Advertisement

ಬೆಳೆ ವಿಮೆ ನೋಂದಣಿಗೆ ರೈತರಿಗೆ ಸಲಹೆ

06:05 PM Jul 20, 2020 | Suhan S |

ಭಾಲ್ಕಿ: ತಾಲೂಕಿನಲ್ಲಿ 2020-21ನೇ ಸಾಲಿನ ಮುಂಗಾರು ಹಂಗಾಮಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆಯಡಿ ಬೆಳೆ ವಿಮೆ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದ್ದು, ರೈತರು ಇದರ ಪ್ರಯೋಜನ ಪಡೆಯಬೇಕು ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರಮೇಶ ಮಸ್ಕಲೆ ಹೇಳಿದರು.

Advertisement

ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಮಂಗಳವಾರ ಕರ್ನಾಟಕ ಸರಕಾರದ ಕೃಷಿ ಇಲಾಖೆ ಹೊರತಂದ 2020-21ನೇ ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆಯ ಮಾಹಿತಿ ಕರಪತ್ರಗಳನ್ನು ರೈತರಿಗೆ ವಿತರಿಸಿ ಅವರು ಮಾತನಾಡಿದರು. ಈ ವರ್ಷದ ಮುಂಗಾರು ಹಂಗಾಮಿನ ಬೆಳೆ ವಿಮೆ ನೋಂದಣಿ ಮಾಡಿಸುವಂತೆ ಕೋರಿ ಆಯಾ ರೈತ ಸಂಪರ್ಕ ಕೇಂದ್ರದ ಅಧಿಕಾರಿ, ಸಿಬ್ಬಂದಿಗಳ ಮೂಲಕ ಹಳ್ಳಿ ಹಳ್ಳಿಗಳಲ್ಲಿ ವ್ಯಾಪಕ ಪ್ರಚಾರ ಮಾಡಲಾಗುತ್ತಿದೆ. ಬೆಳೆ ವಿಮೆ ನೋಂದಣಿ ಪ್ರಕ್ರಿಯೆ ಕೂಡ ಆರಂಭವಾಗಿದೆ. ಮಳೆಯಾಶ್ರಿತ ಬೆಳೆಗಳಾದ ತೊಗರಿ, ಸೋಯಾಬಿನ್‌, ಉದ್ದು, ಹೆಸರು, ಮುಸುಕಿನ ಜೋಳ ಮತ್ತು ಎಳ್ಳು ಬೆಳೆಗಳಿಗೆ ವಿಮೆ ನೋಂದಣಿಗೆ ಜು.31 ಹಾಗೂ ಸೂರ್ಯಕಾಂತಿ (ಮಳೆಯಾಶ್ರಿತ) ಬೆಳೆ ನೋಂದಿಗೆ ಆ.14 ಕೊನೆ ದಿನವಾಗಿದೆ. ರೈತರು ಅಗತ್ಯ ದಾಖಲೆಗಳೊಂದಿಗೆ ತಮ್ಮ ಹತ್ತಿರದ ಪಿಕೆಪಿಎಸ್‌, ಡಿಸಿಸಿ ಬ್ಯಾಂಕ್‌ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಭೇಟಿ ನೀಡಿ ನಿಗದಿತ ದಿನದೊಳಗೆ ಬೆಳೆ ವಿಮೆ ಮಾಡಿಸಿ ಸರಕಾರದ ಸೌಲಭ್ಯಗಳ ಪ್ರಯೋಜನ ಪಡೆಯಬೇಕು ಎಂದು ಸಲಹೆ ನೀಡಿದರು.

ತಾಂತ್ರಿಕ ವ್ಯವಸ್ಥಾಪಕ ಶತ್ರುಘ್ನ ಸದುವಾಲೆ, ಕಚೇರಿ ಅಧೀಕ್ಷಕ ಲಕ್ಷ್ಮಣ ಮಳ್ಳಿ, ಸಿಬ್ಬಂದಿ ಪ್ರಶಾಂತ ಆಲೂರೆ, ಸಂಜೀವಕುಮಾರ, ಪ್ರಮೋದ, ಇಸ್ಮಾಮೋದ್ದಿನ್‌, ಶಿವಕಾಂತ ಮಾಶೆಟ್ಟೆ ಸೇರಿ ರೈತರು ಇದ್ದರು. ಬೆಳೆಗಳಿಗೆ ವಿಮೆ ಕಂತು ಎಷ್ಟು: ತೊಗರಿ ಎಕರೆಗೆ-323.89, ಸೋಯಾಬಿನ್‌ ಎಕರೆಗೆ-275.30, ಉದ್ದು ಎಕರೆಗೆ-226.72, ಹೆಸರು ಎಕರೆಗೆ -234.82 ರೂ. ವಿಮೆ ಕಂತು ಇದೆ.

Advertisement

Udayavani is now on Telegram. Click here to join our channel and stay updated with the latest news.

Next