ಕಾಬೂಲ್:ಅಫ್ಘಾನಿಸ್ತಾನದಲ್ಲಿ ಅತಂತ್ರ ಸ್ಥಿತಿಯಲ್ಲಿದ್ದ 85ಕ್ಕೂ ಅಧಿಕ ಭಾರತೀಯರನ್ನು ಭಾರತದ ವಾಯುಪಡೆಯ ಸಿ-130 ಜೆ ವಿಮಾನದ ಮೂಲಕ ಶನಿವಾರ (ಆಗಸ್ಟ್ 21) ಏರ್ ಲಿಫ್ಟ್ ಮಾಡಲಾಗಿದೆ ಎಂದು ಎಎನ್ ಐ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ಇದನ್ನೂ ಓದಿ:ಜೈಲಿನಿಂದ ಬರುತ್ತಿದ್ದಂತೆ ಗತ್ತಿನಿಂದ ಮೀಸೆ ತಿರುವಿದ ವಿನಯ್ ಕುಲಕರ್ಣಿ
ಭಾರತದ ವಾಯುಪಡೆ ವಿಮಾನ ತಜಿಕಿಸ್ತಾನ್ ನಲ್ಲಿ ಇಂಧನ ತುಂಬಿಸಿಕೊಳ್ಳಲು ಲ್ಯಾಂಡ್ ಆಗಲಿದೆ ಎಂದು ವರದಿ ತಿಳಿಸಿದ್ದು, ಕಾಬೂಲ್ ನಲ್ಲಿದ್ದ ಭಾರತೀಯರ ಸ್ಥಳಾಂತರಕ್ಕೆ ಭಾರತ ಸರ್ಕಾರದ ಅಧಿಕಾರಿಗಳು ನೆರವು ನೀಡಿರುವುದಾಗಿ ಮೂಲಗಳು ಹೇಳಿವೆ.
ಭಾರತೀಯರನ್ನು ಸುರಕ್ಷಿತವಾಗಿ ವಾಪಸ್ ಕರೆತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ಈಗಾಗಲೇ ತಾಲಿಬಾನ್ ಉಗ್ರರು ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದುಕೊಂಡ ಬಳಿಕ ಕಂದಹಾರ್ ನಲ್ಲಿದ್ದ ರಾಯಭಾರ ಕಚೇರಿಯ ಸಿಬಂದಿಗಳನ್ನು ಭಾರತ ಕರೆತಂದಿತ್ತು.
ಆಗಸ್ಟ್ 15ರಂದು ತಾಲಿಬಾನ್ ಉಗ್ರರು ಕಾಬೂಲ್ ಅನ್ನು ವಶಪಡಿಸಿಕೊಂಡಿದ್ದರು. ಅಮೆರಿಕದ ಸೇನಾ ಪಡೆಯ ಅನುಮತಿ ದೊರೆತ ನಂತರ ಭಾರತ ಸಿ 17 ವಿಮಾನದ ಮೂಲಕ 180 ಅಧಿಕಾರಿಗಳನ್ನು ಏರ್ ಲಿಫ್ಟ್ ಮೂಲಕ ತಾಯ್ನಾಡಿಗೆ ಕರೆತಂದಿರುವುದಾಗಿ ವರದಿ ವಿವರಿಸಿದೆ.
ಅಫ್ಘಾನಿಸ್ತಾನ್ ಅಧ್ಯಕ್ಷ ಅಶ್ರಫ್ ಘನಿ ದೇಶದಿಂದ ಪರಾರಿಯಾದ ನಂತರ ತಾಲಿಬಾನ್ ಉಗ್ರರ ಅಟ್ಟಹಾಸ ಮುಂದುವರಿಸಿತ್ತು. ಭೀತಿಗೊಳಗಾದ ಅಫ್ಘಾನ್ ಜನರು ದೇಶದಿಂದ ಪರಾರಿಯಾಗಲು ವಿಮಾನ ನಿಲ್ದಾಣಕ್ಕೆ ದೌಡಾಯಿಸಿದ್ದರು. ಆದರೂ ಸಾವಿರಾರು ಮಂದಿ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಅತಂತ್ರ ಸ್ಥಿತಿಯಲ್ಲಿದ್ದು, ಇದರಲ್ಲಿ ಭಾರತೀಯರು ಸೇರಿರುವುದಾಗಿ ವರದಿ ತಿಳಿಸಿದೆ.