Advertisement
ಆಗ ಮೀನು ಮನುಷ್ಯರಂತೆ ಮಾತನಾಡುತ್ತ, “”ಹುಡುಗಿ, ನನ್ನನ್ನು ಮುಟ್ಟಬೇಡ. ದೂರ ಹೋಗು. ನನ್ನ ಮಾತು ಮೀರಿ ನೀನೆಲ್ಲಾದರೂ ಸ್ಪರ್ಶ ಮಾಡಿದರೆ ಸಾಕು, ನನ್ನ ಹಾಗೆ ಮೀನಿನ ಜನ್ಮ ಪಡೆಯುತ್ತೀಯೆ” ಎಂದು ಎಚ್ಚರಿಸಿತು. ಗ್ರೇನಿ ಅದರ ಮಾತನ್ನು ಲಕ್ಷಿಸಲಿಲ್ಲ. “”ಹೋಗು, ಇಂತಹ ಬೆದರಿಕೆಗಳಿಗೆ ನಾನು ಸೊಪ್ಪು ಹಾಕುವವಳಲ್ಲ. ಮೀನು ಮಾರಾಟ ಮಾಡಿಯೇ ಬದುಕುವ ಕುಟುಂಬ ನನ್ನದು. ಜೀವ ಉಳಿಸಿಕೊಳ್ಳಲು ಮೀನುಗಳು ಏನೇನೋ ಹೇಳುತ್ತವೆ. ನನಗೆ ಅದರಿಂದ ಯಾವ ಭಯವೂ ಇಲ್ಲ” ಎಂದು ಹೇಳಿ ಮೀನಿನ ಮೈಯನ್ನು ಸ್ಪರ್ಶಿಸಿದಳು. ಮರುಕ್ಷಣವೇ ಅವಳಿಗೆ ತನ್ನ ದೇಹದಲ್ಲಿ ಏನೋ ಬದಲಾವಣೆಯಾಗುತ್ತಿದೆ ಎಂಬ ವಿಷಯ ಅರ್ಥವಾಯಿತು. ಅವಳು ನಿಜವಾಗಿಯೂ ಒಂದು ಮೀನಿನ ದೇಹ ಪಡೆದು ನೀರಿಗೆ ಧುಮುಕಿದಳು. ಈಜುತ್ತ ಕಡಲಿನ ತಳಕ್ಕಿಳಿದು ಒಂದು ಸುಂದರವಾದ ಅರಮನೆಯನ್ನು ತಲುಪಿದಳು. ಅಲ್ಲಿ ಸಿಂಹಾಸನದ ಮೇಲೆ ಒಂದು ಮೀನು ಕುಳಿತಿತ್ತು. ಅರಮನೆಯ ಒಳಗೆ ಮನುಷ್ಯರಿಗೆ ಬೇಕಾದ ಸೌಲಭ್ಯಗಳೆಲ್ಲವೂ ಇದ್ದರೂ ಮೀನುಗಳಷ್ಟೇ ಕಂಡುಬಂದವು.
Related Articles
Advertisement
ಆಗ ಗ್ರೇನಿಗೆ ತಾನು ಇರುವೆಯಾದರೆ ಮಾತ್ರ ಯಾರ ಕಣ್ಣಿಗೂ ಬೀಳದ ಹಾಗೆ ಗೋಡೆಯನ್ನೇರಲು ಸಾಧ್ಯವೆಂಬ ಯೋಚನೆ ಬಂತು. ಅವಳ ತಾಯಿತದ ಬಲದಿಂದ ಇರುವೆಯಾಗಿ ಕೋಟೆಯ ಗೋಡೆಯನ್ನೇರಿದಳು. ಸುತ್ತಲೂ ಬಿಚ್ಚುಗತ್ತಿ ಹಿಡಿದು ನೂರಾರು ಮಂದಿ ರಾಕ್ಷಸರು ಕಾವಲು ಕಾಯುತ್ತಿದ್ದರು. ಅವರಲ್ಲಿ ಒಬ್ಬನ ಬಳಿ ರಾಕ್ಷಸನ ಅರಮನೆಯ ಬೀಗ ತೆಗೆಯುವ ಕೀಲಿಕೈ ಇತ್ತು. ಗ್ರೇನಿ ಇರುವೆಯಾಗಿ ಅವನ ಕಾಲಿನ ಹೆಬ್ಬೆರಳಿಗೆ ಬಲವಾಗಿ ಕಡಿದಳು. ನೋವು ತಾಳಲಾಗದೆ ರಾಕ್ಷಸನು ಒದ್ದಾಡುತ್ತ ಕೈಯಲ್ಲಿ ಭದ್ರವಾಗಿದ್ದ ಕೀಲಿಕೈಯನ್ನು ಕೆಳಗೆ ಹಾಕಿಬಿಟ್ಟ.
ಮರುಕ್ಷಣವೇ ಗ್ರೇನಿ ಒಂದು ಗಿಣಿಯ ರೂಪ ಹೊಂದಿ ಕೀಲಿಕೈಯನ್ನು ಕೊಕ್ಕಿನಲ್ಲಿ ಕಚ್ಚಿಕೊಂಡು ಅರಮನೆಯ ಬಳಿಗೆ ಹೋಗಿ ಬಾಗಿಲಿನ ಬೀಗ ತೆಗೆದಳು. ಒಳಗೆ ಹೋದಳು. ಹೆಗ್ಗಣವಾಗಿ ಬದಲಾಯಿಸಿ ಅರಮನೆಯೊಳಗೆ ಹುಡುಕಿ ಮುತ್ತಿನ ಕಿರೀಟವಿರುವ ಜಾಗವನ್ನು ಕಂಡುಹಿಡಿದಳು. ಗಿಣಿಯಾಗಿ ಅದನ್ನು ಕಚ್ಚಿಕೊಂಡು ಹೊರಗೆ ತಂದಳು. ಆಗ ನಿದ್ರೆಯಲ್ಲಿದ್ದ ರಾಕ್ಷಸ ಎದ್ದುಬಂದ. ಗಿಣಿಯನ್ನು ಮುಷ್ಟಿಯಲ್ಲಿ ಹಿಡಿದುಕೊಂಡ. “”ಯಾಕೆ ನನ್ನ ಅರಮನೆಯೊಳಗೆ ಬಂದೆ? ಸತ್ಯ ಹೇಳು” ಎಂದು ಕೇಳಿದ. ಗ್ರೇನಿ ಸತ್ಯ ಸಂಗತಿ ಹೇಳಲಿಲ್ಲ. “”ಕಾಡಿನಲ್ಲಿ ಬರಗಾಲ ಬಂತು. ಹಣ್ಣು ಹುಡುಕಿಕೊಂಡು ಈ ಕಡೆಗೆ ಬಂದೆ. ದಯವಿಟ್ಟು ನನಗೆ ಜೀವದಾನ ಮಾಡು” ಎಂದು ಬೇಡಿದಳು.
ರಾಕ್ಷಸನು ಗಿಣಿಗೆ ಜೀವದಾನ ಮಾಡಲು ಒಪ್ಪಿದ. ಆದರೆ, “”ಆಕಾಶದಲ್ಲಿ ಮಿನುಗುತ್ತಿರುವ ನಕ್ಷತ್ರಗಳನ್ನು ನೋಡು. ಒಂದು ಪಾತ್ರೆ ತುಂಬ ನಕ್ಷತ್ರಗಳನ್ನು ತಂದುಕೊಟ್ಟರೆ ಜೀವದೊಂದಿಗೆ ಬಿಡುತ್ತೇನೆ, ಇಲ್ಲವಾದರೆ ಕೊಲ್ಲುತ್ತೇನೆ” ಎಂದು ಹೇಳಿದ. ಗಿಣಿ ಅದಕ್ಕೊಪ್ಪಿ$ ಹೊರಗೆ ಹೋಯಿತು. ಒಂದು ಪಾತ್ರೆಯಲ್ಲಿ ಅರ್ಧದಷ್ಟು ನೀರು ತುಂಬಿಸಿತು. ರಾಕ್ಷಸನ ಬಳಿಗೆ ತಂದು, “”ಇಣುಕಿ ನೋಡು, ಇದರಲ್ಲಿ ನಕ್ಷತ್ರಗಳಿವೆ” ಎಂದಿತು. ಆಕಾಶದಲ್ಲಿರುವ ನಕ್ಷತ್ರಗಳ ಪ್ರತಿಬಿಂಬ ನೀರಿನಲ್ಲಿ ರಾಕ್ಷಸನ ದೃಷ್ಟಿಗೆ ನಕ್ಷತ್ರಗಳ ಹಾಗೆಯೇ ಕಾಣಿಸಿತು. ಅವನು ಅದನ್ನು ಹೆಕ್ಕಲು ಪ್ರಯತ್ನಿಸುತ್ತಿರುವಾಗ ಗಿಣಿಯಾಗಿದ್ದ ಗ್ರೇನಿ ಮೆಲ್ಲಗೆ ಕಿರೀಟವನ್ನು ಕಚ್ಚಿ ಕೊಂಡಳು. ವೇಗವಾಗಿ ಹಾರಿಕೊಂಡು ಕೋಟೆಯನ್ನು ದಾಟಿ ಕಡಲಿನ ತೀರವನ್ನು ತಲುಪಿದಳು.
ಗ್ರೇನಿ ಮತ್ತೆ ಮೀನಿನ ರೂಪ ಧರಿಸಿ ಕಿರೀಟವನ್ನು ಹಿಡಿದುಕೊಂಡು ಸಿಂಹಾಸನದಲ್ಲಿರುವ ಮೀನಿನ ಬಳಿಗೆ ಹೋದಳು. ಕಿರೀಟವನ್ನು ಮುಟ್ಟಿದ ಕೂಡಲೇ ಮೀನು ಒಬ್ಬ ರಾಜಕುಮಾರನಾಯಿತು. ಉಳಿದ ಮೀನುಗಳು ಕಿರೀಟವನ್ನು ಹೀಗೆಯೇ ಮುಟ್ಟಿ ಅರಮನೆಯ ಕೆಲಸಗಾರರಾಗಿ, ಪ್ರಜೆಗಳಾಗಿ ಬದಲಾದವು. ಗ್ರೇನಿಯೂ ಮೊದಲಿನ ರೂಪ ಪಡೆದಳು. ಅರಮನೆಯ ಸುತ್ತಲಿದ್ದ ನೀರು ಮಾಯವಾಗಿ ಅದೊಂದು ನಗರವಾಯಿತು. ಅವಳು ವಿಸ್ಮಯದಿಂದ, “”ಇದೆಲ್ಲ ಹೇಗಾಯಿತು?” ಎಂದು ಕೇಳಿದಳು.
ರಾಜಕುಮಾರನು, “”ಆ ದೈತ್ಯ ರಾಕ್ಷಸ ಮಾಯೆಯಿಂದ ನನ್ನನ್ನೂ ಪ್ರಜೆಗಳನ್ನೂ ಮೀನುಗಳಾಗಿ ಮಾಡಿದ್ದ. ಆ ಮುತ್ತಿನ ಕಿರೀಟದಿಂದ ಮಾತ್ರ ನಮಗೆ ಮರುಜನ್ಮ ಬರುವುದೆಂದು ಗೊತ್ತಿತ್ತು. ಅದನ್ನು ತರಲು ಧೈರ್ಯವಂತರು ಯಾರೂ ಸಿಕ್ಕಿರಲಿಲ್ಲ. ಜಾಣೆಯಾದ ಕಾರಣ ಅದು ನಿನ್ನಿಂದ ಸಾಧ್ಯವಾಯಿತು” ಎಂದು ಹೇಳಿ, ಗ್ರೇನಿಯನ್ನು ಮದುವೆ ಮಾಡಿಕೊಂಡು ಸುಖವಾಗಿದ್ದ.
ಪ. ರಾಮಕೃಷ್ಣ ಶಾಸ್ತ್ರಿ