Advertisement

ಬೈವೋಲ್ಟಿನ್‌ ರೇಷ್ಮೆ ಬೇಸಾಯ ಮಾಡಲು ಸಲಹೆ

07:40 AM Feb 19, 2019 | |

ಮಾಲೂರು: ಅಂತಾರಾಷ್ಟ್ರಿಯ ಮಟ್ಟದಲ್ಲಿ ಗುಣಮಟ್ಟದ ಸ್ಪರ್ಧೆಯ ನಡುವೆ ಸೂಕ್ತ ಲಾಭದಾಯಕ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು ರೈತರು ಬೈವೋಲ್ಟಿನ್‌ ರೈಷ್ಮೆ ಬೇಸಾಯದಲ್ಲಿ ತೊಡಗಬೇಕೆಂದು ಕೇಂದ್ರ ರೇಷ್ಮೆ ಮಂಡಳಿ ನಿರ್ದೇಶಕ ಹನುಮಂತರಾಮಪ್ಪ ತಿಳಿಸಿದರು.

Advertisement

ತಾಲೂಕಿನ ದಿನ್ನೂರು ಅಲಗೊಂಡಹಳ್ಳಿ ಸಮೀಪದಲ್ಲಿ ಪ್ರಗತಿ ಪರ ರೇಷ್ಮೆ ಬೆಳೆಗಾರರಾದ ವಿಜಯಕುಮಾರ್‌, ಮುರಳಿ ಮತ್ತು  ಅಲಗೊಂಡಹಳ್ಳಿ ಗೋವಿಂದಪ್ಪ  ಅವರು ನೂತನವಾಗಿ ಆರಂಭಿಸಿರುವ ಬೈವೋಲ್ಟಿನ್‌ ರೇಷ್ಮೆ ಬಿತ್ತನೆ ಕೋಠಿ ಉದ್ಘಾಟಿಸಿ ಮಾತನಾಡಿದರು.

ಮಾರುಕಟ್ಟೆಯಲ್ಲಿ ಚೀನಾ ರೇಷ್ಮೆ: ರೇಷ್ಮೆ ಉತ್ಪಾದನೆಯಲ್ಲಿ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳು ಅಗ್ರಸ್ಥಾನದಲ್ಲಿವೆ. ಇತ್ತೀಚಿನಲ್ಲಿ ಅಂತಾರಾಷ್ಟ್ರಿಯ ಮಾರುಕಟ್ಟೆಯಲ್ಲಿ ತೀವ್ರವಾದ ಬೆಲೆ ಸಮರ ಎದುರಿಸುತ್ತಿರುವ ದೇಶದ ರೈತರು ಗುಣಮಟ್ಟದ ರೇಷ್ಮೆ ಉತ್ಪಾದನೆಯಲ್ಲಿ ಹಿಂದೆ ಸರಿದಿದ್ದಾರೆ.

ಅಲ್ಲದೇ, ಚೀನಾ ರೇಷ್ಮೆ ಅಂತಾರಾಷ್ಟ್ರಿಯ ಮಾರುಕಟ್ಟೆ ವ್ಯಾಪಿಸಿಕೊಳ್ಳುವಂತಾಗಿದೆ.  ಈ ನಿಟ್ಟಿನಲ್ಲಿ ರೈತರು ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಅಂತಾರಾಷ್ಟ್ರಿಯ ಮಾರುಕಟ್ಟೆಯಲ್ಲಿ ಬಾರಿ ಬೇಡಿಕೆ ಸೃಷ್ಟಿಸಿಕೊಂಡಿರುವ ಬೈವೋಲ್ಟಿನ್‌ ರೇಷ್ಮೆ ಉತ್ಪಾದಿಸಿ ಎಂದು ಹೇಳಿದರು. 

500 ಕೋಟಿ ರೂ. ಅನುದಾನ: ಕೇಂದ್ರದಲ್ಲಿನ ಪ್ರಧಾನಿ ನರೇಂದ್ರಮೋದಿ ಅವರ ಸರ್ಕಾರ ಪ್ರತಿವರ್ಷ 400 ರಿಂದ 500 ಕೋಟಿರೂ.,ಗಳ ಅನುದಾನವನ್ನು ರೇಷ್ಮೆ ಇಲಾಖೆಗೆ ನೀಡುತ್ತಿದೆ. ಇದರ ಉದ್ದೇಶ ಚೈನಾ ರೇಷ್ಮೆಯನ್ನು ಅಂತಾರಾಷ್ಟ್ರಿಯ ಮಾರಾಕಟ್ಟೆಯಿಂದ ತಡೆಯುವುದೇ ಆಗಿದೆ.

Advertisement

ಅಂತಾರಾಷ್ಟ್ರಿಯ ಮಾರುಕಟ್ಟೆಯಲ್ಲಿ ಅತಿಯಾದ ಬೇಡಿಕೆ ಇರುವ ಭೈವೋಲ್ಟಿನ್‌ ರೇಷ್ಮೆ ಉತ್ಪಾದನೆಯಲ್ಲಿ ರಾಜ್ಯದ ಎಲ್ಲಾ ರೇಷ್ಮೆ ಬೆಳೆಗಾರರು ತೊಡಗಿಸಿಕೊಂಡದಲ್ಲಿ ಮುಂದಿನ ಒಂದೂವರೆ ವರ್ಷದಲ್ಲಿ ಚೀನಾ ರೇಷ್ಮೆಯನ್ನು ಅಂತಾರಾಷ್ಟ್ರಿಯ ಮಾರುಕಟ್ಟೆಯಿಂದ ತಡೆಯಬಹುದಾಗಿದೆ. ಈ ನಿಟ್ಟಿನಲ್ಲಿ ಪ್ರತಿವರ್ಷ ಕೇಂದ್ರ ಸರಕಾರ 2163 ಕೋಟಿರೂ.ಗಳನ್ನು ಆಧುನಿಕ ಉಪಕರಣಗಳ ಖರೀದಿಗೆ ಬಳಕೆ ಮಾಡುತ್ತಿರುವುದಾಗಿ ತಿಳಿಸಿದರು.

ಅಗತ್ಯ ನೆರವು: ರೈತರು ಅಧುನಿಕ ಪದ್ಧತಿಗಳನ್ನು ಬಳಕೆ ಮಾಡಿಕೊಂಡು ಗುಣಮಟ್ಟದ ಬೈವೋಲ್ಟಿನ್‌ ರೇಷ್ಮೆ ಉತ್ಪಾದನೆಯಲ್ಲಿ ತೊಡಗಿಸಿಕೊಳ್ಳಲು ಅನುಕೂಲವಾಗಲು ತಾಲೂಕಿನ ದಿನ್ನೂರು ಗ್ರಾಮದ ಬಳಿ ಬೈವೋಲ್ಪಿನ್‌ ರೇಷ್ಮೆ ಚಾಕಿ ಕೇಂದ್ರ ಆರಂಭಿಸಲಾಗಿದೆ. ಕೇಂದ್ರ ರೇಷ್ಮೆ ಮಂಡಳಿ ಬಿತ್ತನೆ ಚಾಕಿ ಕೇಂದ್ರಕ್ಕೆ ಅಗತ್ಯ ನೆರವು ನೀಡಲು ಸಿದ್ಧವಾಗಿದೆ ಎಂದರು.

ಜಾಗೃತಿ: ರೇಷ್ಮೆ ಇಲಾಖೆ ಆಯುಕ್ತ ಮಂಜುನಾಥ್‌ ಮಾತನಾಡಿ, ರಾಜ್ಯದಲ್ಲಿ ಗುಣಮಟ್ಟದ ಬೈವೋಲ್ಟಿನ್‌ ರೇಷ್ಮೆ ಉತ್ಪಾದನೆ ಪ್ರೋತ್ಸಾಹಿಸಲು ಇಲಾಖೆ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದೆ. ರೈತರಿಗೆ ಪ್ರಾತ್ಯಕ್ಷಿಗಳ ಮೂಲಕ ತರಬೇತಿ ಕಾರ್ಯಗಾರಗಳ ಜೊತೆಗೆ ಆಧುನಿಕ ಪದ್ಧತಿಯಲ್ಲಿ ರೇಷ್ಮೆ ಉತ್ಪಾದನೆ ಬಗ್ಗೆ  ಜಾಗೃತಿ ಮೂಡಿಸುತ್ತಿದೆ ಎಂದು ತಿಳಿಸಿದರು. ರೇಷ್ಮೆ ಗೂಡು ಮಾರಾಟದಲ್ಲಿ ರೈತರಿಗೆ ಮಧ್ಯವರ್ತಿಗಳಿಂದ ಉಂಟಾಗುವ ನಷ್ಟ ತಪ್ಪಿಸಲು ಇ.ಪೇಮೆಂಟ್‌ ಮೂಲಕ ರೈತರ ಭ್ಯಾಂಕ್‌ಖಾತೆಗೆ ನೇರವಾಗಿ ಹಣಸಂದಾಯ ಮಾಡಲಾಗುತ್ತದೆ ಎಂದರು. 

ಉತ್ತಮ ವಾತಾವರಣ: ರೇಷ್ಮೆ ಬೀಜೋತ್ಪಾದನೆ ವಿಜ್ಞಾನಿ ಡಾ.ಮುನಿಸ್ವಾಮಿಗೌಡ ಮಾತನಾಡಿ, ರಾಜ್ಯದ ಇತರೆ ಜಿಲ್ಲೆಗಳಿಗಿಂತ ಕೋಲಾರ-ಚಿಕ್ಕಬಳ್ಳಾಪುರ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಬೈವೋಲ್ಟಿನ್‌ ರೇಷ್ಮೆ ಬೇಸಾಯಕ್ಕೆ ಉತ್ತಮ ವಾತಾವರಣವಿದೆ. ಈ ಭಾಗದ ರೈತರು ಬೈವೋಲ್ಟಿನ್‌ ರೇಷ್ಮೆ ಉತ್ಪಾದನೆಯಲ್ಲಿ ತೊಡಗಿಸಿಕೊಳ್ಳುವಂತೆ ತಿಳಿಸಿದರು.

ಪ್ರಯೋಗಶಾಲೆ ಅಗತ್ಯ: ವಿಜ್ಞಾನಿ ಡಾ.ಶ್ರೀನಿವಾಸ್‌ ಮಾತನಾಡಿ, ಈ ಭಾಗದಲ್ಲಿ ಇನ್ನೂ ಹೆಚ್ಚಿನ ಚಾಕಿ ಕೇಂದ್ರಗಳನ್ನು ಆರಂಭಿಸುವ ಗುರಿ ಹೊಂದಿದ್ದು ಚಾಕಿ ಕೇಂದ್ರಗಳ ಜೊತೆಗೆ ಪ್ರಯೋಗಶಾಲೆಗಳ ಅಗತ್ಯವೂ ಇದೆ ಎಂದರು. ಕಾರ್ಯಕ್ರಮದಲ್ಲಿ ರೇಷ್ಮೆ ಇಲಾಖೆ ಆಯುಕ್ತ ಮಂಜುನಾಥ್‌, ಉಪನಿರ್ದೇಶಕ ಎಸ್‌.ಪಿ.ಕುಮಾರ್‌, ಸುಮನಾಸಿಂಗ್‌, ಪ್ರಭಾಕರ್‌, ಸಹ ನಿರ್ದೇಶಕ ಅಶ್ವತ್ಥನಾರಾಯಣ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next