Advertisement

15 ವರ್ಷಗಳ ಬಳಿಕ ಮೂರ್ಕಲ್‌ ರಸ್ತೆಗೆ ಡಾಂಬರು

09:24 PM Jul 16, 2019 | Team Udayavani |

ಎಚ್‌.ಡಿ.ಕೋಟೆ: ಪಟ್ಟಣದಿಂದ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ, ಮೇಟಿಕುಪ್ಪೆ ವನ್ಯಜೀವಿ ವಲಯ ಹಾಗೂ ತಾಲೂಕಿನ ಹತ್ತು ಹಲವು ಗ್ರಾಮಗಳು ಸೇರಿದಂತೆ ಕೊಡಗು ಜಿಲ್ಲೆಯ ಬಾಳಲೇ, ವೀರಾಜಪೇಟೆ, ಕುಟ್ಟ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮೂರ್ಕಲ್‌ ರಸ್ತೆಗೆ ಕೊನೆಗೂ ಡಾಂಬರೀಕರಣ ಭಾಗ್ಯ ದೊರೆತಿದೆ.

Advertisement

ಎಚ್‌.ಡಿ.ಕೋಟೆ ಪಟ್ಟಣದಿಂದ ನಾಗರಹೊಳೆಗೆ ಸಂಪರ್ಕ ಬೆಸೆಯುವ ಮೂರ್ಕಲ್‌ ರಸ್ತೆಯಲ್ಲಿ ಕೆಎಸ್‌ಆರ್‌ಟಿಸಿ ತಾಲೂಕು ಬಸ್‌ ಘಟಕ ಇದ್ದು ಘಟಕದ ನೂರಾರು ಬಸ್‌ಗಳು ಸೇರಿದಂತೆ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. 15 ವರ್ಷಗಳ ಈ ರಸ್ತೆಗೆ ಹಾಕಲಾಗಿದ್ದ ಡಾಂಬರು ಕಿತ್ತು ರಸ್ತೆಯಲ್ಲಿ ದೊಡ್ಡ ದೊಡ್ಡ ಹಳ್ಳ ಕೊಳ್ಳ ಉಂಟಾಗಿ ವಾಹನ ಸವಾರರು ಪರದಾಡಬೇಕಿತ್ತು.

ಇದನ್ನು ಮನಗಂಡಿದ್ದ ಕ್ಷೇತ್ರದ ಮಾಜಿ ಸಂಸದ ಆರ್‌.ಧ್ರುವನಾರಾಯಣ್‌ ಹಾಗೂ ಶಾಸಕ ಅನಿಲ್‌ ಚಿಕ್ಕಮಾದು ಅವರು, ಪಟ್ಟಣದಿಂದ ತಾಲೂಕಿನ ಕಲ್ಲಹಟ್ಟಿ ಗ್ರಾಮದವರೆಗೆ ಸುಮಾರು 12 ಕೋಟಿ ರೂ., ವೆಚ್ಚದ ಸಿಆರ್‌ಎಫ್‌ ಅನುದಾನದಲ್ಲಿ ಸೇರಿಸಿ ರಸ್ತೆಗೆ ನೂತನ ಡಾಂಬರೀಕರಣಕ್ಕೆ ಕಳೆದ ಲೋಕಸಭಾ ಚುನಾವಣೆ ವೇಳೆ ಚಾಲನೆ ನೀಡಿದ್ದರು.

ಕಾಮಗಾರಿಗೆ ಆಕ್ಷೇಪ, ಜನರಿಂದ ತಡೆ: ಕಳೆದ ವಾರದಿಂದ ಕಾಮಗಾರಿ ಪ್ರಾರಂಭವಾಗಿದ್ದು ಗುತ್ತಿಗೆ ಪಡೆದಿರುವ ಗುತ್ತಿಗೆದಾರ ಅಂದಾಜು ಪಟ್ಟಿಯಲ್ಲಿರುವಂತೆ ಕಾಮಗಾರಿ ನಿರ್ವಹಿಸದೇ, ರಸ್ತೆಗೆ ಹಾಕಲಾಗಿದ್ದ ಹಳೆ ಡಾಂಬರನ್ನು ಜೆಸಿಬಿ ಯಂತ್ರದಲ್ಲಿ ಕಿತ್ತು ಅದರ ಮೇಲೆ ರೋಲರ್‌ ಯಂತ್ರದಿಂದ ಡಾಂಬರೀಕರಣಕ್ಕೆ ರಸ್ತೆಯನ್ನು ಸಜ್ಜುಗೊಳಿಸುತ್ತಿರುವುದಕ್ಕೆ ಪಟ್ಟಣದ ನಾಗರಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಾಮಗಾರಿ ಅಂದಾಜು ಪಟ್ಟಿಯಂತೆ ನಿರ್ವಹಿಸಿ ಇಲ್ಲವೇ ರಸ್ತೆ ಡಾಂಬರೀಕರಣಕ್ಕೆ ನಾವು ಬಿಡುವುದಿಲ್ಲ ಎಂದು ಪಟ್ಟು ಹಿಡಿದು ಕಾಮಗಾರಿಯನ್ನು ತಾತ್ಕಾಲಿಕವಾಗಿ ತಡೆಹಿಡಿದಿದ್ದಾರೆ.

ಅಂದಾಜು ಪಟ್ಟಿಯಲ್ಲಿ ಏನಿದೆ..?: ಅಂದಾಜು ಪಟ್ಟಿಯಲ್ಲಿ ಹಳೇ ರಸ್ತೆಯನ್ನು ಒಂದೂವರೇ ಅಡಿ ಅಳದವರೆಗೆ ಅಗೆದು ಹಳೆ ಮಣ್ಣನ್ನು ತೆರವುಗೊಳಿಸಿ ನೂತನವಾಗಿ 3 ಹಂತದಲ್ಲಿ ಜಲ್ಲಿ ಮತ್ತು ಗುಣಮಟ್ಟದ ಗ್ರಾವೆಲ್‌ ಮಣ್ಣನ್ನು ಹಾಕಿ ರೋಲರ್‌ ಮಾಡಿ ನಂತರ ಡಾಂಬರೀಕರಣ ಮಾಡಬೇಕು ಎಂದಿದೆ ಎಂದು ಹೇಳಲಾಗುತ್ತಿದ್ದರೂ, ಗುತ್ತಿಗೆದಾರ ಮಾತ್ರ ಹಳೆಯ ರಸ್ತೆಯ ಮೇಲಿದ್ದ ಡಾಂಬರನ್ನು ಕಿತ್ತು ಅದರ ಮೇಲೆಯೇ ಹೊಸದಾಗಿ ಡಾಂಬರ್‌ ಹೊದಿಸಲು ಮುಂದಾಗಿರುವುದಕ್ಕೆ ಪಟ್ಟಣದ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಎಂಜಿನಿಯರೂ ಇಲ್ಲ, ಗುತ್ತಿಗೆದಾರನೂ ಇಲ್ಲ: ತಾಲೂಕು ಕೇಂದ್ರ ಸ್ಥಾನದಲ್ಲಿ ಬಹುಕೋಟಿ ವೆಚ್ಚದಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿ ನಡೆಯುತ್ತಿದೆ. ಇಲ್ಲಿ ಕೆಲ ಒಂದಿಷ್ಟು ನೌಕರರು ಮಾತ್ರ ಜೆಸಿಬಿ, ರೋಲರ್‌ ಯಂತ್ರದಿಂದ ಕಾಮಗಾರಿಯಲ್ಲಿ ಪಾಲ್ಗೊಂಡಿದ್ದಾರೆ. ಆದರೆ ಕಾಮಗಾರಿ ನಿರ್ವಹಣೆ ಮಾಡುತ್ತಿರುವ ಗುತ್ತಿಗೆದಾರ ಹಾಗೂ ಕಾಮಗಾರಿ ಗುಣಮಟ್ಟ ಪರಿಶೀಲನೆ ಮಾಡಬೇಕಿರುವ ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ಗಳ ಸುಳಿವು ಇಲ್ಲದಿರುವುದಕ್ಕೆ ಸಾರ್ವಜನಿಕರು ಅನುಮಾನ ವ್ಯಕ್ತ ಪಡಿಸುತ್ತಿದ್ದಾರೆ.

ಹೀಗಾಗಿ ಕ್ಷೇತ್ರದ ಶಾಸಕರು, ಲೋಕೋಪಯೋಗಿ ಇಲಾಖೆ ಮುಖ್ಯ ಎಂಜಿನಿಯರ್‌ ಹಾಗೂ ಸಂಬಂಧಪಟ್ಟ ಇನ್ನಿತರ ಅಧಿಕಾರಿಗಳು ಮೂರ್ಕಲ್‌ ರಸ್ತೆಗೆ ನಡೆಯುತ್ತಿರುವ ಕಾಮಗಾರಿ ಪರಿಶೀಲಿಸಿ ಅಂದಾಜುಪಟ್ಟಿಯಂತೆ ಕಾಮಗಾರಿ ನಿರ್ವಹಿಸಲು ಸೂಕ್ತ ಕ್ರಮ ಕೈಗೊಂಡು ಗುಣಮಟ್ಟದ ರಸ್ತೆ ಡಾಂಬರೀಕರಣಕ್ಕೆ ಶ್ರಮಿಸಬೇಕಿದೆ.

ಎಚ್‌.ಡಿ.ಕೋಟೆ ತಾಲೂಕು ಕೇಂದ್ರದಿಂದ ಹಲವು ಗ್ರಾಮ, ಪ್ರವಾಸಿ ತಾಣಕ್ಕೆ ಸಂಪರ್ಕ ಬೆಸೆಯುವ ಮೂರ್ಕಲ್‌ ರಸ್ತೆಗೆ ತಡವಾಗಿ ಆದರೂ ರಸ್ತೆ ಅಭಿವೃದ್ಧಿಗೆ ಮುಂದಾಗಿರುವುದು ಸಂತಸ ತಂದಿದೆ. ಆದರೆ, ಹಳೆ ರಸ್ತೆಗೆ ತೆಪೆ ಹಾಕಲು ಮುಂದಾದರೇ, ನಾವು ರಸ್ತೆಯಲ್ಲಿ ಪ್ರತಿಭಟನೆ ನಡೆಸುತ್ತೇವೆ. ಯಾವುದೇ ಕಾರಣಕ್ಕೂ ಕಾಮಗಾರಿ ನಡೆಸಲು ಬಿಡುವುದಿಲ್ಲ.
-ರಮೇಶ್‌, ಆಟೋ ಚಾಲಕ

* ಬಿ.ನಿಂಗಣ್ಣಕೋಟೆ

Advertisement

Udayavani is now on Telegram. Click here to join our channel and stay updated with the latest news.

Next