ಕೊಪ್ಪಳ: ಜಿಲ್ಲೆಯ ಮೂರು ತಾಲೂಕಿನ 73 ಗ್ರಾಮ ಪಂಚಾಯಿತಿಗಳ ಸದಸ್ಯ ಸ್ಥಾನಗಳಿಗೆ ಚುನಾವಣೆ ಶಾಂತಿಯುತವಾಗಿ ಮುಗಿದೆ. ಈ ಬೆನ್ನಲ್ಲೇ ಅಭ್ಯರ್ಥಿಗಳು ಹಾಗೂ ಜನತೆ ಸೋಲು-ಗೆಲುವಿನ ಕುರಿತು ಲೆಕ್ಕಾಚಾರಹಾಕುತ್ತಿದ್ದಾರೆ. ಹಳ್ಳಿಗಳಲ್ಲಿ ಯಾರು ಗೆಲ್ಲಲಿದ್ದಾರೆ? ಯಾರು ಸೋಲಲಿದ್ದಾರೆ ಎನ್ನುವ ಚರ್ಚೆಗಳೇ ನಡೆದಿವೆ.
ಜಿಲ್ಲಾದ್ಯಂತ ಮೊದಲ ಹಂತದಲ್ಲಿ 73 ಗ್ರಾಮ ಪಂಚಾಯಿತಿಯಲ್ಲಿ 1,210 ಸದಸ್ಯಸ್ಥಾನಗಳಿಗೆ ಚುನಾವಣೆ ನಡೆಯಿತು. ಅಂತಿಮವಾಗಿ 3,331 ಅಭ್ಯರ್ಥಿಗಳು ಕಣದಲ್ಲಿದ್ದು, ಚುನಾವಣೆಯನ್ನುಎದುರಿಸಿದ್ದಾರೆ. ಮತದಾನ ನಡೆದ ಬೆನ್ನಲ್ಲೇ ನೆಮ್ಮದಿಯನಿಟ್ಟುಸಿರು ಬಿಟ್ಟಿದ್ದ ಅಭ್ಯರ್ಥಿಗಳು ಸೋಲು, ಗೆಲುವಿನ ಲೆಕ್ಕಾಚಾರ ಮಾಡುತ್ತಿದ್ದು, ಎಲ್ಲವನ್ನೂ ತಾಳೆ ಹಾಕುತ್ತಿದ್ದಾರೆ.
ಮೊದಲ ಹಂತದ ಮೂರು ತಾಲೂಕಿನ ಹಳ್ಳಿಗಳಲ್ಲಿ ಚುನಾವಣೆ ಮುಗಿದರೂ ಜನತೆ ಇನ್ನೂ ಚುನಾವಣೆಯ ಗುಂಗಿನಿಂದ ಹೊರಬಂದಿಲ್ಲ. ಮೊದಲೆಲ್ಲ ಕೊರೊನಾಕುರಿತಂತೆ ಹೆಚ್ಚು ಮಾತನಾಡುತ್ತಿದ್ದ ಜನತೆ ಈಗ ಮಾತೆತ್ತಿದ್ದರೆ ಚುನಾವಣೆ ಹೇಗಾ ಗಿದೆಯಪ್ಪಾ.. ಕೆಲಸ ಆಗುತ್ತಾ.. ಓಟ್ ಸರಿಯಾಗಿ ಆಗಿದ್ದಾವಾ..? ಎಂದು ಅಭ್ಯರ್ಥಿಗಳನ್ನು ಕೇಳುತ್ತಿದ್ದಾರೆ. ಇನ್ನೂ ಬಿಜೆಪಿ-ಕಾಂಗ್ರೆಸ್ ಬೆಂಬಲಿತರೆಂದು ಹೇಳಿಕೊಳ್ಳುವ ಅಭ್ಯರ್ಥಿಗಳು ಸಹಿತ ತಮ್ಮ ವಾರ್ಡ್ ನಲ್ಲಿ ವಿವಿಧ ಸಮಾಜಗಳ ಮತಗಳ ಕ್ರೋಢೀಕರಣದ ಕುರಿತು ಲೆಕ್ಕ ಹಾಕುತ್ತಿದ್ದಾರೆ.
ನಮಗೆ ಯಾವ ಸಮಾಜದ ಮತಗಳು ಪ್ಲಸ್ ಆಗಿವೆ. ಯಾವ ಸಮಾಜದ ಮತಗಳು ಮೈನಸ್ ಆಗಿವೆ. ಯಾರಿಂದ ನಮಗೆ ಹೆಚ್ಚು ಓಟ್ ಬಂದಿವೆ. ಯಾರು ನಮಗೆ ನೆಗಟಿವ್ ಆಗಿ ಕೆಲಸ ಮಾಡಿದ್ದಾರೆ. ಯಾರೆಲ್ಲ ನಮಗಾಗಿ ಚೆನ್ನಾಗಿ ಕೆಲಸ ಮಾಡಿದ್ದಾರೆಂಬ ಚರ್ಚೆಗಳು ನಡೆಯುತ್ತಿವೆ. ಪುನಃ ಸ್ಪರ್ಧಿಸಿದ ಹಿಂದಿನ ಸದಸ್ಯರು ನಾನು ವಾರ್ಡ್ ನಲ್ಲಿ ಕೆಲವೊಂದು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಅದೆಲ್ಲವನ್ನು ನೋಡಿದ ಮತದಾರರು ನನ್ನ ಕೈ ಹಿಡಿಯಲಿದ್ದಾರೆ. ಆ ವಿಶ್ವಾಸ ನನಗಿದೆ ಎಂದೆನ್ನುತ್ತಿದ್ದರೆ, ಕೆಲವರು ನಮ್ಮ ವಾರ್ಡ್‌ನಲ್ಲಿ ಯಾರೂ ಕೆಲಸ ಮಾಡಿಲ್ಲ. ಅಭಿವೃದ್ಧಿ ಮಾಯವಾಗಿದೆ. ಸುಮ್ಮನೆ ಅವರಿಗೆ ಓಟ ಹಾಕಿದ್ದೆವು. ಈ ಬಾರಿ ಬೇರೆಯ ಅಭ್ಯರ್ಥಿಗೆ ಮತದಾನ ಮಾಡಿದ್ದೇವೆ. ಅವರು ಗೆಲ್ಲುವ ವಿಶ್ವಾಸವಿದೆ ಎಂದು ಚರ್ಚೆ ಮಾಡುತ್ತಿದ್ದಾರೆ. ಇನ್ನೂ ಬಿಜೆಪಿ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಫಲಿತಾಂಶದ ಬಗ್ಗೆ ಹೆಚ್ಚಾಗಿ ಚರ್ಚೆಗಳು ನಡೆದಿವೆ. ಇಂತಿಷ್ಟು ಸ್ಥಾನಗಳು ನಮ್ಮ ಬೆಂಬಲಿತರು ಗೆಲ್ಲಲ್ಲಿದ್ದಾರೆ ಎಂದು ಬಿಜೆಪಿ ಮುಖಂಡರು ನಿರೀಕ್ಷೆಯನ್ನಿಟ್ಟರೆ, ನಮ್ಮ ಅಭ್ಯರ್ಥಿಗಳುಗೆಲುವು ಸಾಧಿ ಸಲಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ವಿಶ್ವಾಸ ವ್ಯಕ್ತಪಡಿಸುತ್ತಾರೆ.
ಇನ್ನೂ ಯಾರ ನೆರವಿಲ್ಲದೇ ಸ್ಪರ್ಧಿಸಿರುವ ಅಭ್ಯರ್ಥಿಗಳು ಸಹಿತ ನಮಗೆ ಯುವ ಪಡೆಯ ಸಹಕಾರವಿದೆ. ಅವರೇ ನಿಂತು ಚುನಾವಣೆಯಲ್ಲಿ ಅಚ್ಚುಕಟ್ಟಾಗಿ ಕೆಲಸ ಮಾಡಿದ್ದಾರೆ. ನನಗೆ ಹೆಚ್ಚಿನ ಮತ ಬರುವಲ್ಲಿ ಯುವಕರ ಪಾತ್ರವೂ ಹೆಚ್ಚಿದೆ. ಹೀಗಾಗಿ ಗೆಲವು ನಮ್ಮದೇ ಎಂದು ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಿನಲ್ಲಿ ಜಿಲ್ಲೆಯಲ್ಲಿ ಅಭ್ಯರ್ಥಿಗಳು ಸೋಲು-ಗೆಲುವಿನಲೆಕ್ಕಾಚಾರದಲ್ಲಿ ತಲ್ಲೀನರಾಗಿದ್ದರೆ, ಮತದಾರ ಮಾತ್ರಇಂತಹ ಅಭ್ಯರ್ಥಿಗಳೇ ಗೆಲ್ಲಲಿದ್ದಾರೆ ಎನ್ನುವ ವಿಶ್ವಾಸವ್ಯಕ್ತಪಡಿಸುತ್ತಿದ್ದಾನೆ. ಡಿ. 30ರಂದು ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳ ಭವಿಷ್ಯ ಗೊತ್ತಾಗಲಿದೆ.
-ದತ್ತು ಕಮ್ಮಾರ