Advertisement

ಎಳ್ಳು-ಬೆಲ್ಲದ ಒಳ್ಳೊಳ್ಳೆ ಅಡುಗೆ

10:39 AM Feb 06, 2020 | mahesh |

ಮೊನ್ನೆಯಷ್ಟೇ ಸಂಕ್ರಾಂತಿ ಮುಗಿದಿದೆ. ಮನೆಮನೆಗೂ ಎಳ್ಳು-ಬೆಲ್ಲ ಬೀರಿದ್ದಾಗಿದೆ. ಅವರಿವರು ಕೊಟ್ಟ ಎಳ್ಳು-ಬೆಲ್ಲದ ಪ್ಯಾಕೆಟ್‌ ಅನ್ನು ಡಬ್ಬಿಯಲ್ಲಿ ಇಟ್ಟಿದ್ದೂ ಆಗಿದೆ. ಹದವಾಗಿ ಹುರಿದ ಬಿಳಿ ಎಳ್ಳು, ಹುರಿದ ಶೇಂಗಾ ಬೀಜ, ಹುರಿಗಡಲೆ, ಕೊಬ್ಬರಿ, ಬೆಲ್ಲದ ಈ ಮಿಶ್ರಣ ತಿನ್ನಲು ಬಲು ರುಚಿ ಅನ್ನಿಸಿದರೂ, ಅತಿಯಾಗಿ ತಿಂದರೆ ಪಿತ್ತ, ಅಜೀರ್ಣವಾಗಬಹುದು. ಹಾಗಾದರೆ, ಮನೆಯಲ್ಲಿ ಉಳಿದಿರುವ ಎಳ್ಳು-ಬೆಲ್ಲವನ್ನು ಏನು ಮಾಡಬಹುದು ಅಂದಿರಾ? ಅದರಿಂದ ಕೆಲವು ರುಚಿಕಟ್ಟಾದ ಅಡುಗೆಗಳನ್ನು ತಯಾರಿಸಬಹುದು.

Advertisement

1. ಪಾನೀಯ
ಬೇಕಾಗುವ ಸಾಮಗ್ರಿ: ಹಾಲು- 2 ಲೋಟ, ನೀರು- 1 ಲೋಟ, ಎಳ್ಳು-ಬೆಲ್ಲ- 4 ಚಮಚ.

ತಯಾರಿಸುವ ವಿಧಾನ: ಎಳ್ಳು-ಬೆಲ್ಲವನ್ನು ಮಿಕ್ಸಿಗೆ ಹಾಕಿ ಪುಡಿ ಮಾಡಿಟ್ಟುಕೊಳ್ಳಿ. ಹಾಲಿಗೆ ಬೇಕಿದ್ದಷ್ಟು ನೀರು ಸೇರಿಸಿ, ಕುದಿಸಿ. ಇದಕ್ಕೆ ಪುಡಿ ಮಾಡಿದ ಎಳ್ಳು-ಬೆಲ್ಲವನ್ನು ಸೇರಿಸಿ ಚೆನ್ನಾಗಿ ಕಲಕಿ. (ಅಗತ್ಯವಿದ್ದರೆ ಹೆಚ್ಚುವರಿ ಬೆಲ್ಲ ಸೇರಿಸಬಹುದು) ನಂತರ ಸೋಸಿದರೆ ಬಿಸಿಯಾದ ಪಾನೀಯ ಕುಡಿಯಲು ಸಿದ್ದ. ಇದನ್ನೇ, 2-3 ಗಂಟೆಗಳ ಕಾಲ ಫ್ರಿಡ್ಜ್ನಲ್ಲಿ ಇರಿಸಿ, ಒಂದೆರಡು ಐಸ್‌ ಕ್ಯೂಬ್‌ ಸೇರಿಸಿದರೆ, ತಂಪಾದ ಮಿಲ್ಕ್ ಶೇಕ್‌ ಸಿದ್ಧವಾಗುತ್ತದೆ.

2. ಹಾಗಲಕಾಯಿ ಗೊಜ್ಜು
ಬೇಕಾಗುವ ಸಾಮಗ್ರಿ: ಎಳ್ಳು-ಬೆಲ್ಲ- 4 ಚಮಚ, ಹಾಗಲಕಾಯಿ- 2, ಹಸಿರುಮೆಣಸಿನಕಾಯಿ- 2, ಹುಣಸೆಹಣ್ಣು- ಲಿಂಬೆ ಹಣ್ಣಿನ ಗಾತ್ರದ್ದು, ಅರಿಶಿಣ- ಚಿಟಿಕೆ, ಸಾರಿನ ಪುಡಿ- 1 ಚಮಚ, ನೀರು- 6-7 ಲೋಟ, ಉಪ್ಪು- ರುಚಿಗೆ ತಕ್ಕಷ್ಟು . ಒಗ್ಗರಣೆಗೆ: ಸಾಸಿವೆ- 1/2 ಚಮಚ, ಒಣಮೆಣಸಿನಕಾಯಿ- ಒಂದು, ಎಣ್ಣೆ – 1 ಚಮಚ, ಕರಿಬೇವು – 2 ಎಸಳು.

ತಯಾರಿಸುವ ವಿಧಾನ: ಹುಣಸೇಹಣ್ಣನ್ನು ನೀರಿನಲ್ಲಿ ನೆನೆಸಿ, ರಸ ಕಿವುಚಿ ಇಟ್ಟುಕೊಳ್ಳಿ. ಶುಚಿಗೊಳಿಸಿದ ಹಾಗಲಕಾಯಿಗಳನ್ನು ಸಣ್ಣದಾಗಿ ಹೆಚ್ಚಿಡಿ. (ಎಳೆಯದಾದರೆ ತಿರುಳಿನ ಸಮೇತ ಹೆಚ್ಚಬಹುದು) ಹಸಿರು ಮೆಣಸನ್ನು ಸೀಳಿ. ನಂತರ, ಇವೆಲ್ಲವನ್ನೂ ಒಂದು ಪಾತ್ರೆಗೆ ಹಾಕಿ, ಉಪ್ಪು, ಅರಿಶಿಣ ಮತ್ತು ಸಾಕಷ್ಟು ನೀರು ಸೇರಿಸಿ ಸಣ್ಣ ಉರಿಯಲ್ಲಿ ಬೇಯಿಸಿ. ಎಳ್ಳು-ಬೆಲ್ಲ ಮತ್ತು ಸಾರಿನ ಪುಡಿಯನ್ನು ಮಿಕ್ಸಿಗೆ ಹಾಕಿ, ತರಿತರಿಯಾಗಿ ಪುಡಿ ಮಾಡಿ. ಈಗಾಗಲೇ ಬೆಂದಿರುವ ಹಾಗಲಕಾಯಿ ಹೋಳಿಗೆ ಈ ಪುಡಿಯನ್ನು ಸೇರಿಸಿ, ಪುನಃ ಕುದಿಸಿ. (ಹಾಗಲಕಾಯಿ ಕಹಿ ಎನಿಸಿದರೆ ಹೆಚ್ಚುವರಿಯಾಗಿ ಬೆಲ್ಲ ಸೇರಿಸಬಹುದು) ಮಿಶ್ರಣವು ಗೊಜ್ಜಿನ ಹದಕ್ಕೆ ಬಂದಾಗ, ಒಲೆಯಿಂದ ಇಳಿಸಿ. ಆಮೇಲೆ ಸಾಸಿವೆ-ಕರಿಬೇವಿನ ಒಗ್ಗರಣೆ ಕೊಡಿ. ಈ ಗೊಜ್ಜನ್ನು ಅನ್ನದೊಂದಿಗೆ ಬೆರೆಸಿಕೊಂಡು ತಿನ್ನಬಹುದು. ಇಡ್ಲಿ, ದೋಸೆ, ಚಪಾತಿಗೂ ನೆಂಚಿಕೊಳ್ಳಲು ಚೆನ್ನಾಗಿರುತ್ತದೆ.

Advertisement

3. ಎಳ್ಳಿನ ಚಿತ್ರಾನ್ನ
ಬೇಕಾಗುವ ಸಾಮಗ್ರಿ: ಅಕ್ಕಿ – 2 ಕಪ್‌, ಎಳ್ಳು-ಬೆಲ್ಲ- 6 ಚಮಚ, ಹುಣಸೆಹಣ್ಣು- ಒಂದು ಗೋಲಿಯಷ್ಟು, ಚಿಟಿಕೆ ಅರಿಶಿಣ ಪುಡಿ, ಸಾರಿನ ಪುಡಿ- 2 ಚಮಚ, ರುಚಿಗೆ ತಕ್ಕಷ್ಟು ಉಪ್ಪು. ಒಗ್ಗರಣೆಗೆ: ಸಾಸಿವೆ, ಕಡಲೇಬೀಜ, ಉದ್ದಿನಬೇಳೆ, ಕಡಲೇಬೇಳೆ, ಒಣಮೆಣಸಿನಕಾಯಿ- ಎರಡು, ಎಣ್ಣೆ -4 ಚಮಚ, ಕರಿಬೇವು- 2 ಎಸಳು.

ತಯಾರಿಸುವ ವಿಧಾನ: ಅಕ್ಕಿಯಿಂದ ಉದುರಾದ ಅನ್ನ ಮಾಡಿ. ಎಳ್ಳು-ಬೆಲ್ಲ, ಸಾರಿನ ಪುಡಿ, ಅರಿಶಿಣ ಪುಡಿ, ಉಪ್ಪು ಮತ್ತು ಹುಣಸೇಹಣ್ಣನ್ನು ಮಿಕ್ಸಿಗೆ ಹಾಕಿ, ತರಿತರಿಯಾಗಿ ಪುಡಿ ಮಾಡಿಕೊಳ್ಳಿ. ಬಾಣಲೆಯಲ್ಲಿ ಒಗ್ಗರಣೆ ಮಾಡಿ, ಅದಕ್ಕೆ ಅನ್ನ ಮತ್ತು ರುಬ್ಬಿದ ಮಿಶ್ರಣವನ್ನು ಸೇರಿಸಿ ಹದವಾಗಿ ಕಲೆಸಿದರೆ, ಪುಳಿಯೋಗರೆಯ ರುಚಿಯನ್ನೇ ಹೋಲುವ “ಎಳ್ಳಿನ ಚಿತ್ರಾನ್ನ’ ರೆಡಿ.

4.ಬಾಳೆಹಣ್ಣಿನ ರಸಾಯನ
ಬೇಕಾಗುವ ಸಾಮಗ್ರಿ: ಏಲಕ್ಕಿ ಬಾಳೆಹಣ್ಣು- 8, ತೆಂಗಿನ ತುರಿ- 1 ಕಪ್‌, ಎಳ್ಳು-ಬೆಲ್ಲ- 6 ಚಮಚ, ನೀರು- 5 ಲೋಟ, ಸ್ವಲ್ಪ ಬೆಲ್ಲ, ಗೋಡಂಬಿ, ದ್ರಾಕ್ಷಿ- ರುಚಿಗೆ.

ತಯಾರಿಸುವ ವಿಧಾನ: ಎಳ್ಳು-ಬೆಲ್ಲವನ್ನು ಮಿಕ್ಸಿಗೆ ಹಾಕಿ ಪುಡಿ ಮಾಡಿಟ್ಟುಕೊಳ್ಳಿ. ಬೇಕಿದ್ದರೆ ಸುವಾಸನೆಗಾಗಿ ಒಂದೆರಡು ಏಲಕ್ಕಿಯನ್ನೂ ಸೇರಿಸಬಹುದು. ಬಾಳೆಹಣ್ಣುಗಳನ್ನು ಸಣ್ಣಗೆ ಹೆಚ್ಚಿಕೊಂಡು, ಅದರ ಸಿಹಿಯನ್ನು ಗಮನಿಸಿಕೊಂಡು ಬೇಕಿದ್ದರೆ ಸ್ವಲ್ಪ ಬೆಲ್ಲ ಬೆರೆಸಿ. ತೆಂಗಿನ ತುರಿಗೆ ಸ್ವಲ್ಪ ನೀರು ಸೇರಿಸಿ, ಮಿಕ್ಸಿಗೆ ಹಾಕಿ ಕಾಯಿಹಾಲು ತಯಾರಿಸಿ. ನಂತರ, ಹೆಚ್ಚಿದ ಬಾಳೆಹಣ್ಣು, ಕಾಯಿಹಾಲು, ಎಳ್ಳು-ಬೆಲ್ಲದ ಪುಡಿ ಎಲ್ಲವನ್ನೂ ಬೆರೆಸಿದರೆ ರಸಾಯನ ಸವಿಯಲು ಸಿದ್ದ. ಗೋಡಂಬಿ, ದ್ರಾಕ್ಷಿ ಹಾಗೂ ಹುರಿದ ಎಳ್ಳನ್ನು ಸೇರಿಸಿ ರುಚಿಯನ್ನು ಹೆಚ್ಚಿಸಬಹುದು. ಇದನ್ನು ಕುದಿಸುವ ಅಗತ್ಯವಿಲ್ಲ. ಪಾಯಸದಂತೆ ಕುಡಿಯಬಹುದು. ಒತ್ತುಶ್ಯಾವಿಗೆ, ದೋಸೆ, ಚಪಾತಿ, ಇಡ್ಲಿಯ ಜೊತೆಗೆ ಸಿಹಿಯಾದ ನೆಂಚಿಕೆಯನ್ನು ಇಷ್ಟಪಡುವರಿಗೆ ಇದು ಒಳ್ಳೆಯ ಕಾಂಬಿನೇಶನ್‌ ಎನಿಸುತ್ತದೆ.

-ಹೇಮಮಾಲಾ.ಬಿ

Advertisement

Udayavani is now on Telegram. Click here to join our channel and stay updated with the latest news.

Next