Advertisement
ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರಕ್ಕೆ ಆಪತ್ತು ತರುವ ಬಿಜೆಪಿ ಪ್ರಯತ್ನದ ಬಗ್ಗೆ ಕಾಂಗ್ರೆಸ್ ಹೈಕಮಾಂಡ್‌ಗೂ ಅನುಮಾನ ಕಾಡಿದ್ದು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರ ಜತೆ ಈ ಕುರಿತು ಚರ್ಚೆ ನಡೆಸಿದ್ದು, ಹೆಚ್ಚು ಸೀಟು ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಾಗಿದೆ.
Related Articles
Advertisement
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸಚಿವ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್, ಲೋಕಸಭೆಯಲ್ಲಿ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ,
ಸಚಿವ ಜಮೀರ್ ಅಹಮದ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರಮುಖವಾಗಿ ಹನ್ನೆರಡು ಕ್ಷೇತ್ರಗಳಲ್ಲಿ ಪ್ರಚಾರ ಕೈಗೊಂಡು, ಸ್ಥಳೀಯವಾಗಿ ಎರಡೂ ಪಕ್ಷಗಳ ಕಾರ್ಯಕರ್ತರು ಹಾಗೂ ಮುಖಂಡರ ನಡುವಿನ ಗೊಂದಲ ಸರಿಪಡಿಸಿ ಮೈತ್ರಿಕೂಟದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಯಗಳಿಸಲು ಶ್ರಮ ಹಾಕಲು ತೀರ್ಮಾನಿಸಲಾಗಿದೆ.
ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ತುಮಕೂರು, ಮೈಸೂರು, ಚಿತ್ರದುರ್ಗ, ಬೆಂಗಳೂರು ಉತ್ತರ,ದಕ್ಷಿಣ, ಕೇಂದ್ರ, ಗ್ರಾಮಾಂತರ ಕ್ಷೇತ್ರಗಳಲ್ಲಿ ಒಕ್ಕಲಿಗರ ಮತ ಕ್ರೂಢೀಕರಿಸಲು ಖುದ್ದು ದೇವೇಗೌಡ, ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್ “ರಂಗಪ್ರವೇಶ’ ಮಾಡಲಿದ್ದಾರೆ.
ಜತೆಗೆ, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ ಅವರು ಹಿಂದುಳಿದ ವರ್ಗದ ಮತಗಳನ್ನು ಒಟ್ಟುಗೂಡಿಸಲಿದ್ದಾರೆ. ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಮತಗಳನ್ನು ಸೆಳೆಯಲು ಸಿ.ಎಂ.ಇಬ್ರಾಹಿಂ, ಜಮೀರ್ ಅಹಮದ್, ಕೆ.ಜೆ.ಜಾರ್ಜ್ ಅವರಿಗೆ ಹೊಣೆಗಾರಿಕೆ ನೀಡಲಾಗಿದೆ ಎಂದು ಹೇಳಲಾಗಿದೆ.
ಬೆಂಗಳೂರಿನ ನಾಲ್ಕೂ ಕ್ಷೇತ್ರಗಳ ಅಭ್ಯರ್ಥಿಗಳ ಪರವಾಗಿಯೇ ಸಂದೇಶ ರವಾನೆಯಾಗಬೇಕು. ಎರಡು ಕ್ಷೇತ್ರಗಳಲ್ಲಿ ಒಕ್ಕಲಿಗ, ಒಂದು ಕ್ಷೇತ್ರದಲ್ಲಿ ಮುಸ್ಲಿಂ ಹಾಗೂ ಮತ್ತೂಂದು ಕ್ಷೇತ್ರದಲ್ಲಿ ಹಿಂದುಳಿದ ವರ್ಗಕ್ಕೆ ಅವಕಾಶ ಕೊಟ್ಟಿರುವುದರಿಂದ ಸಾಮಾಜಿಕ ನ್ಯಾಯ ಕಲ್ಪಿಸಿರುವ ಪ್ರತಿಪಾದನೆ ಮಾಡಿ ಮತ ಸೆಳೆಯಬೇಕು.
ಚಿಕ್ಕಬಳ್ಳಾಪುರ, ಕೋಲಾರ, ಮೈಸೂರಿನಲ್ಲಿ ಪ್ರಮುಖವಾಗಿ ಜೆಡಿಎಸ್ ಪೂರ್ಣ ಪ್ರಮಾಣದಲ್ಲಿ ಬೆಂಬಲಿಸಿದರೆ ಮಾತ್ರ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂಬ ಆಂತರಿಕ ಮಾಹಿತಿ ಹಿನ್ನೆಲೆಯಲ್ಲಿ ಆ ಎರಡೂ ಕ್ಷೇತ್ರಗಳ ಜೆಡಿಎಸ್ ಕಾರ್ಯಕರ್ತರು ಹಾಗೂ ಮುಖಂಡರಿಗೆ ದೇವೇಗೌಡ ಹಾಗೂ ಕುಮಾರಸ್ವಾಮಿಯವರೇ ಸೂಚನೆ ನೀಡಿದ್ದಾರೆ.
ಅದೇ ರೀತಿ ಹಾಸನ, ಮಂಡ್ಯ, ತುಮಕೂರಿನಲ್ಲಿಯೂ ಕುರುಬ ಹಾಗೂ ಮುಸ್ಲಿಂ ಸಮುದಾಯದ ಮತಗಳು ಜೆಡಿಎಸ್ ಅಭ್ಯರ್ಥಿಗೆ ಸಿಗುವಂತೆ ನೋಡಿಕೊಳ್ಳಲು ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ ಸೂಚನೆ ನೀಡಿದೆ ಎಂದು ಹೇಳಲಾಗಿದೆ.
ಶಾಸಕರಿಗೆ ಬಿಜೆಪಿ ಗಾಳ: ಸಮ್ಮಿಶ್ರ ಸರ್ಕಾರದ ಸಂಖ್ಯಾಬಲ 118ರಲ್ಲಿ ಉಮೇಶ್ ಜಾದವ್ ರಾಜೀನಾಮೆ ನೀಡಿದ್ದು, ಸಿ.ಎಸ್.ಶಿವಳ್ಳಿ ಅವರ ನಿಧನದಿಂದ ಒಂದು ಕ್ಷೇತ್ರ ತೆರವಾಗಿದೆ. ಹೀಗಾಗಿ, ಸಂಖ್ಯಾಬಲ 116 ಆಗಿದೆ. ಶಾಸಕರಾದ ಕೃಷ್ಣಬೈರೇಗೌಡ ಹಾಗೂ ಈಶ್ವರ್‌ಖಂಡ್ರೆ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದಲ್ಲಿ ಸಂಖ್ಯಾಬಲ 114 ಕ್ಕೆ ಇಳಿಯಲಿದೆ.
ಬಿಜೆಪಿ ಸಂಖ್ಯಾಬಲ 106 ಇದೆ. ಬಿಎಸ್‌ಪಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ವಿರುದ್ಧವಾಗಿ ಸ್ಪರ್ಧೆ ಮಾಡಿರುವುದರಿಂದ ಆ ಪಕ್ಷದ ಶಾಸಕರ ಬೆಂಬಲ ಮುಂದೆಯೂ ಸಿಗುವುದು ಅನುಮಾನ ಎಂಬ ಆತಂಕ ಇದೆ. ಹೀಗಾಗಿ, ಲೋಕಸಭೆ ಚುನಾವಣೆ ನಂತರ ಸರ್ಕಾರಕ್ಕೆ ಆಪತ್ತು ತರುವ ಪ್ರಯತ್ನ ನಡೆಯಬಹುದು. ಹತ್ತು ಶಾಸಕರಿಗೆ ಬಿಜೆಪಿ ಗಾಳ ಹಾಕುವ ಚಿಂತನೆಯಲ್ಲಿದೆ. ಇದು ಕಾಂಗ್ರೆಸ್-ಜೆಡಿಎಸ್ ತಲೆನೋವಿಗೆ ಕಾರಣವಾಗಿದೆ.
* ಎಸ್. ಲಕ್ಷ್ಮಿನಾರಾಯಣ