ಹೊಸದಿಲ್ಲಿ : 2014ರ ಲೋಕಸಭಾ ಚುನಾವಣೆಯ ವೇಳೆ “ಮೋದಿ ಟೀ ಮಾರುವುದಕ್ಕಷ್ಟೇ ಲಾಯಕ್ಕು’ ಎಂದಿದ್ದ ಕಾಂಗ್ರೆಸ್‌ನ ಮಾಜಿ ಕೇಂದ್ರ ಸಚಿವ ಮಣಿ ಶಂಕರ್ ಅಯ್ಯರ್ ಅವರು ಈಗ ತಮ್ಮ ರಾಗವನ್ನು ಬದಲಾಯಿಸಿದ್ದಾರೆ. “ಮೋದಿಯನ್ನು ಯಾವುದೇ ಒಬ್ಬ ವ್ಯಕ್ತಿಯಿಂದ ಸೋಲಿಸಲಾಗದು; ಎಲ್ಲರೂ ಒಗ್ಗೂಡಿ ಹೋರಾಡಿದರೆ ಮಾತ್ರವೇ ಮೋದಿಯನ್ನು ಸೋಲಿಸಲು ಸಾಧ್ಯ. 2019ರ ಲೋಕಸಭಾ ಚುನಾವಣೆಯಲ್ಲಿ ಮೋದಿಯನ್ನು ಮತ್ತು ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಅಂತಹ ಒಂದು ಸಂಘಟಿತ ಕಾರ್ಯತಂತ್ರವನ್ನು ರೂಪಿಸುವುದು ಅಗತ್ಯ’ ಎಂದು ಹೇಳಿದ್ದಾರೆ.
2014ರಲ್ಲಿ ನರೇಂದ್ರ ಮೋದಿ ಅವರ ಪ್ರಧಾನಿ ಆಕಾಂಕ್ಷೆಯನ್ನು ಲೇವಡಿ ಮಾಡಿದ್ದ ಮಣಿಶಂಕರ್ ಅಯ್ಯರ್, “21ನೇ ಶತಮಾನದಲ್ಲಿ ಮೋದಿ ಭಾರತದ ಪ್ರಧಾನಿಯಾಗುವುದು ಸಾಧ್ಯವೇ ಇಲ್ಲ ಎಂಬ ವಿಶ್ವಾಸವನ್ನು ನಾನು ನಿಮಗೆ ಕೊಡುತ್ತೇನೆ. ಒಂದು ವೇಳೆ ಮೋದಿ ಸಂಸತ್ತಿನಲ್ಲಿ ಟೀ ವಿತರಿಸಲು ಬಯಸಿದರೆ ಅವರಿಗೆ ಅಲ್ಲಿ ನಾವು ಜಾಗ ಕೊಡಬಹುದಾಗಿದೆ’ ಎಂದು ಹೇಳಿದ್ದರು.
2014ರ ಲೋಕಸಭಾ ಚುನಾವಣೆಯನ್ನು ಬಿಜೆಪಿ ಪ್ರಚಂಡ ಬಹುಮತದೊಂದಿಗೆ ಗೆದ್ದ ಪರಿಣಾಮವಾಗಿ ಮೋದಿ ಪ್ರಧಾನಿಯಾದರು; ಅಲ್ಲಿಯ ಬಳಿಕ ಮೋದಿ ಶಕ್ತಿ ವರ್ಧಿಸುತ್ತಲೇ ಬಂದಿದ್ದು ಈಚಿನ ಪಂಚ ರಾಜ್ಯ ಚುನಾವಣೆಗಳಲ್ಲಿ ಬಿಜೆಪಿ, ಮೋದಿ ಬಲದಲ್ಲಿ ಉತ್ತರ ಪ್ರದೇಶದಲ್ಲಿ ಜಯಭೇರಿ ಬಾರಿಸಿ 325 ಸೀಟುಗಳನ್ನು ಗೆದ್ದುಕೊಂಡಿದೆ.
ಇಂದು ಎಎನ್‌ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡುತ್ತಾ ಕಾಂಗ್ರೆಸ್ ಹಿರಿಯ ನಾಯಕ, ಚಿಂತಕ, ಮುತ್ಸದ್ದಿ ಮಣಿಶಂಕರ್ ಅಯ್ಯರ್ ಹೇಳಿದ ಮಾತುಗಳು ಹೀಗಿವೆ :
* ಪ್ರಧಾನಿ ಮೋದಿಯನ್ನು ಮತ್ತು ಅವರ ಬಿಜೆಪಿಯನ್ನು ಸೋಲಿಸಲು ಸಂಘಟಿತ ಯತ್ನ ಬೇಕು; ಒಬ್ಬ ವ್ಯಕ್ತಿ – ಒಂದು ಪಕ್ಷದಿಂದ ಅದು ಅಸಾಧ್ಯ.
* ಪ್ರಬಲ ಪ್ರಾದೇಶಿಕ ನಾಯಕನಿದ್ದರೆ ಕಾಂಗ್ರೆಸ್ ಗೆಲ್ಲಬಹುದು ಎಂಬುದನ್ನು ಪಂಜಾಬ್ ತೋರಿಸಿಕೊಟ್ಟಿದೆ. ಹಾಗಾಗಿ ಕಾಂಗ್ರೆಸ್ ಪಕ್ಷ ಬಲಿಷ್ಠ ಪ್ರಾದೇಶಿಕ ನಾಯಕರನ್ನು ರೂಪಿಸಬೇಕು.
* ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯನ್ನು ಯಾರೂ ಬದಲಾಯಿಸಲಾರರು; ಆದರೆ ಕಾಂಗ್ರೆಸ್ ಪಕ್ಷಕ್ಕೆ ಯುವ ನಾಯಕರು ಬೇಕು.