Advertisement

ದುಂದು ವೆಚ್ಚಕ್ಕೆ ಕಡಿವಾಣ ಹಾಕಲು ಸಲಹೆ

12:53 PM Mar 05, 2018 | |

ಸಿಂದಗಿ: ಸಾಮೂಹಿಕ ವಿವಾಹಗಳಿಂದ ದುಂದು ವೆಚ್ಚಕ್ಕೆ ಕಡಿವಾಣ ಹಾಕಲು ಸಾಧ್ಯ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು. ರವಿವಾರ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಡಾ| ಮಂಜುಳಾ ಫೌಂಡೇಶನ್‌ ವತಿಯಿಂದ ಆಯೋಜಿಸಲಾಗಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಬಡತನದ ಬೇಗೆಯಲ್ಲಿ ಬಳಲುತ್ತಿದ್ದರೂ ಸಾಲ ಶೂಲ ಮಾಡಿ ಮದುವೆ ಮಾಡುವ ಸಂಧರ್ಭದಲ್ಲಿ ತಮ್ಮ ಮದುವೆ ಹಣ ಉಳಿಸಿ ಬಡ ಜನರ ಮದುವೆಗೆ ಖರ್ಚು ಮಾಡುತ್ತಿರುವ ಡಾ| ಮಂಜುಳಾ ಗೋವರ್ಧನಮೂರ್ತಿ ಕ್ರಮ ಆದರ್ಶವಾಗಿದೆ ಎಂದರು. 

ನೇತೃತ್ವ ವಹಿಸಿದ್ದ ಸಾರಿಗೆ ಸಚಿವ ಎಂ. ರೇವಣ್ಣ ಮಾತನಾಡಿ, ಸಿಂದಗಿ ತಾಲೂಕಿನ ಅಭಿವೃದ್ಧಿ ಬಗ್ಗೆ ಮಂಜುಳಾ ಬಹಳಷ್ಟು ಕನಸು ಹೊಂದಿದ್ದಾರೆ. ಈ  ಕನಸುಗಳನ್ನು ನನಸು ಮಾಡಲು ಡಾ| ಮಂಜುಳಾ ಫೌಂಡೇಶ್‌ನ ಪ್ರಾರಂಭಿಸಿದ್ದು ಫೌಂಡೇಶನ್‌ ವತಿಯಿಂದ ಸಾಮೂಹಿಕ ವಿವಾಹ ಆಯೋಜಿಸಿದ್ದಾರೆ. ತಮ್ಮ ಮದುವೆ ಹಣ ಉಳಿಸಿ ಬೇರೆ ಜೋಡಿಗಳ ಬದುಕಿನಲ್ಲಿ ನಂದಾ ದೀಪವಾಗಿದ್ದಾರೆ. 

ಕಳೆದ ಮೂರು ವರ್ಷಗಳಲ್ಲಿ ಸಿಂದಗಿ ಮತಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಕಾರ್ಯಗಳನ್ನು ಮಾಡಿದ್ದಾರೆ. ತಮ್ಮ ರಾಜಕೀಯ ಶಕ್ತಿಯಿಂದ ವಿವಿಧ ಇಲಾಖೆಗಳಿಂದ ನೂರಾರು ಕೋಟಿ ರೂಪಾಯಿಗಳ ಅನುದಾನ ಈ ಕ್ಷೇತ್ರಕ್ಕೆ ಹರಿದು ಬರುವಂತೆ ಮಾಡಿದ್ದಾರೆ. ಅವರು ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಆಕಾಂಕ್ಷೆಯನ್ನು ಹೊಂದಿದ್ದಾರೆ ಎಂದರು. 

ಡಾ| ಮಂಜುಳಾ ಅವರು ಸಿಂದಗಿ ಕ್ಷೇತ್ರದಲ್ಲಿ ಸಾಮಾಜಿಕ ಸೇವೆ ಮಾಡುವ ಉದ್ದೇಶದಿಂದ ಕಳೆದ 3 ವರ್ಷಗಳಿಂದ ಸಿಂದಗಿ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ಸರಕಾರದಲ್ಲಿರುವ ದೊಡ್ಡ ದೊಡ್ಡ ವ್ಯಕ್ತಿಗಳೊಂದಿಗೆ ಒಡನಾಡಿಯಾಗಿದ್ದರಿಂದ ಅವರ ಮಾರ್ಗದರ್ಶನದಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ಯಾವುದೇ ಅಧಿಕಾರದಲ್ಲಿ ಇಲ್ಲದಿದ್ದರೂ ತಾಲೂಕಿನ ಬಳಗಾನೂರ ಗ್ರಾಮಕ್ಕೆ 35 ಲಕ್ಷ ರೂ., ಗ್ರಾಮಗಳ ರಸ್ತೆಗಳ ಅಭಿವೃದ್ಧಿಗಾಗಿ ಆರ್‌ಡಿಪಿ ಯೋಜನೆಯಡಿ 50 ಲಕ್ಷ ರೂ., ಕುಡಿಯುವ ನೀರಿಗಾಗಿ 45 ಲಕ್ಷ ರೂ., ಅಂಬೇಡ್ಕರ್‌ ನಿಗಮದಿಂದ 50 ಲಕ್ಷ ರೂ., ಕಂಬಳ ನೇಕಾರರಿಗೆ 125 ಮನೆಗಳು, ಎಸ್‌ ಇಪಿ ಯೋಜನೆಯಡಿ 50 ಲಕ್ಷ, 500 ಮನೆಗಳ ಮಂಜೂರಾತಿ ಹೀಗೆ ಹತ್ತು ಹಲವು ಯೋಜನೆಗಳು ಕ್ಷೇತ್ರದ ಅಭಿವೃದ್ಧಿಗೆ ಮಾಡಿದ್ದಾರೆ ಎಂದರು.

Advertisement

ಅಬಕಾರಿ ಸಚಿವ ಆರ್‌.ಬಿ. ತಿಮ್ಮಾಪುರ, ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಶರಣಪ್ಪ ಸುಣಗಾರ ಮಾತನಾಡಿ, ಮದುವೆಗೆ ಮಾಡಿದ ಸಾಲ ಮುಟ್ಟಿಸಲು 4-5 ವರ್ಷ ಜೀತಕ್ಕಾಗಿ ಇರಬೇಕಾಗಿತ್ತು. ಅವರಿಗೆ ಹುಟ್ಟಿದ ಮಗು ಎಮ್ಮೆ ಕಾಯುವ ಕಾಲವಿತ್ತು. ಸಾಮೂಹಿಕ ವಿವಾಹ ನಡೆಯುವುದರಿಂದ ದುಂದು ಹಣ ಖರ್ಚಾಗುವುದಿಲ್ಲ. ಡಾ| ಮಂಜುಳಾ ಹಮ್ಮಿಕೊಂಡ ಸಾಮೂಹಿಕ ವಿವಾಹ ಮಾದರಿಯಾಗಲಿ ಎಂದರು. 

ಡಾ| ಮಂಜುಳಾ ಗೋವರ್ಧನ ಮಾತನಾಡಿ, ಮದುವೆ ಬದುಕಿನ ಪ್ರಮುಖ ಘಟ್ಟ. ಈ ಘಟ್ಟವನ್ನು ಸರಿಯಾದ ರೀತಿಯಲ್ಲಿ ಹೊಂದಲು ಹಲವಾರು ಜನರಿಗೆ ಸಾಧ್ಯವಿಲ್ಲ. ಅದರಲ್ಲೂ ಪ್ರಮುಖವಾಗಿ ಆರ್ಥಿಕತೆ ಬಹಳ ಪ್ರಮುಖ ಪಾತ್ರ ವಹಿಸುತ್ತಿದೆ. 

ಆರ್ಥಿಕವಾಗಿ ಹಿಂದುಳಿದಂತಹ ಜನರ ಬದುಕಿನಲ್ಲಿ ಬೆಳಕನ್ನು ಮೂಡಿಸುವ ಉದ್ದೇಶ ನಮ್ಮದಾಗಿದೆ. ನಾನು ಹಾಗೂ ನನ್ನ ಪತಿ ನಮ್ಮ ಮದುವೆ ಹಣ ಉಳಿಸಿ ಇಂದು ಮದುವೆಯಾಗುತ್ತಿರುವ 25 ಜೋಡಿಗಳ ಮದುವೆಯಲ್ಲಿ ಸಂತಸ ಕಾಣುತ್ತಿದ್ದೇವೆ ಎಂದರು.

ಸಿಂದಗಿ ವಿಧಾನಸಭಾ ಕ್ಷೇತ್ರದ ಪ್ರಬಲ ಟಿಕೆಟ್‌ ಆಕಾಂಕ್ಷಿಯಾಗಿದ್ದೇನೆ. ನಾನು ನಿಮ್ಮ ಮನೆ ಮಗಳಾಗಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತೇನೆ. ಇದಕ್ಕೆ ಜನರ ಸಹಕಾರ ಅಗತ್ಯವಾಗಿದೆ. ಯುವಕರು ಅದ್ಧೂರಿ ವಿವಾಹ ಮಾಡಿಕೊಳ್ಳದೇ ಸರಳ ಮದುವೆಯಾಗಬೇಕು. ಹಣವನ್ನು ಸಮಾಜಸೇವೆಗೆ ಬಳಸಬೇಕು ಎಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ 25 ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಕಾರ್ಯಕ್ರಮದ ರೂವಾರಿ ಡಾ| ಮಂಜುಳಾ ಗೋವರ್ಧನಮೂರ್ತಿ ಅವರನ್ನು ಸ್ವಾಮಿಗಳು ಹಾಗೂ ಹಿರಿಯರು ಸನ್ಮಾನಿಸಿದರು. 

ಬೋರಗಿ-ಪುರದಾಳದ ತಪೋರತ್ನಂ ಮಹಾಲಿಂಗೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು. ಕನಕ ಗುರುಪೀಠದ ತಿಂಥಣಿ ಬ್ರಿಜ್‌ ಸಿದ್ದರಾಮನಪುರಿ, ಗುರುದೇವಾಶ್ರಮದ ಶಾಂತಗಂಗಾಧರ ಸ್ವಾಮೀಜಿ, ಆಲಮೇಲದ ಜಗದೇವ ಮಲ್ಲಿಬೊಮ್ಮ ಸ್ವಾಮೀಜಿ, ಆಸಂಗಿಹಾಳದ ಶಂಕರಾನಂದ ಮಹಾರಾಜರು, ಚಲನಚಿತ್ರ ನಿರ್ಮಾಪಕ ಗೋವರ್ಧನಮೂರ್ತಿ, ಡಾ| ಮಂಜುಳಾ ಫೌಂಡೇಶನ್‌ ಅಧ್ಯಕ್ಷ ರಂಗನಗೌಡ ಪಾಟೀಲ, ಕಾಂಗ್ರೆಸ್‌ ಯುವ ಮುಖಂಡ ಮಲ್ಲಿಕಾರ್ಜುನ ಸಾವಳಸಂಗ, ಪುರಸಭೆ ಸದಸ್ಯ ರಾಜಶೇಖರ ಕೂಚಬಾಳ, ಇಕ್ಬಾಲ್‌ ತಲಕಾರಿ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಶರಣಪ್ಪ ಪೂಜಾರಿ, ಗಡಿನಾಡು ಪ್ರಾಧಿಕಾರದ ಮಾಜಿ ಅಧ್ಯಕ್ಷ ಸುಭಾಷ್‌ ಛಾಯಾಗೋಳ, ಸಂತೋಷ ಹರನಾಳ, ಸಿದ್ದು ಬುಳ್ಳಾ, ಶಿವು ಮುಡಗಿ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next