೇಳಿದರೂ ನಂತರ ನಡೆಯಲಿಲ್ಲ. ಇದೀಗ ಅ.8ಕ್ಕೆ ನಿಗದಿಯಾಗಿದ್ದ ಮೋರ್ಚಾ ಪದಾಧಿಕಾರಿಗಳ ಸಭೆ ಕೂಡ ಮುಂದೂಡಿಕೆಯಾಗಿದೆ. ವಿಜಯದಶಮಿ ಬಳಿಕ ಸರಣಿ ಕಾರ್ಯಕ್ರಮಗಳನ್ನು ನಡೆಸಿ ಸಿದ್ಧತಾ ಕಾರ್ಯವನ್ನು ಚುರುಕುಗೊಳಿಸಲಾಗುವುದು ಎಂದು ಪಕ್ಷದ ರಾಜ್ಯ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಉದ್ದೇಶಿತ ಕಾರ್ಯಕ್ರಮಗಳು
ಮೋರ್ಚಾ ಪದಾಧಿಕಾರಿಗಳ ಸಮಾವೇಶ.ಬೂತ್ ಸಮಿತಿ ಪುನಾರಚನೆ. ಪ್ರತಿ ಲೋಕಸಭಾಕ್ಷೇತ್ರದಲ್ಲಿ ಉಸ್ತುವಾರಿ, ಸಹ ಉಸ್ತುವಾರಿ ನೇಮಕ.ರಾಜ್ಯ ಸರ್ಕಾರದ ವಿರುದ್ಧ ರಾಜ್ಯ ಹಾಗೂ ಸ್ಥಳೀಯ ಮಟ್ಟದಲ್ಲಿ ಆಂದೋಲನ. ಪಕ್ಷದ ಹಿತೈಷಿಗಳು, ವಿರೋಧಿಗಳ ಪಟ್ಟಿ ತಯಾರಿಕೆ. ಪೂರ್ಣಾವಧಿ ಕಾರ್ಯಕರ್ತರ ನಿಯೋಜನೆ.ಕಾಲ್ ಸೆಂಟರ್ ಆರಂಭ.