ಇಸ್ಲಾಮಾಬಾದ್:ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಕಟುವಾಗಿ ವಾಗ್ದಾಳಿ ನಡೆಸಿದ ಬೆನ್ನಲ್ಲೇ ಪಾಕಿಸ್ತಾನ ಮಾಜಿ ಪ್ರಧಾನಿ ನವಾಜ್ ಷರೀಫ್ ಪುತ್ರಿ ಮರಿಯಮ್ ನವಾಜ್ ಪತಿ ಕ್ಯಾಪ್ಟನ್ ಸಫ್ದಾರ್ ಅವಾನ್ ಅವರನ್ನು ಕರಾಚಿ ಪೊಲೀಸರು ಸೋಮವಾರ(ಅಕ್ಟೋಬರ್ 19, 2020) ಬಂಧಿಸಿರುವುದಾಗಿ ವರದಿ ತಿಳಿಸಿದೆ.
ನವಾಜ್ ಪುತ್ರಿ ಮರಿಯಮ್ ಪಾಕಿಸ್ತಾನ್ ಮುಸ್ಲಿಮ್ ಲೀಗ್ (ನವಾಜ್) ಪಕ್ಷದ ಹಿರಿಯ ನಾಯಕಿಯಾಗಿದ್ದು, ಕರಾಚಿ ಪೊಲೀಸರು ಹೋಟೆಲ್ ಕೋಣೆಯ ಬಾಗಿಲನ್ನು ಮುರಿದು, ತನ್ನ ಪತಿ ಕ್ಯಾಪ್ಟನ್ ಸಫ್ದಾರ್ ಅವರನ್ನು ಬಂಧಿಸಿರುವುದಾಗಿ ದೂರಿದ್ದಾರೆ.
ಪಾಕಿಸ್ತಾನ ಪ್ರಧಾನಿ ಇಮ್ರಾನ್ ವಿರುದ್ಧ ವಿರೋಧ ಪಕ್ಷಗಳು ಆಯೋಜಿಸಿದ್ದ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಪಾಲ್ಗೊಂಡ ನಂತರ ಮರಿಯ್ ಪತಿಯನ್ನು ಬಂಧಿಸಿರುವ ಘಟನೆ ನಡೆದಿದೆ. ಸಮಾವೇಶದಲ್ಲಿ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯ ಬಿಲಾವಲ್ ಭುಟ್ಟೋ ಕೂಡಾ ಹಾಜರಾಗಿರುವುದಾಗಿ ವರದಿ ವಿವರಿಸಿದೆ.
ಇದನ್ನೂ ಓದಿ:ಅತ್ಯುನ್ನತ ದರ್ಜೆಯ ಇನ್ನೊಂದು ಫೋನ್; ಒನ್ ಪ್ಲಸ್ ಕಡಿಮೆ ಮೈನಸ್!
ಬೃಹತ್ ರಾಲಿಯಲ್ಲಿ ಮಾತನಾಡಿದ್ದ ಮರಿಯಮ್ ಇಮ್ರಾನ್ ಖಾನ್ ವಿರುದ್ಧ ವಾಗ್ದಾಳಿ ನಡೆಸಿದ್ದು, ತನ್ನ ಸರ್ಕಾರದ ಆಡಳಿತ ವೈಫಲ್ಯಗಳನ್ನು ಮುಚ್ಚಿಹಾಕಿಕೊಳ್ಳಲು ಇಮ್ರಾನ್ ಖಾನ್ ಪಾಕ್ ಸೇನೆಯ ಹಿಂದೆ ಅಡಗಿಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ವಿಪಕ್ಷಗಳು ಉತ್ತರ ಕೊಡಿ ಒಂದು ಒತ್ತಾಯಿಸಿದಾಗ ನೀವು (ಇಮ್ರಾನ್) ಪಾಕ್ ಸೇನೆಯ ಹಿಂದೆ ಅಡಗಿಕೊಂಡಿರುತ್ತೀರಿ. ನೀವೊಬ್ಬ ಹೇಡಿ! ನೀವು ಸೇನೆಗೆ ಅಪಖ್ಯಾತಿ ತರುತ್ತಿದ್ದೀರಿ. ನಿಮ್ಮ ವೈಫಲ್ಯ ಮುಚ್ಚಿಹಾಕಿಕೊಳ್ಳಲು ಸೇನೆಯನ್ನು ಬಳಸಿಕೊಳ್ಳುತ್ತಿದ್ದೀರಿ. ನಿಮಗೆ ಈ ಅಧಿಕಾರ ಕೊಟ್ಟವರು ಯಾರು? ಎಂದು ಮರಿಯಮ್ ಪ್ರಶ್ನಿಸಿದ್ದರು.