Advertisement
ನಗರದ ಜಿಪಂ ಸ್ಥಾಯಿ ಸಮಿತಿ ಸಭಾಂಗಣದಲ್ಲಿ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿಯ ಸಭೆಯಲ್ಲಿ ಮಾತನಾಡಿದ ಅವರು, ವೃತ್ತಿಪರ ಕುಶಲ ಕರ್ಮಿಗಳಿಗೆ ಉಚಿತ ಸುಧಾರಿತ ಸಲಕರಣೆಗಳು ಕ್ಷೌರಿಕ, ಅಗಸರಿಗೆ ನೀಡಲಾಗುತ್ತಿದ್ದು, ಬಡಿಗ, ಕುಂಬಾರ ಸೇರಿದಂತೆ ಎಲ್ಲಾ ಕುಶಲ ಕರ್ಮಿಗಳಿಗೆ ಇದರ ಸೌಕರ್ಯ ದೊರೆಯುವಂತಾಗಬೇಕು ಎಂದು ಹೇಳಿದರು.
Related Articles
Advertisement
ಮೀನುಗಾರಿಕೆ ಇಲಾಖೆ ಎಲ್ಲಾ ಯೋಜನೆಗಳ ಕುರಿತು ಸಮಗ್ರವಾಗಿ ಪರಿಶೀಲಿಸಲು ಅಧ್ಯಕ್ಷರು ದಿನಾಂಕ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು. ಮೀನುಗಾರಿಕೆ, ರೇಷ್ಮೆ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸರ್ಕಾರದ ಯೋಜನೆಗಳ ಕುರಿತು ಜನಪ್ರತಿನಿಧಿಗಳಿಗೆ ಸಮರ್ಪಕ ಮಾಹಿತಿ ನೀಡಿ, ಇದರಿಂದಾಗಿ ಗ್ರಾಮೀಣ ಭಾಗದ ಜನರಿಗೆ ತಿಳಿಸಿ ಹೆಚ್ಚಿನ ಸಂಖ್ಯೆಯಲ್ಲಿ ಲಾಭ ಪಡೆಯುವಂತಾಗುತ್ತದೆ ಎಂದು ಜಿಪಂ ಸದಸ್ಯ ಭೀಮರೆಡ್ಡಿ ಬಳಿಚಕ್ರ ಹೇಳಿದರು.
ತೋಟಗಾರಿಕೆ ಕುರಿತು ಜಿಲ್ಲೆಯ ರೈತರಿಗೆ ಹೆಚ್ಚಿನ ಮಾಹಿತಿ ಒದಗಿಸಲು ಅಧಿಕಾರಿಗಳು ಮುಂದಾಗ ಬೇಕು. ಪಾಲಿಹೌಸ್ ನಿರ್ಮಾಣದ ಕುರಿತು ರೈತರಲ್ಲಿ ಜಾಗೃತಿ ಮೂಡಿಸಬೇಕು ತೋಟಗಾರಿ ಉಪನಿರ್ದೇಶಕರಿಗೆ ಸೂಚಿಸಲಾಯಿತು.
ಕೃಷಿ ಜಂಟಿ ನಿರ್ದೇಶಕಿ ದೇವಿಕಾ ಆರ್. ಮಾತನಾಡಿ, ಜಿಲ್ಲೆಯಲ್ಲಿ ಪ್ರಸಕ್ತ ಹಿಂಗಾರು ಹಂಗಾಮಿನಲ್ಲಿ ಶೇ. 40.63 ಬಿತ್ತನೆಯಾಗಿದ್ದು, ಶೇ. 81ರಷ್ಟು ಮಳೆ ಕೊರತೆಯಾಗಿದೆ ಎಂದು ವಿವರಿಸಿದರು. ಜಿಲ್ಲೆ ಬರಗಾಲ ಪೀಡಿತ ಎಂದು ಘೋಷಣೆಯಾಗಿದ್ದು, 99 ಕೋಟಿ ರೂ. ಹಾನಿ ಅಂದಾಜಿಸಲಾಗಿದೆ. ಕೇಂದ್ರದ ಬರ ಅಧ್ಯಯನ ತಂಡ ಪರಿಶೀಲಿಸಿದ್ದು, ರೈತರ ಖಾತೆಗೆ ನೇರವಾಗಿ ಪರಿಹಾರ ಜಮಾ ಆಗಲಿದೆ ಎಂದರು.
ಜಿಲ್ಲೆಯ ಬೆಂಡೆಬೆಂಬಳಿ, ಮುದನೂರ, ಅರಕೇರಾ (ಕೆ), ಯರಗೋಳನಲ್ಲಿ ರೈತ ಸಂಪರ್ಕ ಕೇಂದ್ರ ಆರಂಭಿಸುವ ಬೇಡಿಕೆ ಇದ್ದು, ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಲಾಗಿದೆ. 1262 ಕೃಷಿ ಹೊಂಡ ನಿರ್ಮಾಣದ ಗುರಿಯಿದ್ದು, 615 ಪೂರ್ಣವಾಗಿದ್ದು, ಫೆಬ್ರವರಿ ವೇಳೆ ಸಂಪೂರ್ಣ ಗುರಿ ಸಾಧಿಸುವುದಾಗಿ ಸಭೆಗೆ ತಿಳಿಸಿದರು.
ಹಾವು ಕಡಿದು ಸಾವನ್ನಪ್ಪುವ ರೈತರಿಗೆ ಪರಿಹಾರ ವಿತರಣೆಯಲ್ಲಿ ವಿಳಂಬ ಆಗುತ್ತಿರುವುದಕ್ಕೆ ಅಸಮಧಾನ ವ್ಯಕ್ತಪಡಿಸಿದ ಸದಸ್ಯರು, ರೈತರ ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸುವಂತೆ ತಿಳಿಸಿದರು. ಸಮಿತಿ ಅಧ್ಯಕ್ಷೆ ಸರಸ್ವತಿ ಹೊನಗೇರಾ, ಜಿಪಂ ಸದಸ್ಯೆ ಗಿರಿಜಮ್ಮ, ಅಶೋಕರೆಡ್ಡಿ ಗೋನಾಳ ಇದ್ದರು. ವಿವಿಧ ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.