Advertisement

ಸಂಪನ್ಮೂಲ ಕ್ರೋಢೀಕರಿಸಲು ಸಲಹೆ

11:46 AM Jan 13, 2017 | Team Udayavani |

ಮೈಸೂರು: ಮೈಸೂರನ್ನು ಪಾರಂಪರಿಕ ನಗರ ಎಂದು ಅಧಿಕೃತವಾಗಿ ಘೋಷಣೆ ಮಾಡುವುದು, ನಗರಪಾಲಿಕೆ ತೆರಿಗೆ ಸಂಗ್ರಹದ ಪ್ರಮಾಣವನ್ನು ಹೆಚ್ಚಿಸುವುದು, ಹೆಚ್ಚುತ್ತಿರುವ ವಾಹನ ನಿಲುಗಡೆ ಸಮಸ್ಯೆಗೆ ಈಗಿನಿಂದಲೇ ಪರಿಹಾರ ಕಂಡುಕೊಳ್ಳುವುದು ಸೇರಿದಂತೆ ಹತ್ತು ಹಲವು ಸಲಹೆಗಳು ಗುರುವಾರ ನಡೆದ ನಗರಪಾಲಿಕೆ ಬಜೆಟ್‌ ಪೂರ್ವಭಾವಿ ಸಭೆಯಲ್ಲಿ ಕೇಳಿಬಂತು.

Advertisement

ಮೇಯರ್‌ ಎಂ.ಜೆ. ರವಿಕುಮಾರ್‌ ಅಧ್ಯಕ್ಷತೆಯಲ್ಲಿ ನಡೆದ 2017-18ನೇ ಸಾಲಿನ ಬಜೆಟ್‌ನ ಸಾರ್ವಜನಿಕ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿದ್ದ ಜನಪ್ರತಿನಿಧಿಗಳು, ನಗರಪಾಲಿಕೆ ಮಾಜಿ ಸದಸ್ಯರು, ವಿವಿಧ ಸಂಘ-ಸಂಸ್ಥೆಗಳು, ಎನ್‌ಜಿಒಗಳ ಸದಸ್ಯರು ನಗರದ ಅಭಿವೃದ್ಧಿಗೆ ಹಾಗೂ ಪಾಲಿಕೆ ಆದಾಯ ಹೆಚ್ಚಳಕ್ಕೆ ಪೂರಕವಾಗುವ ಬಜೆಟ್‌ ಮಂಡಿಸುವಂತೆ ಸಲಹೆಗಳನ್ನು ಸಭೆಯ ಮುಂದಿಟ್ಟರು.

ಮೈಸೂರು ಗ್ರಾಹಕರ ಪರಿಷತ್‌ನ ಮಹೇಂದ್ರ ಮಾತನಾಡಿ, ಆಸ್ತಿ ತೆರಿಗೆ ಸಮರ್ಪಕ ವಸೂಲಿಗೆ ಕ್ರಮವಹಿಸಬೇಕು. ಪಾಲಿಕೆ ವ್ಯಾಪ್ತಿಯಲ್ಲಿರುವ ವಾಣಿಜ್ಯ ಮಳಿಗೆಗಳ ತೆರಿಗೆ ಹೆಚ್ಚಿಸುವುದು, ವಾಣಿಜ್ಯ ಸ್ಥಳಗಳು ಹಾಗೂ ವಾಹನ ನಿಲುಗಡೆ ಸ್ಥಳಗಳಲ್ಲಿ ಮೀಟರ್‌ ಆಧಾರದಲ್ಲಿ ಶುಲ್ಕ ಸಂಗ್ರಹಿಸುವುದು, ನೀರು ಪೋಲು ಮಾಡು ವವರಿಂದ ದುಪ್ಪಟ್ಟು ತೆರಿಗೆ ಸಂಗ್ರಹಿಸುವುದು, ಪ್ರಮುಖ ಕಡೆಗಳಲ್ಲಿ ಸಾರ್ವಜನಿಕ ಶೌಚಾ ಲಯಗಳನ್ನು ನಿರ್ಮಿಸುವುದು ಸೇರಿದಂತೆ ಇನ್ನಿತರ ಸಲಹೆಗಳನ್ನು ನೀಡಿದರು.

ಪಾಲಿಕೆ ಮಾಜಿ ಸದಸ್ಯ ಎಂ.ಶಿವಣ್ಣ, ನಗರದಲ್ಲಿರುವ 29 ಕಂದಾಯ ಬಡಾವಣೆಗೆ ಪಾಲಿಕೆಯಿಂದಲೇ ಎಲ್ಲಾ ರೀತಿಯ ಮೂಲ ಸೌಕರ್ಯಗಳನ್ನು ನೀಡಲಾಗುತ್ತಿದೆ. ಆದರೆ, ಇದಕ್ಕೆ ಪೂರಕವಾಗಿ ಪಾಲಿಕೆಗೆ ತೆರಿಗೆ ಸಂಗ್ರಹವಾಗುತ್ತಿದೆಯೋ? ಇಲ್ಲವೋ ಎಂಬ ಬಗ್ಗೆ ಪಾಲಿಕೆ ಸದಸ್ಯರು, ಅಧಿಕಾರಿಗಳು ಗಮನವಹಿಸಬೇಕು. ಜತೆಗೆ ವಾಣಿಜ್ಯ ಕಟ್ಟಡಗಳ ಸಮೀಪ ಇರುವ ಅವೈಜಾnನಿಕ ವಾಹನ ನಿಲುಗಡೆಯನ್ನು ಸರಿಪಡಿಸುವ ಬಗ್ಗೆ ಬಜೆಟ್‌ನಲ್ಲಿ ಆದ್ಯತೆ ನೀಡುವಂತೆ ಮನವಿ ಮಾಡಿದರು.

ಎಸಿಐಸಿಎಂ ಸಂಚಾಲಕ ಎಂ.ಲಕ್ಷ್ಮಣ, ಪ್ರತಿಬಾರಿ ಬಜೆಟ್‌ ಸಂದರ್ಭದಲ್ಲಿ ಸಾರ್ವ ಜನಿಕರು ಹಾಗೂ ಸಂಘ – ಸಂಸ್ಥೆಗಳಿಂದ ಸಲಹೆಗಳನ್ನು ಸಂಗ್ರಹಿಸಲಾಗುತ್ತದೆ. ಆದರೆ ಬಜೆಟ್‌ ರೂಪಿಸುವ ಸಂದರ್ಭದಲ್ಲಿ ಈ ಸಲಹೆಗಳನ್ನು ಪರಿಗಣಿಸಲಾಗುತ್ತದೆಯೇ ಎಂಬ ಬಗ್ಗೆ ಸಾಕಷ್ಟು ಅನುಮಾನವಿದೆ. ಈ ಹಿಂದಿನ ಬಜೆಟ್‌ನಲ್ಲಿ ಪ್ರವಾಸಿಗರ ಮಾಹಿತಿ ಕೇಂದ್ರ ಆರಂಭಿಸುವ ಬಗ್ಗೆ ಚರ್ಚೆ ನಡೆದಿದ್ದು, ಇದರ ಪ್ರಗತಿ ಏನೆಂಬುದು ಇಂದಿಗೂ ತಿಳಿಯುತ್ತಿಲ್ಲ.

Advertisement

ಮೈಸೂರು ನಗರವನ್ನು ಪಾರಂಪರಿಕ ನಗರ ಎಂದು ಘೋಷಿಸುವಂತೆ ಸಲಹೆ ನೀಡಲಾಗಿದ್ದರೂ, ಈ ಬಗ್ಗೆ ಯಾವ ಪ್ರಯೋಜನವೂ ಆಗಿಲ್ಲ. ಒಂದೊಮ್ಮೆ ಮೈಸೂರನ್ನು ಪಾರಂಪರಿಕ ನಗರ ಎಂದು ಘೋಷಿಸಿದರೆ ಕೇಂದ್ರದಿಂದ ಸಾಕಷ್ಟು ಅನುದಾನ ದೊರೆಯಲಿದ್ದು, ಇದರಿಂದ ನಗರದ ಅಭಿವೃದ್ಧಿಗೆ ಅನುಕೂಲವಾಗಲಿದೆ. ಇದಲ್ಲದೆ ಮೈಸೂರು ನಗರ ಪಾಲಿಕೆಯನ್ನು ಬೃಹತ್‌ ಮೈಸೂರು ಮಹಾನಗರ ಪಾಲಿಕೆ ಮಾಡುವ ಜತೆಗೆ ನಗರದ ನಾಲ್ಕು ಕಡೆಗಳಲ್ಲಿ ತ್ಯಾಜ್ಯ ವಿಂಗಡಣೆ ಘಟಕಗಳ ಆರಂಭಕ್ಕೆ ಅಗತ್ಯವಿರುವ ಜಮೀನು ಖರೀದಿಸಲು, ಕೆರೆಗಳ ನಿರ್ವಹಣೆ ಮಾಡಲು ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಅವಕಾಶ ಕಲ್ಪಿಸಬೇಕೆಂಬ ಸಲಹೆಗಳನ್ನು ನೀಡಿದರು.

ಮೈಸೂರು ಕೈಗಾರಿಕೆಗಳ ಸಂಘದ ಕಾರ್ಯ ದರ್ಶಿ ಸುರೇಶ್‌ಕುಮಾರ್‌ ಜೈನ್‌, ಮಾಜಿ ಶಾಸಕಿ ಮುಕ್ತಾರುನ್ನಿಸಾ ಬೇಗಂ, ಮಾಜಿ ಮೇಯರ್‌ ದಕ್ಷಿಣಾಮೂರ್ತಿ ಸೇರಿದಂತೆ ಹಲವರು ತಮ್ಮ ಸಲಹೆ, ಅಭಿಪ್ರಾಯಗಳನ್ನು ನೀಡಿದರು. ಸಭೆಯಲ್ಲಿ ಉಪ ಮೇಯರ್‌ ರತ್ನ ಲಕ್ಷ್ಮಣ್‌, ಪಾಲಿಕೆ ತೆರಿಗೆ ಮತ್ತು ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ವಿ.ಮಲ್ಲೇಶ್‌, ಪಾಲಿಕೆ ಸದಸ್ಯರಾದ ಶಿವಕುಮಾರ್‌, ಪುರುಷೋತ್ತಮ್‌, ಕೆ.ಟಿ.ಚಲುವೇಗೌಡ ಇನ್ನಿತರರು ಹಾಜರಿದ್ದರು.

ಮೈಸೂರನ್ನು ಪಾರಂಪರಿಕ ನಗರವೆಂದು ಘೋಷಣೆ ಮಾಡುವ ಕುರಿತು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗುವುದು. ಆ ಬಳಿಕ ಪಾಲಿಕೆ ಸದಸ್ಯರ ನಿಯೋಗದೊಂದಿಗೆ ಮುಖ್ಯ ಮಂತ್ರಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುತ್ತದೆ.
-ಎಂ.ಜೆ.ರವಿಕುಮಾರ್‌, ಮೇಯರ್‌

Advertisement

Udayavani is now on Telegram. Click here to join our channel and stay updated with the latest news.

Next