Advertisement

ಕಲಾಪಕ್ಕೆ ನಿಮ್ಮದೇ ಅಡ್ಡಿ: ಸಚಿವ ಅನಂತಕುಮಾರ್‌ಗೆ ಸೋನಿಯಾ ತಿರುಗೇಟು

06:00 AM Apr 06, 2018 | |

ನವದೆಹಲಿ: ಸಂಸತ್‌ನಲ್ಲಿ ಅಧಿವೇಶನ ನಡೆಯದೇ ಇರಲು ಕಾಂಗ್ರೆಸ್‌ ಕಾರಣ ಎಂಬ ಕೇಂದ್ರ ಸಚಿವ ಅನಂತ ಕುಮಾರ್‌ ಹೇಳಿಕೆಗೆ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಕಿಡಿಕಿಡಿಯಾಗಿದ್ದಾರೆ. ಸಚಿವ ಅನಂತ ಕುಮಾರ್‌ ಸುಳ್ಳು ಹೇಳುತ್ತಿದ್ದಾರೆ. ಕೇಂದ್ರವೇ ಬಿಕ್ಕಟ್ಟಿಗೆ ಕಾರಣ ಎಂದು ತಿರುಗೇಟು ನೀಡಿದ್ದಾರೆ. ಸಚಿವರಾಗಿ ಸದನದ ಒಳಗೆ ಸುಳ್ಳು ಹೇಳಲು ನಾಚಿಕೆ ಯಾಗಬೇಕು ಎಂದಿದ್ದಾರೆ. ನಮ್ಮ ಪಕ್ಷ ತಾಳ್ಮೆ ವಹಿಸಿತ್ತು ಪ್ರತಿ  ವಿಚಾರದ ಬಗ್ಗೆಯೂ ಚರ್ಚೆಯಾಗಬೇಕೆಂದು ಬಯಸಿದ್ದೆವು ಎಂದು ಸೋನಿಯಾ “ಎನ್‌ಡಿಟಿವಿ’ಗೆ ತಿಳಿಸಿದ್ದಾರೆ.

Advertisement

ಧರಣಿ: ಇದೇ ವೇಳೆ ಸಂಸತ್‌ನಲ್ಲಿ ಸುಗಮ ಕಲಾಪ ನಡೆಯದೇ ಇರುವುದು ಸೇರಿದಂತೆ ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್‌ ನೇತೃತ್ವದಲ್ಲಿ ಹಲವು ಪ್ರತಿಪಕ್ಷಗಳು ಗಾಂಧಿ ಪ್ರತಿಮೆ ಮುಂಭಾಗದಲ್ಲಿ ಧರಣಿ ನಡೆಸಿದವು. ಅದರಲ್ಲಿ ಯುಪಿಎ ಅಧ್ಯಕ್ಷೆ ಸೋನಿಯಾ ಭಾಗವಹಿಸಿದ್ದರು. 

ನಡೆಯದ ಕಲಾಪ: ರಾಜ್ಯಸಭೆಯಲ್ಲಿ ಸತತವಾಗಿ 21ನೇ ದಿನವೂ ಯಾವುದೇ ಕಲಾಪ ನಡೆಯಲಿಲ್ಲ. ಶುಕ್ರವಾರ ಅಧಿವೇಶನದ ಕೊನೆಯ ದಿನವಾಗಿದೆ. ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾದ ಸಯ್ಯದ್‌ ನಾಸಿರ್‌ ಹುಸೇನ್‌ ಮತ್ತು ಇತರರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. 

3.66 ಕೋಟಿ ರೂ.ಉಳಿತಾಯ: ಎರಡನೇ ಹಂತದ ಬಜೆಟ್‌ ಅಧಿವೇಶನದಲ್ಲಿ 23 ದಿನಗಳ ಕಾಲ ಕಲಾಪ ನಡೆಯದೇ ಇರುವ ಹಿನ್ನೆಲೆಯಲ್ಲಿ ವೇತನ ಸ್ವೀಕರಿಸದೇ ಇರಲು ಎನ್‌ಡಿಎಯ 400 ಸಂಸದರು ನಿರ್ಧರಿಸಿದ್ದರು.  ಈ ನಿರ್ಧಾರದಿಂದಾಗಿ 3.66 ಕೋಟಿ ರೂ. ಉಳಿಸಿದಂತಾಗಿದೆ ಎಂದು ಸಚಿವ ಅನಂತಕುಮಾರ್‌ ಹೇಳಿದ್ದಾರೆ. ಇದೇ ಮೊದಲ ಬಾರಿಗೆ ಆಡಳಿತ ಪಕ್ಷದ ಸಂಸದರು ಕಲಾಪ ನಡೆಯಲಿಲ್ಲ ಎಂದು ವೇತನ ಸ್ವೀಕರಿಸದೇ ಉಳಿದಿದ್ದಾರೆ.  ಪ್ರತಿ ಸಂಸದ ಪ್ರತಿ ತಿಂಗಳಿಗೆ 1.6 ಲಕ್ಷ ರೂ.ಗಳನ್ನು  ವೇತನ, ಭತ್ಯೆಯಾಗಿ ಸ್ವೀಕರಿಸುತ್ತಿದ್ದಾರೆ. ಈ ಪೈಕಿ 91,699 ರೂ.ಗಳನ್ನು ನಾವು ಸ್ವೀಕರಿಸುತ್ತಿಲ್ಲ ಎಂದಿದ್ದಾರೆ.

ವೇತನ ತ್ಯಜಿಸಲ್ಲ ಎಂದ ಸ್ವಾಮಿ: ಇದೇ ವೇಳೆ  ರಾಜ್ಯಸಭೆ ಸದಸ್ಯ ಡಾ.ಸುಬ್ರಮಣಿಯನ್‌ ಸ್ವಾಮಿ ಅದಕ್ಕೆ ಆಕ್ಷೇಪಿಸಿದ್ದಾರೆ. “ಎಲ್ಲಾ ದಿನಗಳಲ್ಲಿಯೂ ಕಲಾಪದಲ್ಲಿ ಭಾಗವಹಿಸಿದ್ದೆ. ಕಲಾಪ ನಡೆಯದೇ ಇರುವುದು ನನ್ನ ತಪ್ಪಲ್ಲ. ಹಾಗಾಗಿ, ವೇತನ ತ್ಯಾಗ ಮಾಡುವುದಿಲ್ಲ’ ಎಂದು ಹೇಳಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next