Advertisement
ಕಾರ್ಯಕಾರಿ ಸಮಿತಿ ಸಭೆಯಲ್ಲಿ ರಾಹುಲ್ ಗಾಂಧಿ ಅವರು, ಪಕ್ಷದ ನಾಯಕತ್ವ ಬದಲಾವಣೆಗೆ ಒತ್ತಾಯಿಸಿ ಪತ್ರ ಬರೆದಿರುವ 23 ಮಂದಿ ಹಿರಿಯ ನಾಯಕರು ಬಿಜೆಪಿ ಜತೆ ಒಪ್ಪಂದ ಮಾಡಿಕೊಂಡಿದ್ದಾರೆಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ಸುದ್ದಿ ಹೊರಬೀಳುತ್ತಿದ್ದಂತೆಯೇ ಹಿರಿಯ ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಜಾದ್, ಕಪಿಲ್ ಸಿಬಲ್ ಟ್ವೀಟ್ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದರು.
Related Articles
Advertisement
ಸೋನಿಯಾಗೆ ಬರೆದ ಪತ್ರದಲ್ಲಿ ಏನಿತ್ತು?
ಕಾಂಗ್ರೆಸ್ ಪಕ್ಷದ ನಾಯಕತ್ವ ಸೇರಿದಂತೆ ಆಮೂಲಾಗ್ರ ಬದಲಾವಣೆ ಆಗಬೇಕಿದೆ ಎಂದು ಆಗ್ರಹಿಸಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಮೊಯ್ಲಿ, ಕಪಿಲ್ ಸಿಬಲ್ ಸೇರಿದಂತೆ 23 ಮಂದಿ ಹಿರಿಯ ಕಾಂಗ್ರೆಸ್ ನಾಯಕರು ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದರು. ಪಕ್ಷಕ್ಕೆ ಪೂರ್ಣ ಪ್ರಮಾಣದ, ಸಕ್ರಿಯ ನಾಯಕತ್ವ ಬೇಕು. ನಾಯಕರು ಪಕ್ಷದ ಕಚೇರಿಯಲ್ಲಿ ಸದಾ ಲಭ್ಯವಾಗಬೇಕು.
ಆಂತರಿಕ ಚುನಾವಣೆ ಪಾರದರ್ಶಕ, ಮುಕ್ತ ಮತ್ತು ಪ್ರಜಾಪ್ರಭುತ್ವ ರೀತಿಯಲ್ಲಿ ನಡೆಸಲು ಸ್ವತಂತ್ರ ಸಮಿತಿ ರಚಿಸಬೇಕು. ಪಕ್ಷದಲ್ಲಿ ಆಡಳಿತ ವಿಕೇಂದ್ರೀಕರಣವಾಗಬೇಕು, ರಾಜ್ಯ ಘಟಕಗಳ ಬಲವರ್ಧನೆ ಆಗಬೇಕು ಎಂಬುದು ಸೇರಿದಂತೆ ಹಲವು ಪ್ರಮುಖ ಬೇಡಿಕೆಗಳನ್ನು ಇಟ್ಟಿದ್ದರು.
ಕಾಂಗ್ರೆಸ್ ಒಡೆದ ಮನೆಯಾಗಿದೆಯಾ?
ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೀನಾಯ ಸೋಲನ್ನು ಅನುಭವಿಸಿದ ನಂತರ ಅದರ ಹೊಣೆ ಹೊತ್ತು ರಾಹುಲ್ ಗಾಂಧಿ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆ ಬಳಿಕ ಸಾಕಷ್ಟು ಒತ್ತಡ ಬಂದರೂ ಕೂಡಾ ರಾಹುಲ್ ಅದನ್ನು ಒಪ್ಪಿಕೊಂಡಿರಲ್ಲವಾಗಿತ್ತು. ತದನಂತರ ಸೋನಿಯಾ ಗಾಂಧಿಯೇ ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ನಡೆಸುತ್ತಿದ್ದರು. ಇದೀಗ ಅಧ್ಯಕ್ಷಗಿರಿಯ ಅವಧಿ ಪೂರ್ಣಗೊಂಡ ನಿಟ್ಟಿನಲ್ಲಿ ಪೂರ್ಣಾವಧಿ ಅಧ್ಯಕ್ಷರ ಆಯ್ಕೆಗಾಗಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚರ್ಚೆ ನಡೆಸಿದೆ.
ಕಾಂಗ್ರೆಸ್ ನ ಒಂದು ಗುಂಪು ಸೋನಿಯಾ ಹಾಗೂ ರಾಹುಲ್ ಪರ ಬ್ಯಾಟಿಂಗ್ ಬೀಸುತ್ತಿದೆ. ಮತ್ತೊಂದೆಡೆ ಮತ್ತೊಂದು ಗುಂಪು ಗಾಂಧಿ ಕುಟುಂಬ ಹೊರತುಪಡಿಸಿ ಹೊಸ ಮುಖವನ್ನು ಅಧ್ಯಕ್ಷಗಾದಿಯಲ್ಲಿ ಕೂರಿಸುವ ಇರಾದೆ ಹೊಂದಿದೆ. ಏತನ್ಮಧ್ಯೆ ಇತ್ತೀಚೆಗಷ್ಟೇ ಕಾಂಗ್ರೆಸ್ ಪಕ್ಷದ ಯುವ ನಾಯಕನಂತಿದ್ದ ಸಚಿನ್ ಪೈಲಟ್ ಕೂಡಾ ಪಕ್ಷದ ಹಿರಿಯ ನಾಯಕ ಗೆಹ್ಲೋಟ್ ಜತೆ ಮುನಿಸಿಕೊಂಡು ಬಂಡಾಯ ಎದ್ದು ಮತ್ತೆ ಪಕ್ಷಕ್ಕೆ ವಾಪಸ್ ಆಗಿದ್ದಾರೆ. ಮತ್ತೊಬ್ಬ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಈಗಾಗಲೇ ಪಕ್ಷ ತೊರೆದಿದ್ದಾರೆ.
ಕಾಂಗ್ರೆಸ್ ಪಕ್ಷದೊಳಗೆ ರಾಹುಲ್ ಪರ ಹಾಗೂ ವಿರೋಧ ಬಣ, ಮತ್ತೊಂದೆಡೆ ಸೋನಿಯಾ ಪರ ಹಾಗೂ ವಿರೋಧ ಬಣ ಸಕ್ರಿಯವಾಗಿರುವುದರಿಂದ ಸುಮಾರು 130 ವರ್ಷದ ಇತಿಹಾಸ ಹೊಂದಿರುವ ಕಾಂಗ್ರೆಸ್ ಪಕ್ಷಕ್ಕೆ ಸಮರ್ಥ ನಾಯಕನ ಆಯ್ಕೆ ಕಗ್ಗಂಟಾಗಿ ಪರಿಣಮಿಸಿದೆ. ಈಗಲೂ ಗಾಂಧಿ ಕುಟುಂಬದ ನಿಷ್ಠೆಯನ್ನು ತೋರ್ಪಡಿಸುವ ನಿಟ್ಟಿನಲ್ಲಿ ಪಕ್ಷಕ್ಕೆ ಗಾಂಧಿ ಕುಟುಂಬ ಅನಿವಾರ್ಯ ಎಂಬುದಾಗಿ ಬಿಂಬಿಸುತ್ತಿದ್ದಾರೆ.
ಅಂತೂ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸೋನಿಯಾ ಗಾಂಧಿ ರಾಜೀನಾಮೆ ಕೊಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಅದರ ಬೆನ್ನಲ್ಲೇ ಸೋನಿಯಾ ಗಾಂಧಿಯೇ ಅಧ್ಯಕ್ಷರಾಗಿ ಮುಂದುವರಿಯಬೇಕೆಂದು ಸಿಡಬ್ಲ್ಯುಸಿ ಸಭೆಯಲ್ಲಿ ಮನಮೋಹನ್ ಸಿಂಗ್ ಸೇರಿದಂತೆ ಹಲವು ಹಿರಿಯ ಮುಖಂಡರು ಒತ್ತಾಯಿಸಿದ್ದಾರೆ. ಇತ್ತ ಕರ್ನಾಟಕದ ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿ ಬೆನ್ನಿಗೆ ನಿಂತಿದ್ದಾರೆ. ಅಂದರೆ ಕಾಂಗ್ರೆಸ್ ತಳಮಟ್ಟದಿಂದ ಹಿಡಿದು ಹೈಕಮಾಂಡ್ ವರೆಗೂ ನಾಯಕತ್ವದ ವಿಚಾರದಲ್ಲಿ ಒಡೆದ ಮನೆಯಂತಾಗಿದೆ ಎಂಬುದಕ್ಕೆ ಮತ್ತಷ್ಟು ಇಂಬು ನೀಡುವಂತಿದೆ.!