ಹೊಸದಿಲ್ಲಿ: ಕನ್ವರ್ ಯಾತ್ರೆಯ ಮಾರ್ಗದಲ್ಲಿ ಉತ್ತರ ಪ್ರದೇಶ ಮತ್ತು ಉತ್ತರಾಖಂಡದ ‘ನಾಮಫಲಕ’ ಆದೇಶದ ನಂತರ, ಬಿಜೆಪಿ ಆಡಳಿತವಿರುವ ಉಜ್ಜಯಿನಿ ಮುನ್ಸಿಪಲ್ ಕಾರ್ಪೊರೇಶನ್ ಈಗ ಅಂಗಡಿ ಮಾಲೀಕರಿಗೆ ತಮ್ಮ ಸಂಸ್ಥೆಗಳ ಹೊರಗೆ ತಮ್ಮ ಹೆಸರು ಮತ್ತು ಮೊಬೈಲ್ ಸಂಖ್ಯೆಗಳನ್ನು ಪ್ರದರ್ಶಿಸಲು ಸೂಚಿಸಿದೆ.
ಉಜ್ಜಯಿನಿ ಮೇಯರ್ ಮುಖೇಶ್ ತತ್ವಾಲ್ ಅವರ ಆದೇಶದಲ್ಲಿ ಉಲ್ಲಂಘಿಸುವವರು ಮೊದಲ ಅಪರಾಧಕ್ಕೆ 2,000 ರೂಪಾಯಿ ಮತ್ತು ಎರಡನೇ ಬಾರಿ ಈ ಆದೇಶವನ್ನು ಧಿಕ್ಕರಿಸಿದರೆ 5,000 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ ಎಂದು ಸೂಚಿಸಿದ್ದಾರೆ.
ಈ ಆದೇಶವು ಸುರಕ್ಷತೆ ಮತ್ತು ಪಾರದರ್ಶಕತೆಯನ್ನು ಖಾತ್ರಿಪಡಿಸುವ ಗುರಿಯನ್ನು ಹೊಂದಿದೆ. ಮುಸ್ಲಿಂ ಅಂಗಡಿ ಮಾಲಿಕರನ್ನು ಗುರಿಯಾಗಿಸುವ ಉದ್ದೇಶವನ್ನು ಹೊಂದಿಲ್ಲ ಎಂದು ಮೇಯರ್ ಹೇಳಿದರು.
ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಅವರ ತವರೂರು ಉಜ್ಜಯಿನಿಯು ತನ್ನ ಪವಿತ್ರವಾದ ಮಹಾಕಾಲ್ ದೇವಾಲಯಕ್ಕೆ ಹೆಸರುವಾಸಿಯಾಗಿದೆ. ಸೋಮವಾರದಿಂದ ಪ್ರಾರಂಭವಾಗುವ ಸಾವಾನ್ ಮಾಸದಲ್ಲಿ ಪ್ರಪಂಚದಾದ್ಯಂತದ ಭಕ್ತರನ್ನು ಉಜ್ಜಯಿನಿ ಆಕರ್ಷಿಸುತ್ತದೆ.
ಸೆಪ್ಟೆಂಬರ್ 26, 2002 ರಂದೇ ಅಂಗಡಿಯವರಿಗೆ ತಮ್ಮ ಹೆಸರನ್ನು ಪ್ರದರ್ಶಿಸಲು ಉಜ್ಜಯಿನಿಯ ಮೇಯರ್-ಇನ್-ಕೌನ್ಸಿಲ್ ಪ್ರಸ್ತಾವನೆಯನ್ನು ಅನುಮೋದಿಸಲಾಗಿದೆ. ಕಾರ್ಪೊರೇಷನ್ ಹೌಸ್ ನಂತರ ಅದನ್ನು ಆಕ್ಷೇಪಣೆಗಳು ಮತ್ತು ಔಪಚಾರಿಕತೆಗಳಿಗಾಗಿ ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದು ತತ್ವಾಲ್ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದರು.
“ಎಲ್ಲಾ ವಿಧಿವಿಧಾನಗಳು ಈಗಾಗಲೇ ಪೂರ್ಣಗೊಂಡಿವೆ. ನಾಮಫಲಕಗಳು ಒಂದೇ ಗಾತ್ರ ಮತ್ತು ಬಣ್ಣದಲ್ಲಿ ಇರಬೇಕೆಂಬ ನಿಯಮದಿಂದ ಅಳವಡಿಕೆ ವಿಳಂಬವಾಯಿತು. ಈಗ ನಾವು ಈ ನಿಯಮಗಳನ್ನು ಸಡಿಲಿಸಿದ್ದೇವೆ. ಅಂಗಡಿಕಾರರ ಹೆಸರು ಮತ್ತು ಮೊಬೈಲ್ ಸಂಖ್ಯೆಗಳನ್ನು ಪ್ರದರ್ಶಿಸಿದರೆ ಸಾಕು” ಎಂದು ಅವರು ಹೇಳಿದರು.