ಮಂಡ್ಯ: ಬಾಲ್ಯ ವಿವಾಹ ಮಾಡದಂತೆ ಅಧಿಕಾರಿಗಳ ಎಚ್ಚರಿಕೆಯ ನಡುವೆಯೂ ಪೋಷಕರು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಗೆ ಗುಟ್ಟಾಗಿ ಮದುವೆ ಮಾಡಿ ಪರೀಕ್ಷೆ ಬರೆಯಲು ತಾಳಿ, ಕಾಲುಂಗುರ ತೆಗೆಸಿ ಕಳುಹಿಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಮಾ.27 ರಂದು ಶ್ರೀರಂಗಪಟ್ಟಣದ ವಿದ್ಯಾರ್ಥಿನಿಗೆ ಕೆ.ಆರ್.ಪೇಟೆ ತಾಲೂಕಿನ ಸಂಬಂಧಿಕ ಯುವಕನೊಂದಿಗೆ ಪೋಷಕರು ಮನೆಯಲ್ಲೇ ಗುಟ್ಟಾಗಿ ಮದುವೆ ಮಾಡಿದ್ದಾರೆ. ನಂತರ ಮಾ.28 ರಂದು ಎಸ್ಸೆಸ್ಸೆಲ್ಸಿ ಪರೀಕ್ಷೆ ಪ್ರಾರಂಭವಾದ ಹಿನ್ನೆಲೆಯಲ್ಲಿ ಬರೆಯಲು ತಾಳಿ ಹಾಗೂ ಕಾಲುಂಗುರ ತೆಗೆಸಿ ಕಳುಹಿಸಿದ್ದಾರೆ.
ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿನಿ ತನ್ನ ಸ್ನೇಹಿತೆಯರಿಗೆ ಮದುವೆ ಬಗ್ಗೆ ಹೇಳಿಕೊಂಡಿದ್ದಳು. ಇದರಿಂದ ಅಪ್ರಾಪ್ತ ವಯಸ್ಕ ವಿದ್ಯಾರ್ಥಿನಿಯ ಮದುವೆಯ ಬಗ್ಗೆ ಸ್ನೇಹಿತೆಯರು ಬಹಿರಂಗಗೊಳಿಸಿದ್ದಾರೆ. ಬಳಿಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಕೂಡಲೇ ಬಾಲಕಿಯನ್ನು ರಕ್ಷಿಸಿದ್ದಾರೆ.
ಮಾ.18ರಂದು ವಿದ್ಯಾರ್ಥಿನಿಗೆ ಬಾಲ್ಯ ವಿವಾಹ ನಿಶ್ಚಯವಾಗಿರುವ ಬಗ್ಗೆ ಅಧಿಕಾರಿಗಳಿಗೆ ದೂರು ಬಂದ ಹಿನ್ನೆಲೆಯಲ್ಲಿ ತಕ್ಷಣ ಅಧಿಕಾರಿಗಳು ಮಾ.18 ಹಾಗೂ 25 ರಂದು ವಿದ್ಯಾರ್ಥಿನಿಯ ಮನೆಗೆ ಭೇಟಿ ನೀಡಿ ಪೋಷಕರಿಗೆ ಮದುವೆ ಮಾಡದಂತೆ ಎಚ್ಚರಿಕೆ ನೀಡಿದ್ದರು. ಅಲ್ಲದೆ, ಬಾಲ್ಯ ವಿವಾಹದಿಂದ ಆಗುವ ತೊಂದರೆಗಳ ಬಗ್ಗೆಯೂ ತಿಳಿ ಹೇಳಲಾಗಿತ್ತು. ಈ ಎಚ್ಚರಿಕೆಯನ್ನು ನಿರ್ಲಕ್ಷಿಸಿರುವ ಬಾಲಕಿಯ ಪೋಷಕರು ಮನೆಯಲ್ಲಿಯೇ ಗುಟ್ಟಾಗಿ ಮಾ.27 ರಂದು ಮದುವೆ ಮಾಡಿದ್ದಾರೆ.
ಸದ್ಯ ಸಂತ್ರಸ್ತ ವಿದ್ಯಾರ್ಥಿನಿಯನ್ನು ಮಂಡ್ಯದ ಬಾಲಮಂದಿರದಲ್ಲಿರಿಸಲಾಗಿದ್ದು, ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಎಲ್ಲ ರೀತಿಯ ಅನುಕೂಲ ಕಲ್ಪಿಸಲಾಗಿದೆ. ಇತ್ತ ಬಾಲ್ಯ ವಿವಾಹ ಮಾಡಿದವರ ವಿರುದ್ಧ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳಿಂದ ಪೊಲೀಸರಿಗೆ ದೂರು ನೀಡಲಾಗಿದ್ದು, ಮದುವೆ ಮಾಡಿದವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಎಸ್.ರಾಜಮೂರ್ತಿ ತಿಳಿಸಿದರು.