ಲಕ್ನೋ: ಮಸೀದಿಗಳು, ಚರ್ಚುಗಳು, ದೇವಸ್ಥಾನಗಳು ಹಾಗೂ ಯಾವುದೇ ಧಾರ್ಮಿಕ ಸಮಾರಂಭಗಳಲ್ಲಿ ಧ್ವನಿವರ್ಧಕಗಳನ್ನು ಸುತ್ತಲಿನ ಜನರಿಗೆ ತೊಂದರೆಯಾಗದಂತೆ ಬಳಸಬೇಕೆಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬುಧವಾರ ಹೊರಡಿಸಿದ ಆದೇಶ, ಆ ರಾಜ್ಯದ ಎಲ್ಲಾ ಕಡೆ ಗುರುವಾರದಿಂದಲೇ ಜಾರಿಯಾಗಿದೆ.
ಅನೇಕ ಮಸೀದಿಗಳು ಹಾಗೂ ದೇವಸ್ಥಾನಗಳ ಮೇಲೆ ಅಳವಡಿಸಲಾಗಿದ್ದ ಸ್ಪೀಕರ್‌ಗಳನ್ನು ಆಯಾ ಮಸೀದಿ ಹಾಗೂ ದೇಗುಲದ ಆಡಳಿತ ಮಂಡಳಿಗಳು ಸ್ವಯಂಪ್ರೇರಿತವಾಗಿ ತೆರವುಗೊಳಿಸಿವೆ. ಜಗದ್ವಿಖ್ಯಾತ ಪುಣ್ಯಕ್ಷೇತ್ರಗಳಾದ ಅಯೋಧ್ಯೆ, ಮಥುರಾ ಹಾಗೂ ಗೋರಖ್‌ಪುರದ ಗೋರಖ್‌ನಾಥ ದೇವಸ್ಥಾನಗಳಲ್ಲೂ ಸ್ಪೀಕರ್‌ಗಳು ಮೌನಕ್ಕೆ ಶರಣಾಗಿವೆ.
ಮಥುರಾದ ಶ್ರೀ ಕೃಷ್ಣ ಜನ್ಮಭೂಮಿ ಮಂದಿರದಲ್ಲಿ ಪ್ರತಿನಿತ್ಯ ಬೆಳಗ್ಗೆ 5ರಿಂದ 6ರವರೆಗೆ ನಡೆಯುತ್ತಿದ್ದ ಮಂಗಳಾರತಿಯನ್ನು ಮಂದಿರದ ಮೇಲೆ ಅಳವಡಿಸಲಾಗಿದ್ದ ಸ್ಪೀಕರ್‌ಗಳ ಮೂಲಕ ಬಿತ್ತರಿಸಲಾಗುತ್ತಿತ್ತು. ಗುರುವಾರದಂದು ಮಂಗಳಾರತಿ ನಡೆಯಿತಾದರೂ ಸ್ಪೀಕರ್‌ಗಳ ಮೂಲಕ ಅದನ್ನು ಪ್ರಸಾರ ಮಾಡಿಲ್ಲ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
ಗೋರಖ್‌ನಾಥ್ ದೇವಸ್ಥಾನದಲ್ಲಿ ಮುಂಜಾನೆ ನಡೆದ ಪ್ರಾರ್ಥನೆಯನ್ನು ಸ್ಪೀಕರ್‌ಗಳ ಮೂಲಕ ಬಿತ್ತರಿಸಲಾಯಿತಾದರೂ, ಶಬ್ದವು ದೇಗುಲದ ಪ್ರಾಂಗಣ ದಾಟದಂತೆ ಎಚ್ಚರಿಕೆ ವಹಿಸಲಾಗಿದೆ.
ಅಯೋಧ್ಯೆಯಲ್ಲಿರುವ ದೇಗುಲಗಳು ಹಾಗೂ ಮಸೀದಿಗಳಲ್ಲಿಯೂ ಶಬ್ದ ಹೆಚ್ಚಾಗದಂತೆ ನೋಡಿಕೊಳ್ಳಲಾಗಿದೆ. ಮೀರತ್‌ನಲ್ಲಿರುವ ಮಸೀದಿ, ಪ್ರಯಾಗ್‌ರಾಜ್‌ನ ಶಿಯಾ ಜಾಮಾ ಮಸೀದಿಯಲ್ಲೂ ಆಜಾನ್‌ಗಳನ್ನು ಮಂದ ಧ್ವನಿಯಲ್ಲಿ ಮೊಳಗಿಸಲಾಗಿದೆ ಎಂದು ಅಲ್ಲಿನ ಮುಖ್ಯಸ್ಥರು ಹೇಳಿದ್ದಾರೆ.