ವಾಷಿಂಗ್ಟನ್: ಅಮೆರಿಕದಲ್ಲಿ ಇತ್ತೀಚೆಗೆ ಪ್ರಸಾರಗೊಳ್ಳಲಾರಂಭಿಸಿರುವ, ಭಾರತೀಯ ನಟಿ ಪ್ರಿಯಾಂಕಾ ಚೋಪ್ರಾ ಅಭಿನಯದ “ಕ್ವಾಂಟಿ ಕೊ’ ಆಂಗ್ಲ ಟೆಲಿ ಧಾರಾವಾಹಿ ನಿರ್ಮಾಣ ಸಂಸ್ಥೆಯಾದ ಎಬಿಸಿ ಸ್ಟುಡಿಯೋ, ಭಾರತೀಯರ ಕ್ಷಮೆ ಕೋರಿದೆ. ಮೊದಲ ಸಂಚಿಕೆಯಲ್ಲಿ ಭಾರತೀಯರನ್ನು ಉಗ್ರವಾದಿಗಳೆಂಬಂತೆ ಬಿಂಬಿಸುತ್ತಿರುವುದಕ್ಕೆ ಭಾರೀ ವಿರೋಧ ವ್ಯಕ್ತವಾಗಿದ್ದಕ್ಕೆ ಸಂಸ್ಥೆ ಕ್ಷಮೆ ಕೋರಿದ್ದು, ಇದಕ್ಕೂ ಪ್ರಿಯಾಂಕಾಗೂ ಯಾವುದೇ ಸಂಬಂಧವಿಲ್ಲ. ಈ ಶೋ ಬರೆದಿದ್ದೂ ಅವರಲ್ಲ, ನಿರ್ದೇಶಿಸಿದ್ದೂ ಅವರಲ್ಲ. ಅದೊಂದು ಕಾಲ್ಪನಿಕ ಕಥೆ. ಯಾರಿಗೂ ನೋವುಂಟು ಮಾಡುವ ಉದ್ದೇಶ ನಮಗಿರಲಿಲ್ಲ ಎಂದು ಹೇಳಿದೆ. ಮೊದಲ ಕಂತಿನಲ್ಲಿ, ಎಫ್ಬಿಐನ ಏಜೆಂಟ್ ಆಗಿರುವ ಚೋಪ್ರಾ, ಹಿಂದುತ್ವದ ಉಗ್ರವಾದಿಗಳು ರೂಪಿಸಿದ್ದ ಷಡ್ಯಂತ್ರವನ್ನು ವಿಧ್ವಂಸಗೊಳಿಸುವ ಕಥೆ ತೋರಿಸಲಾಗಿತ್ತು. ಹಿಂದೂ ಉಗ್ರವಾದಿಗಳನ್ನು ಆ ತಂಡದ ಸದಸ್ಯನೊಬ್ಬ ರುದ್ರಾಕ್ಷಿ ಧರಿಸಿದ್ದನ್ನು ಗಮನಿಸಿ ಪತ್ತೆ ಹಚ್ಚುವ ಚಿತ್ರಕತೆ ಹೆಣೆದಿದ್ದನ್ನು ಅನೇಕ ಭಾರತೀಯರು ವಿರೋಧಿಸಿದ್ದರು.