ಮೋಹನ್ ಗೌಡ ನಟರಾಗಬೇಕೆಂಬ ಆಸೆಯಿಂದ ಚಿತ್ರರಂಗಕ್ಕೆ ಬಂದವರಂತೆ. ಹಾಗೆ ಸಿನಿಮಾ ಮಾಡಬೇಕೆಂದು ಗಾಂಧಿನಗರ ತುಂಬಾ ಓಡಾಡಿದ್ದಾರೆ. ಕೊನೆಗೆ ಅವರಿಗೆ ಗೊತ್ತಾಗಿದೆ, ತಾನು ಬೇರೆಯವರನ್ನು ನಂಬಿಕೊಂಡರೆ ಸಿನಿಮಾ ಮಾಡಲು ಸಾಧ್ಯವಿಲ್ಲ ಎಂದು. ಅದು ಗೊತ್ತಾಗುವ ಹೊತ್ತಿಗೆ ಅವರು ಒಂದು ಕೋಟಿ ರೂಪಾಯಿಯನ್ನು ಕಳೆದುಕೊಂಡಾಗಿದೆ. ಹೀಗೆ ಬೇಸರಿಸಿಕೊಂಡು ಚಿತ್ರರಂಗದಿಂದ ವಾಪಾಸ್ ಹೋಗಿ ಬಿಝಿನೆಸ್ ಸೇರಿದಂತೆ ತನ್ನದೇ ಕೆಲಸ ಕಾರ್ಯಗಳಲ್ಲಿ ಬಿಝಿಯಾಗಿದ್ದ ಮೋಹನ್, ಒಂದು ನಿರ್ಧಾರದೊಂದಿಗೆ ಚಿತ್ರರಂಗಕ್ಕೆ ಮರಳಿದ್ದಾರೆ. ನಟನೆಯ ಆಸೆ ಬಿಟ್ಟು ನಿರ್ದೇಶನ ಮಾಡಬೇಕೆಂದು. ಅದರಂತೆ ಈಗ ಅವರ ಚೊಚ್ಚಲ ಚಿತ್ರ ಸಿದ್ಧವಾಗಿದೆ. ಅದು “19′.
ಮೋಹನ್ ಗೌಡ ಅವರು ನಿರ್ದೇಶಿಸಿರುವ “19′ ಚಿತ್ರ ಚಿತ್ರೀಕರಣ ಪೂರೈಸಿದ್ದು, ಇತ್ತೀಚೆಗೆ ಆಡಿಯೋ ಬಿಡುಗಡೆಯಾಗಿದೆ. ಎಲ್ಲಾ ಓಕೆ, “19′ ಎಂದರೇನು ಎಂದು ನೀವು ಕೇಳಬಹುದು. ನಿರ್ದೇಶಕ ಮೋಹನ್ ಹೇಳುವಂತೆ, ಇದೊಂದು ಹಾರರ್ ಸಿನಿಮಾವಾಗಿದ್ದು, ಮೂರು ದಿನಗಳಲ್ಲಿ ಈ ಕಥೆ ನಡೆಯುತ್ತದೆಯಂತೆ. ಅದರಲ್ಲಿ 19 ಪ್ರಮುಖ ದಿನವಾಗಿದ್ದರಿಂದ ಚಿತ್ರಕ್ಕೆ “19′ ಎಂದು ಇಡಲಾಗಿದೆ ಎಂಬುದು ಮೋಹನ್ ಮಾತು. ಅಂದಹಾಗೆ, ಈ ಚಿತ್ರದ ನಿರ್ಮಾಪಕರು ಕೂಡಾ ಅವರೇ.
“ನನಗೆ ಯಾವುದೇ ನಿರ್ದೇಶಕರ ಜೊತೆ ಕೆಲಸ ಮಾಡಿದ ಅನುಭವಿಲ್ಲ. ಒಂದಷ್ಟು ಕೆಟ್ಟ ಜನರನ್ನು ನಂಬಿ 1 ಕೋಟಿ ರೂಪಾಯಿ ಕಳೆದುಕೊಂಡೆ. ಈಗ ನಾನೇ ಸಿನಿಮಾ ಮಾಡಿದ್ದೇನೆ. ಕಥೆಗೆ ಸುಮಾರು 13 ತಿಂಗಳು ತೆಗೆದುಕೊಂಡಿದ್ದೇನೆ. ಟ್ರಯಲ್ ಅಂಡ್ ಎರರ್ ಮೆಥಡ್‌ನಲ್ಲಿ ಈ ಸಿನಿಮಾ ಮಾಡಿದ್ದೇನೆ. ಇದೊಂದು ಹಾರರ್ ಚಿತ್ರವಾಗಿದ್ದು, ಪ್ರಯೋಗಾತ್ಮಕ ಅಂಶಗಳೊಂದಿಗೆ ಮೂಡಿಬಂದಿದೆ’ ಎನ್ನುವುದು ಮೋಹನ್ ಗೌಡ ಮಾತು. ಸ್ಮಿತಾ ಉಚ್ಚಿಲ್ ಚಿತ್ರದ ಮೇಕಪ್ ವಿಭಾಗದಲ್ಲಿ ಕೆಲಸ ಮಾಡಿದ್ದು, ಮೇಕಪ್ ಭಿನ್ನವಾಗಿದೆಯಂತೆ. ಚಿತ್ರದಲ್ಲಿ ಕೃಷ್ಣ ಪ್ರಮುಖ ಪಾತ್ರ ಮಾಡಿದ್ದು, ಚಿತ್ರದಲ್ಲಿ ನಾಯಕಿನಾ ಚೆನ್ನಾಗಿ ಲವ್ ಮಾಡು ಎಂದಷ್ಟೇ ಹೇಳಿದರಂತೆ. ಚಿತ್ರದ ಹಾಡೊಂದರಲ್ಲಿ ಆದಿ ಲೋಕೇಶ್ ಕಾಣಿಸಿಕೊಂಡಿದ್ದಾರೆ.
ಉಳಿದಂತೆ ಕಥೆ ಬಗ್ಗೆ ಕೇಳಿದರೆ ಸಸ್ಪೆನ್ಸ್ ಎಂಬ ಉತ್ತರ ಅವರಿಂದ ಬರುತ್ತದೆ. ಚಿತ್ರಕ್ಕೆ ಸಂಗೀತ ನೀಡಿದ ಮಿಥು, ಸಾಹಿತ್ಯ ಬರೆದ ವಿಜಯ್ ಸೇರಿದಂತೆ ಚಿತ್ರತಂಡ ತಮ್ಮ ಅನುಭವ ಹಂಚಿಕೊಂಡಿತು.