Advertisement

ಆಫ್ರಿಕದ ಕತೆ: ಗರುಡ ಮತ್ತು ಗೂಬೆ

12:10 PM Mar 23, 2019 | |

ಒಂದು ಗೊಂಡಾರಣ್ಯದಲ್ಲಿ ಸಾಕಷ್ಟು ಹಕ್ಕಿಗಳಿದ್ದವು, ಮೃಗಗಳಿದ್ದವು, ಹಾವುಗಳಿದ್ದವು. ಎಲ್ಲವೂ ನೆಮ್ಮದಿಯಿಂದ ಬದುಕಿಕೊಂಡಿರುವಾಗ ಒಮ್ಮೆ ದೇವರು ಮೃಗಗಳ ಮುಂದೆ ಕಾಣಿಸಿಕೊಂಡ. “”ನೀವೆಲ್ಲರೂ ಒಗ್ಗಟ್ಟಾಗಿ ನಿಮ್ಮನ್ನು ಪಾಲಿಸಲು ಒಬ್ಬ ರಾಜನನ್ನು ಆರಿಸಿಕೊಳ್ಳಬೇಕು. ಅವನು ಬಲಶಾಲಿಯಾಗಿರಬೇಕು. ಕಾಡಿನ ನಿವಾಸಿಗಳಿಗೆ ಏನಾದರೂ ತೊಂದರೆ ಬಂದರೆ ಸಂರಕ್ಷಿಸಲು ಸಮರ್ಥನಿರಬೇಕು. ಇಂತಹ ಗುಣಗಳಿಂದ ಕೂಡಿದ ಮೃಗವನ್ನು ಒಮ್ಮತದಿಂದ ರಾಜನಾಗಿ ಆಯ್ಕೆ ಮಾಡಿಕೊಂಡು ಸುಖದಿಂದ ಬದುಕಿ” ಎಂದು ಹೇಳಿದ. ಎಲ್ಲ ಪ್ರಾಣಿಗಳೂ ಸಭೆ ಸೇರಿದವು. “”ಬಲ ಮತ್ತು ಗಾತ್ರದಲ್ಲಿ ಪ್ರಾಣಿಗಳಲ್ಲಿ ದೊಡ್ಡದಾದುದು ಆನೆ. ಆದರೆ ಅದನ್ನು ಮಣಿಸಲು ಶಕ್ತವಾಗಿರುವ ಸಿಂಹವು ಎಲ್ಲರನ್ನೂ ಕಾಪಾಡಲು ಅರ್ಹತೆ ಪಡೆದಿದೆ. ಆದ ಕಾರಣ ಸಿಂಹವನ್ನು ನಮ್ಮ ರಾಜನಾಗಿ ಆಯ್ಕೆ ಮಾಡಿಕೊಳ್ಳುವುದು ಯೋಗ್ಯ” ಎಂದು ತೀರ್ಮಾನಿಸಿದವು. ಪ್ರಾಣಿಗಳು ವಿರೋಧವಿಲ್ಲದೆ ಇದನ್ನು ಒಪ್ಪಿಕೊಂಡು ಸಿಂಹಕ್ಕೆ ಮೃಗಗಳ ರಾಜ ಪದವಿಯನ್ನು ಒಪ್ಪಿಸಿದವು.

Advertisement

ರಾಜನಾದ ಬಳಿಕ ಸಿಂಹವು, “”ಇದುವರೆಗೆ ನಿಮ್ಮ ಪಾಲನೆಯ ಜವಾಬ್ದಾರಿ ನನ್ನ ಮೇಲಿರಲಿಲ್ಲ. ಇನ್ನು ಮುಂದೆ ಹಾಗಲ್ಲ, ರಾಜನಾದವನು ಎಲ್ಲ ಪ್ರಾಣಿಗಳನ್ನೂ ಸಮಾನವಾಗಿ ಕಂಡು ಹಿತವನ್ನು ಕಾಪಾಡಬೇಕು. ಇಂದಿನಿಂದ ಯಾರೂ ಆಹಾರಕ್ಕಾಗಿ ಯಾವ ಪ್ರಾಣಿಗಳನ್ನೂ ಬೇಟೆಯಾಡು ವುದು, ಹಿಂಸಿಸುವುದು ಅಪರಾಧವೆಂದು ಭಾವಿಸುತ್ತೇನೆ. ಈ ಮಾತನ್ನು ಮೀರಿದವರಿಗೆ ಕಠಿಣ ಶಿಕ್ಷೆ ವಿಧಿಸುತ್ತೇನೆ” ಎಂದು ಆಜ್ಞಾಪಿಸಿತು.

ಸಿಂಹದ ಆಜ್ಞೆ ಕೇಳಿ ಎಲ್ಲ ಪ್ರಾಣಿಗಳೂ ಹೌಹಾರಿದವು. “”ಒಡೆಯಾ, ಏನಿದು? ಪ್ರಾಣಿಗಳ ರಕ್ಷಣೆಯ ಹೊಣೆ ಹೊತ್ತ ನೀನು ನಮ್ಮನ್ನು ಉಪವಾಸ ಕೆಡವಿ ಕೊಲ್ಲುತ್ತೀಯಾ? ಹಸಿವು ನೀಗಲು ಬೇರೊಂದು ಪ್ರಾಣಿಯನ್ನು ನಾವು ಕೊಲ್ಲದೆ ಜೀವದಾನ ಮಾಡಿದರೆ ಗೆಡ್ಡೆಗೆಣಸು ತಿಂದು ಬದುಕಲು ನಮಗೆ ಸಾಧ್ಯವಿದೆಯೆ?” ಎಂದು ಕೇಳಿದವು.

ಸಿಂಹವು ನಕ್ಕಿತು. “”ಉಪವಾಸ ಸಾಯಲು ನಾನೆಲ್ಲಿ ಹೇಳಿದೆ? ಮೃಗಗಳನ್ನು ಕೊಲ್ಲಬಾರದು ಎಂದು ಹೇಳಿದರೆ ಗೆಡ್ಡೆಗೆಣಸು ತಿನ್ನಬೇಕಾಗಿಲ್ಲ. ಕಾಡಿನಲ್ಲಿ ಸಾಕಷ್ಟು ಹಕ್ಕಿಗಳಿವೆ. ಅದನ್ನು ಬೇಕಾದಂತೆ ಹಿಡಿದು ತಿಂದು ಹಸಿವು ಪರಿಹರಿಸಿಕೊಳ್ಳಿ. ನನ್ನ ಔತಣದ ಊಟದಲ್ಲಿಯೂ ಹಕ್ಕಿಗಳ ಖಾದ್ಯ ಮಾತ್ರ ಇರಬೇಕೆಂದು ಪಾಕತಜ್ಞರ ಬಳಿ ಹೇಳಿಬಿಡಿ” ಎಂದು
ಸಮಸ್ಯೆಗೆ ಪರಿಹಾರ ಸೂಚಿಸಿತು. ಪ್ರಾಣಿಗಳಿಗೆ ಇದು ಸರಿಯಾದ ಸಲಹೆ ಅನಿಸಿತು. ಹಕ್ಕಿಗಳನ್ನು ಹಿಡಿದು ತಿಂದು ಹಸಿವು ನಿವಾರಿಸುವ ದಾರಿ ಕಂಡುಕೊಂಡವು.

ಇದರಿಂದ ಹಕ್ಕಿಗಳಿಗೆ ಕಳವಳವುಂಟಾಯಿತು. ಅವು ಸಭೆ ಸೇರಿದವು. ಮೈನಾ ಹಕ್ಕಿ, “”ಕಾಡಿಗೆ ಎಂತಹ ದುರ್ಗತಿ ಬಂತು ನೋಡಿದಿರಾ! ಪ್ರಾಣಿಗಳು ಸಿಂಹವನ್ನು ರಾಜನಾಗಿ ಮಾಡಿಕೊಂಡ ಕೂಡಲೇ ಹೊಸ ಕಾನೂನು ಮಾಡಿವೆ. ಈಗ ಆಹಾರಕ್ಕಾಗಿ ಹಕ್ಕಿಗಳನ್ನು ಮಾತ್ರ ಹಿಡಿಯಬೇಕಂತೆ. ಪ್ರಾಣಿಗಳನ್ನು ತಿನ್ನಬಾರದಂತೆ. ಸಿಂಹದ ಈ ನಿಯಮದಿಂದ ನಮ್ಮ ಗೂಡುಗಳೆಲ್ಲವೂ ಖಾಲಿಯಾಗುತ್ತಿವೆ. ಅಷ್ಟೇ ಏಕೆ, ಸಮಯ ಕಳೆದರೆ ನಿರ್ವಂಶವಾಗಿ ಹೋಗುತ್ತೇವೆ” ಎಂದು ದುಃಖವನ್ನು ತೋಡಿಕೊಂಡಿತು.

Advertisement

ಗಿಣಿಯು, “”ನಿನ್ನ ಮಾತು ನಿಜ. ಆದರೆ ನಾವು ದುರ್ಬಲರು. ರಾತ್ರೆ ನಮ್ಮ ಗೂಡಿನೊಳಗೆ ಪ್ರಾಣಿಗಳು ಬಂದು ಹಿಡಿದುಕೊಂಡರೆ ಕತ್ತಲಿನಲ್ಲಿ ಎಲ್ಲಿಗೆ ಓಡಿ ಹೋಗುವುದು? ಈ ಅಪಾಯವನ್ನು ಪರಿಹರಿಸಲು ನಾವೊಂದು ಹಾದಿ ಹುಡುಕಬೇಕಲ್ಲವೆ?” ಎಂದು ಕೇಳಿತು.

ಎಲ್ಲ ಹಕ್ಕಿಗಳೂ ತಲೆದೂಗಿದವು. “”ಪ್ರಾಣಿಗಳ ಹಿತ ಕಾಯಲು ಒಬ್ಬ ರಾಜನನ್ನು ಒಗ್ಗಟ್ಟಿನಿಂದ ಆರಿಸಿಕೊಂಡ ಹಾಗೆ ನಾವು ಕೂಡ ನಮ್ಮನ್ನು ರಕ್ಷಿಸಲು ಸಮರ್ಥನಾಗುವ ರಾಜನನ್ನು ಆಯ್ದುಕೊಳ್ಳಬೇಕು. ಅವನು ಅಸಾಮಾನ್ಯನಾಗಿರಬೇಕು. ರಾತ್ರೆಯಾದರೆ ತಾನೆ ಶತ್ರುಗಳು ನಮಗೆ ತೊಂದರೆ ಕೊಡುವುದು? ನಮಗೆ ರಾಜನಾಗುವವನು ಆಕಾಶಕ್ಕೇರಿ ಸೂರ್ಯನನ್ನು ಭೇಟಿ ಮಾಡಬೇಕು. ಸೂರ್ಯನು ಮುಳುಗದೆ ನಮಗಾಗಿ ಯಾವಾಗಲೂ ಬೆಳಗುತ್ತಲೇ ಇರಬೇಕೆಂದು ಅವನನ್ನು ಒಪ್ಪಿಸಿ ಬರಬೇಕು. ಸೂರ್ಯನನ್ನು ಭೇಟಿಯಾಗುವಂತಹ ಹಕ್ಕಿ ಯಾರೆಂದು ತಿಳಿಯಲು ಸ್ಪರ್ಧೆ ಏರ್ಪಡಿಸೋಣ. ಅದರಲ್ಲಿ ಗೆದ್ದವನನ್ನು ರಾಜನಾಗಿ ಮಾಡೋಣ” ಎಂದು ನಿರ್ಧರಿಸಿದವು.

ಗರುಡ ಪಕ್ಷಿ ಎಲ್ಲ ಹಕ್ಕಿಗಳಿಗಿಂತ ಗಾತ್ರದಲ್ಲಿ ದೊಡ್ಡದು. ಅದು ರಾಜನಾಗಲು ಮುಂದೆ ಬಂದಿತು. “”ನನ್ನ ಅಗಲವಾದ ರೆಕ್ಕೆಗಳನ್ನು ನೋಡಿ. ಬಲು ವೇಗವಾಗಿ ಎತ್ತರೆತ್ತರ ಹಾರಿ ಸೂರ್ಯನ ಬಳಿಗೆ ತಲುಪಲು ಸಮರ್ಥನಾಗಿದ್ದೇನೆ. ಹರಿತವಾದ ಉಗುರುಗಳಿರುವ ನನ್ನ ಕಾಲುಗಳಿಂದ ಮೆಟ್ಟಿ ಹಗೆಗಳನ್ನು ಓಡಿಸುವ ಶಕ್ತಿ ನನಗಿದೆ. ನಾನು ಸೂರ್ಯನ ಬಳಿಗೆ ಹೋಗಿ ಅವನನ್ನು ಮಾತನಾಡಿಸಿಕೊಂಡು ಬರಬಲ್ಲೆ. ಬೇಕಿದ್ದರೆ ನನ್ನ ಜೊತೆಗೆ ಬೇರೆ ಯಾರಾದರೂ ಸ್ಪರ್ಧಿಸಬಹುದು. ಆದರೆ ಇದರಲ್ಲಿ ಗೆಲ್ಲುವುದು ನಾನೇ. ರಾಜ ಸಿಂಹಾಸನ ಒಲಿಯುವುದು ನನಗೇ” ಎಂದು ಎದೆ ತಟ್ಟಿತು.

ಕೆಲವು ಹಕ್ಕಿಗಳು ಗರುಡನ ಜೊತೆಗೆ ತಾವೂ ಸ್ಪರ್ಧಿಸಲು ಸಿದ್ಧವಿರುವುದಾಗಿ ಹೇಳಿದವು. ಮರುದಿನ ಬೆಳಗ್ಗೆ ಸ್ಪರ್ಧೆ ನಡೆಯುವುದೆಂದು ನಿರ್ಧಾರವಾಯಿತು. ಗಿಡುಗವು ರಾತ್ರೆಯಾಗುತ್ತಲೇ ಎತ್ತರವಾದ ಪರ್ವತವನ್ನು ಏರಿತು. ಬೆಳಕು ಹರಿಯುವಾಗ ಪಕ್ಷಿಗಳನ್ನು ಕೂಗಿ ಕರೆಯಿತು. “”ಸೋಮಾರಿಗಳೇ, ಬಲಹೀನರೇ, ಎಲ್ಲಿದ್ದೀರಿ? ನಾನು ನಿಮಗಿಂತ ಎತ್ತರ ಏರಿ ಸೂರ್ಯನನ್ನು ಮುಟ್ಟುವುದರಲ್ಲಿದ್ದೇನೆ. ನೋಡಿ ನನ್ನನ್ನು” ಎಂದು ಹೇಳಿ ರೆಕ್ಕೆಗಳನ್ನು ಬಿಡಿಸಿ ಸೂರ್ಯನಿಗೆ ಅಡ್ಡವಾಗಿ ಹಿಡಿಯಿತು. ಹಕ್ಕಿಗಳು ಕೆಳಗಿನಿಂದ ಧ್ವನಿ ಬಂದ ಕಡೆಗೆ ನೋಡಿದವು. ಮಸುಕು ಬೆಳಕು ಹರಿಯುತ್ತಿತ್ತು. ಎತ್ತರದಲ್ಲಿ ನಿಂತಿರುವ ಗಿಡುಗವು ಆಗತಾನೇ ಉದಯಿಸುತ್ತಿರುವ ಸೂರ್ಯನ ಬಳಿ ನಿಂತಿರುವ ಹಾಗೆಯೇ ಕಂಡುಬಂತು.

“”ಇನ್ನು ಯಾರೂ ಸ್ಪರ್ಧಿಸುವ ಅಗತ್ಯವಿಲ್ಲ. ಬಲಶಾಲಿಯಾದ ಗರುಡವು ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದೆ. ಅದು ನಮ್ಮ ರಾಜನಾಗಲು ಅಡ್ಡಿಯಿಲ್ಲ” ಎಂದು ಎಲ್ಲ ಹಕ್ಕಿಗಳೂ ಒಂದೇ ಮನಸ್ಸಿನಿಂದ ನಿರ್ಧರಿಸಿದವು. ಆದರೆ ಗೂಬೆ ಮಾತ್ರ ಅಪಸ್ವರ ತೆಗೆಯಿತು. “”ಪ್ರತ್ಯಕ್ಷ ಕಂಡರೂ ಪರಾಂಬರಿಸಿ ನೋಡು ಎಂಬ ಮಾತಿದೆ. ಗರುಡ ಆಕಾಶಕ್ಕೇರಿದೆ, ಸೂರ್ಯನನ್ನು ಮಾತನಾಡಿಸಿದ್ದನ್ನು ಕಂಡಿದ್ದೇವೆ ಎಂದು ನೀವೆಲ್ಲರೂ ಹೇಳುತ್ತೀರಿ. ಆದರೆ ಇದು ಸತ್ಯವೋ ಇದರಲ್ಲಿ ಏನಾದರೂ ಮೋಸವಿದೆಯೋ ಎಂದು ಪರೀಕ್ಷಿಸಬೇಕು. ಈ ದಿನ ರಾತ್ರೆಯಾಗುವುದಿಲ್ಲವೆ, ಸೂರ್ಯ ಇಡೀ ರಾತ್ರೆ ಬೆಳಗುತ್ತಾನೆಯೇ ಎಂಬುದನ್ನು ಪರೀಕ್ಷಿಸಲು ಕಾದು ಕುಳಿತುಕೊಳ್ಳಬೇಕು. ಹಾಗಾದರೆ ಮಾತ್ರ ಗಿಡುಗನಿಗೆ ರಾಜ ಪದವಿ ಕೊಡಬಹುದು” ಎಂದು ವಾದ ಮಾಡಿತು.

“”ರಾತ್ರೆಯಿಡೀ ಕಾಯುವುದೆ? ನನ್ನ ಗೂಡಿನಲ್ಲಿ ಪುಟ್ಟ ಪುಟ್ಟ ಮರಿಗಳಿವೆ. ನಾನು ಕೀಟಗಳನ್ನೋ ಕಾಳುಗಳನ್ನೋ ತೆಗೆದುಕೊಂಡು ಹೋಗದಿದ್ದರೆ ಉಪವಾಸ ಬೀಳುತ್ತವೆ. ಈ ಕೆಲಸ ನನ್ನಿಂದ ಆಗದು” ಎಂದಿತು ಕಾಗೆ. ಎಲ್ಲ ಹಕ್ಕಿಗಳೂ ರಾತ್ರೆ ನಿದ್ರೆಗೆಟ್ಟು ಕಾವಲು ಕಾಯುವ ಕೆಲಸದಿಂದ ಜಾರಿಕೊಳ್ಳಲು ನೋಡಿದವು.

ಆಗ ಗೂಬೆಯೇ ಹೇಳಿತು, “”ನೀವೆಲ್ಲರೂ ನಿಷ್ಪ್ರಯೋಜಕರೆಂಬುದು ನನಗೆ ಆಗಲೇ ಗೊತ್ತಿತ್ತು. ನಮ್ಮ ವಂಶಕ್ಕೆ ಬಂದೆರಗಿದ ಅಪಾಯವನ್ನು ಸರಿಪಡಿಸಲು ನಾನು ಪ್ರಯತ್ನಿಸಿದರೂ ನೀವು ಕೊಡುವ ಸಹಕಾರ ಇಷ್ಟೇ ತಾನೆ? ಹೋಗಲಿ, ನನಗೆ ನಿಮಗಿಂತ ದೊಡ್ಡ ಕಣ್ಣುಗಳಿವೆ. ನಿದ್ರೆಗೆಟ್ಟು ಕಾವಲು ಕಾಯುತ್ತೇನೆ. ಗಿಡುಗ ಹೇಳಿದ ಹಾಗೆ ಸೂರ್ಯನು ಮುಳುಗದೆ ಉಳಿಯುತ್ತಾನೋ ಇಲ್ಲವೋ ಎಂಬುದನ್ನು ಸತ್ಯ ತಿಳಿಯಲು ನಾಳೆ ಎಲ್ಲರೂ ನನ್ನ ಬಳಿಗೆ ಬನ್ನಿ. ಆಮೇಲೆ ಗಿಡುಗನಿಗೆ ಪಟ್ಟ ಕಟ್ಟಲು ಯೋಚಿಸಿ” ಎಂದು ಕೆಚ್ಚಿನಿಂದ ಹೇಳಿತು. ಹಕ್ಕಿಗಳೆಲ್ಲವೂ ಗೂಬೆಗೆ ಜವಾಬ್ದಾರಿ ಹೊರಿಸಿ ನಿಶ್ಚಿಂತೆಯಿಂದ ತಮ್ಮ ಗೂಡುಗಳತ್ತ ತೆರಳಿದವು.

ಗೂಬೆಯೊಂದೇ ಕಾವಲು ಕುಳಿತಿತು. ಆದರೆ ಸೂರ್ಯ ಪಶ್ಚಿಮಕ್ಕೆ ತಿರುಗುವಾಗಲೇ ಅದಕ್ಕೆ ತೂಕಡಿಕೆ ಆರಂಭವಾಯಿತು. ಎರಡು ಕಣ್ಣುಗಳಿವೆ ಯಲ್ಲ, ಒಂದು ಕಣ್ಣನ್ನು ಮುಚ್ಚಿ ನಿದ್ರೆ ಮಾಡುತ್ತೇನೆ, ಇನ್ನೊಂದನ್ನು ತೆರೆದಿಟ್ಟು ಕಾವಲು ಕಾಯುತ್ತೇನೆ ಎಂದು ಯೋಚಿಸಿ ಹಾಗೆಯೇ ಮಾಡಿತು. ಅದಕ್ಕೆ ಯಾವಾಗ ನಿದ್ರೆ ಆವರಿಸಿತೋ ಗೊತ್ತಿಲ್ಲ. ಎಲ್ಲ ಮರೆತು ಎರಡು ಕಣ್ಣುಗಳನ್ನೂ ಮುಚ್ಚಿ ನಿದ್ರೆಯಲ್ಲಿ ಮುಳುಗಿಬಿಟ್ಟಿತು. ಬೆಳಗಾಯಿತು. ಹಕ್ಕಿಗಳು ಕಣ್ತೆರೆದಾಗ ಸೂರ್ಯ ಕಾಣಿಸಿದ. ಓಹೋ, ಸೂರ್ಯ ಮುಳುಗಿಯೇ ಇಲ್ಲ, ಗಿಡುಗ ಹೇಳಿದ್ದು ನಿಜ ಎಂದುಕೊಂಡ ಅವು ಗೂಬೆಯನ್ನು ನೋಡಲು ಬಂದಾಗ ನಿದ್ರೆಯಲ್ಲಿ ಅದು ಮುಳುಗಿರುವುದು ಕಾಣಿಸಿತು. ಎಲ್ಲ ಹಕ್ಕಿಗಳೂ ಕೋಪದಿಂದ ಅದನ್ನು ಕುಕ್ಕಿ ಕುಕ್ಕಿ ಕೊಲ್ಲುವುದಕ್ಕೆ ಮುಂದಾದವು. ಗೂಬೆ ಹೇಗೋ ಸಾವಿನಿಂದ ತಪ್ಪಿಸಿ ಕೊಂಡಿತು. ಹಕ್ಕಿಗಳಿಗೆ ಹೆದರಿ ಅದು ಹಗಲಿನಲ್ಲಿ ಅವಿತು ರಾತ್ರೆ ಹೊರಬರತೊಡಗಿತು. ಗಿಡುಗ ರಾಜನಾಯಿತು.

ಪ. ರಾಮಕೃಷ್ಣ ಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next