Advertisement

AFGvsSA; ಐತಿಹಾಸಿಕ ಸರಣಿ ಗೆದ್ದ ಅಫ್ಘಾನ್:‌ ದ.ಆಫ್ರಿಕಾಗೆ 177 ರನ್‌ ಅಂತರದ ಸೋಲು

10:09 AM Sep 21, 2024 | Team Udayavani |

ಶಾರ್ಜಾ: ದಕ್ಷಿಣ ಆಫ್ರಿಕಾ (South Africa) ತಂಡವನ್ನು ಸತತ ಎರಡು ಏಕದಿನ ಪಂದ್ಯಗಳಲ್ಲಿ ಸೋಲುಣಿಸಿದ ಅಫ್ಘಾನಿಸ್ಥಾನ ತಂಡವು (Team Afghanistan) ಐತಿಹಾಸಿಕ ಸರಣಿ ಗೆಲುವು ಸಾಧಿಸಿದೆ. ಶುಕ್ರವಾರ (ಸೆ.20) ನಡೆದ ಎರಡನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು 177 ರನ್‌ ಗಳ ಬೃಹತ್‌ ಅಂತರದಲ್ಲಿ ಸೋಲನುಭವಿಸಿದೆ.

Advertisement

ಶಾರ್ಜಾದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಅಫ್ಘಾನಿಸ್ತಾನ ತಂಡವು ರೆಹಮನುಲ್ಲಾ ಗುರ್ಬಾಜ್‌ (Rahmanullah Gurbaz) ಶತಕದ ನೆರವಿನಿಂದ ನಾಲ್ಕು ವಿಕೆಟ್‌ ನಷ್ಟಕ್ಕೆ 311 ರನ್‌ ಗಳಿಸಿದರೆ, ದ.ಆಫ್ರಿಕಾ ತಂಡವು ಸ್ಪಿನ್‌ ದಾಳಿಗೆ ಸಿಲುಕಿ ಕೇವಲ 134 ರನ್‌ ಗೆ ಆಲೌಟಾಯಿತು. ಇದರೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಒಂದು ಪಂದ್ಯ ಉಳಿದಿರುವಂತೆ ತನ್ನ ವಶಕ್ಕೆ ಪಡೆಯಿತು.

ಟಾಸ್‌ ಗೆದ್ದು ಬ್ಯಾಟಿಂಗ್‌ ಮಾಡಿದ ಅಫ್ಘಾನ್‌ ಗೆ ಗುರ್ಬಾಜ್‌ ಮತ್ತು ರಿಯಾಜ್‌ ಹಸನ್‌ ಮೊದಲ ವಿಕೆಟ್‌ 88 ರನ್‌ ಜೊತೆಯಾಟವಾಡಿ ಆಧರಿಸಿದರು. ಎರಡನೇ ವಿಕೆಟ್‌ ಗೆ ಗುರ್ಬಾಜ್‌ ಜತೆ ಸೇರಿದ ರೆಹಮತ್‌ 100 ರನ್‌ ಜೊತೆಯಾಟವಾಡಿದರು. ಏಕದಿನ ಕ್ರಿಕೆಟ್‌ ನ ಏಳನೇ ಶತಕ ಬಾರಿಸಿದ ಗುರ್ಬಾಜ್‌ 105 ರನ್‌ ಗಳಿಸಿದರು. ರೆಹಮತ್‌ 50 ರನ್‌ ಮಾಡಿದರೆ, ಅಜ್ಮತುಲ್ಲಾಹ್‌ ಅಜೇಯ 86 ರನ್‌ ಮಾಡಿದರು.

312 ರನ್‌ ಗುರಿ ಬೆನ್ನತ್ತಿದ್ದ ದ.ಆಫ್ರಿಕಾ ನಾಯಕ ಬವುಮಾ ಮತ್ತು ಟೊನಿ ಡಿ ಜೋರ್ಜಿ ಮೊದಲ ವಿಕೆಟ್‌ ಗೆ 72 ರನ್‌ ಕಲೆ ಹಾಕಿದರು. ಬವುಮಾ 38 ಮತ್ತು ಟೊನಿ 31 ರನ್‌ ಮಾಡಿದರು. ಆದರೆ ಬಳಿಕ ಯಾವುದೇ ಆಟಗಾರ ನಿಂತು ಆಡಲಿಲ್ಲ. ರೀಜಾ ಹೆಂಡ್ರಿಕ್ಸ್‌ (17 ರನ್)‌ ಏಡನ್‌ ಮಾರ್ಕ್ರಮ್‌ (21 ರನ್)‌ ಗಳಿಸಿದ್ದು ಬಿಟ್ಟರೆ ಉಳಿದ್ಯಾರು ಎರಡಂಕಿ ಮೊತ್ತವನ್ನೂ ಕಲೆ ಹಾಕಲಿಲ್ಲ. ಕೊನೆಗೆ 34.2 ಓವರ್‌ ಗಳಲ್ಲಿ ಆಫ್ರಿಕಾ ಕೇವಲ 134 ರನ್‌ ಗೆ ಆಲೌಟಾಯಿತು.

Advertisement

ಅಫ್ಘಾನಿಸ್ಥಾನದ ಪರ ರಶೀದ್‌ ಖಾನ್‌ ಮತ್ತು ನಂಗೆಯಲಿಯಾ ಖರೋಟೆ ಸ್ಪಿನ್‌ ದಾಳಿ ನಡೆಸಿ ಹರಿಣಗಳ ಬ್ಯಾಟರ್‌ ಗಳನ್ನು ಕಟ್ಟಿ ಹಾಕಿದರು. ರಶೀದ್‌ ಖಾನ್‌ ಕೇವಲ 19 ರನ್‌ ನೀಡಿ 5 ವಿಕೆಟ್‌ ಕಿತ್ತರೆ, ನಂಗೆಯಲಿಯಾ ಖರೋಟೆ ನಾಲ್ಕು ವಿಕೆಟ್‌ ಪಡೆದರು. ರಶೀದ್‌ ಖಾನ್‌ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ದಾಖಲೆ ಬರೆದ ಗುರ್ಬಾಜ್‌

ಶತಕ ಬಾರಿಸಿ ಮಿಂಚಿದ ಆರಂಭಿಕ ಆಟಗಾರ ರೆಹಮನುಲ್ಲಾ ಗುರ್ಬಾಜ್‌ ಏಕದಿನ ಕ್ರಿಕೆಟ್‌ ನಲ್ಲಿ ಅಫ್ಘಾನ್‌ ಪರ ಅತಿ ಹೆಚ್ಚು ಶತಕ ಬಾರಿಸಿದ ಬ್ಯಾಟರ್‌ ಎಂಬ ಖ್ಯಾತಿಗೆ ಪಾತ್ರರಾದರು. ಇದು ಗುರ್ಬಾಜ್‌ ಬಾರಿಸಿದ ಏಳನೇ ಶತಕ. ಅವರು ಆರು ಶತಕ ಬಾರಿಸಿದ್ದ ಮೊಹಮದ್‌ ಶೆಹಜಾದ್‌ ಅವರನ್ನು ಹಿಂದಿಕ್ಕಿದರು. ಇಬ್ರಾಹಿಂ ಜದ್ರಾನ್‌ ಮತ್ತು ರೆಹಮತ್‌ ಶಾ ತಲಾ ಐದು ಏಕದಿನ ಶತಕ ಹೊಡೆದಿದ್ದಾರೆ.

23 ವರ್ಷ ವಯಸ್ಸಿನ ಮೊದಲ ಅತಿ ಹೆಚ್ಚು ಏಕದಿನ ಶತಕ ಬಾರಿಸಿದವರ ಪಟ್ಟಿಯಲ್ಲಿ ಗುರ್ಬಾಜ್‌ ಮೂರನೇ ಸ್ಥಾನಕ್ಕೇರಿದರು. ಭಾರತದ ಸಚಿನ್‌ ತೆಂಡೂಲ್ಕರ್‌ ಮತ್ತು ದ.ಆಫ್ರಿಕಾದ ಕ್ವಿಂಟನ್‌ ಡಿಕಾಕ್‌ 23 ವರ್ಷದ ಮೊದಲು ಎಂಟು ಶತಕ ಹೊಡೆದಿದ್ದರು. ವಿರಾಟ್‌ ಕೊಹ್ಲಿ ಏಳು, ಬಾಬರ್‌ ಅಜಂ ಮತ್ತು ಉಪುಲ್‌ ತರಂಗ ತಲಾ ಆರು ಶತಕ ಬಾರಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next