Advertisement
ಮೈಸೂರು ಪ್ರವಾಸಿಗರ ನೆಚ್ಚಿನ ತಾಣವಾದರೂ ದಸರಾ ಸಂದರ್ಭದ ಸೆಪ್ಟೆಂಬರ್, ಅಕ್ಟೋಬರ್ ತಿಂಗಳಲ್ಲೇ ಎಲ್ಲ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಇನ್ನುಳಿದ ಹತ್ತು ತಿಂಗಳು ಯಾವುದೇ ಕಾರ್ಯಕ್ರಮ ಇರುವುದಿಲ್ಲ. ಹೀಗಾಗಿ ಮೈಸೂರಿಗೆ ಬರುವ ಬಹುತೇಕ ಪ್ರವಾಸಿಗರು ಅರಮನೆ, ಮೃಗಾಲಯ ನೋಡಿಕೊಂಡು ಮೈಸೂರಿನಿಂದ ತೆರಳುತ್ತಿರುವುದರಿಂದ ಇಲ್ಲಿ ಪ್ರವಾಸೋದ್ಯಮ ಲಾಭದಾಯಕವಾಗುತ್ತಿಲ್ಲ ಎಂದು ಮೈಸೂರು ಟೂರಿಸ್ಟ್ ಅಸೋಸಿಯೇಷನ್‌ನ ಪ್ರಶಾಂತ್, ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ ಗೌಡ ಮತ್ತಿತರರು ಸಭೆಯ ಗಮನ ಸೆಳೆದರು.
ಮುಗಿದ ಬಳಿಕ ಪ್ರವಾಸಿಗರು ಹೊರ ಹೋಗುವ ದ್ವಾರದ ಬಳಿ ಆಯೋಜಿಸಿದರೆ ಪ್ರವಾಸಿಗರನ್ನು ಮೈಸೂರಿನಲ್ಲೇ ಹಿಡಿದಿಡಲು ಅನುಕೂಲ ವಾಗುತ್ತದೆ. ಇದರಿಂದ ಹೋಟೆಲ್, ಲಾಡ್ಜ್ ಗಳಿಗೆ ಆದಾಯ ಬರುತ್ತದೆ. ಜತೆಗೆ ನಿತ್ಯ ಸಂಜೆ 6 ರಿಂದ 8ರವರೆಗೆ ಫಾಸ್ಟ್ ಮ್ಯೂಸಿಕ್ ಅಥವಾ ಪಾರಂಪರಿಕ ಸಂಗೀತ ಕಾರ್ಯಕ್ರಮಗಳನ್ನು ಪುರಭವನದಲ್ಲಿ ಆಯೋಜಿಸಬಹುದಾಗಿದೆ ಎಂದು ಸಲಹೆ ನೀಡಿದರು. ಕೆ.ಎಸ್. ನಾಗಪತಿ ಮಾತನಾಡಿ, ಯೋಗ, ಆರ್ಯುವೇದ, ಸಂಗೀತ, ನೃತ್ಯ, ಶಿಕ್ಷಣದ ಉದ್ದೇಶಕ್ಕಾಗಿ ಹೆಚ್ಚು ಜನರು ಮೈಸೂರಿಗೆ ಬರುತ್ತಾರೆ. ಆದರೆ, ಅಡ್ವೆಂಚರ್ ಟೂರಿಸಂಗೆ ಮೈಸೂರಿನಲ್ಲಿ ಉತ್ತೇಜನ ಸಿಕ್ಕಿಲ್ಲ. ದಸರಾ ನಂತರದ ದಿನಗಳಲ್ಲೂ ಮೈಸೂರಿನಲ್ಲಿ ಸುಸ್ಥಿರ ಟೂರಿಸಂ ಮಾಡಬಹುದು. ಇದಕ್ಕಾಗಿ 8-10 ಜನರ ಒಂದು ತಂಡ ರಚಿಸುವಂತೆ ಹೇಳಿದರು.
Related Articles
Advertisement
ರಾತ್ರಿ 10ರವರೆಗೆ ಜೂ ತೆರೆಯಿರಿ: ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ ಗೌಡ ಮಾತನಾಡಿ, ಚಾಮುಂಡಿಬೆಟ್ಟದಲ್ಲಿ ಶನಿವಾರ ಮತ್ತು ಭಾನುವಾರಗಳಂದು ರಾತ್ರಿ ವೇಳೆ ಹೆಚ್ಚಿನ ಸಂಚಾರ ದಟ್ಟಣೆ ಇರುತ್ತದೆ. ಇದರಿಂದ ಅಪಘಾತ ಗಳಾಗುವ ಸಂಭವ ಹೆಚ್ಚಿದೆ. ಹೀಗಾಗಿ ಬೆಟ್ಟಕ್ಕೆ ಏಕಮುಖ ಸಂಚಾರ ವ್ಯವಸ್ಥೆ ಮಾಡಿ, ರಾತ್ರಿ 10ರವರೆಗೆ ಮೃಗಾಲಯ ವೀಕ್ಷಣೆ ಅವಕಾಶ ಕಲ್ಪಿಸುವ ಜತೆಗೆ ಅರಮನೆ ಹಿಂಭಾಗದಲ್ಲಿ ಸಾಕಷ್ಟು ಖಾಲಿ ಜಾಗ ಇದ್ದು, ಇಲ್ಲಿ ಉದ್ಯಾನ ನಿರ್ಮಿಸುವಂತೆ ಸಲಹೆ ನೀಡಿದರು.
ಔಟ್‌ಬ್ಯಾಕ್ ಅಡ್ವೆಂಚರ್ ಕಂಪನಿಯ ಅಲೀಂ ಮಾತನಾಡಿ, ವರುಣ ಕೆರೆಯಲ್ಲಿ ಜಲಕ್ರೀಡೆಗೆ ಸಾಕಷ್ಟು ಅವಕಾಶಗಳಿವೆ. ಆದರೆ, ಹೆಚ್ಚು ಹೂಡಿಕೆ ಮಾಡಬೇಕಿರುವುದರಿಂದ ಒಂದು ವರ್ಷದಲ್ಲಿ ಆಗುವುದಿಲ್ಲ. ಹೀಗಾಗಿ ಐದು ವರ್ಷದ ಯೋಜನೆ ರೂಪಿಸಿ ಎಂದು ಹೇಳಿದರು.
ಮಹಾಜನ ಕಾಲೇಜು ಪ್ರವಾಸೋದ್ಯಮ ವಿಭಾಗದ ಮುಖ್ಯಸ್ಥೆ ಉಷಾರಾಣಿ ಮಾತನಾಡಿ, ಮೈಸೂರು ಅರಸರ ಹಿಂದಿನ ರಾಜಧಾನಿ ಶ್ರೀರಂಗಪಟ್ಟಣದಲ್ಲೂ ಪ್ರವಾಸೋದ್ಯಮಕ್ಕೆ ಸಾಕಷ್ಟು ಅವಕಾಶಗಳಿವೆ. ಆದರೆ, ಶ್ರೀರಂಗಪಟ್ಟಣವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಹೀಗಾಗಿ ಮೈಸೂರು ಹೆರಿಟೇಜ್ ಅಥವಾ ರಾಯಲ್ ಹೆರಿಟೇಜ್ ರೈಲು ಸೇವೆ ಒದಗಿಸಿ ಮೈಸೂರಿನ ಜತೆಗೆ ಶ್ರೀರಂಗಪಟ್ಟಣವನ್ನೂ ಪರಿಚಯಿಸುವ ಕೆಲಸ ಮಾಡಿ ಎಂದರು. ಶ್ರೀಹರಿ ಮಾತನಾಡಿ, ಯೋಗದಿನಕ್ಕೆ ಜಿಲ್ಲಾಡಳಿತದ ವತಿಯಿಂದ ಈಗಿನಿಂದಲೇ ಸಿದ್ಧತೆ ಆರಂಭಿಸಿ, ಕನಿಷ್ಠ 25 ಸಾವಿರ ಜನರು ಸೇರುವಂತೆ ಕಾರ್ಯಕ್ರಮ ರೂಪಿಸುವಂತೆ ಮನವಿ ಮಾಡಿದರು.
ಉಳಿದಂತೆ ಪ್ರವಾಸೋದ್ಯಮ ಚಟುವಟಿಕೆಗೆ ಡಿಜಿಟಲ್ ವೇದಿಕೆ ಒದಗಿಸುವಿಕೆ, ಕುಕ್ಕರಹಳ್ಳಿ ಕೆರೆ ಆವರಣದಲ್ಲಿ ಕುವೆಂಪು ಅವರ ಪ್ರತಿಮೆ ನಿರ್ಮಾಣ, ಹೆರಿಟೇಜ್ ಹೋಂ ಸ್ಟೇ, ಹೆರಿಟೇಜ್ ಶೋ ಆಯೋಜಿಸುವ ಬಗ್ಗೆಯೂ ಹಲವರು ಸಭೆಯಲ್ಲಿ ಸಲಹೆ ನೀಡಿದರು. ಮೈಸೂರು ಮಹಾ ನಗರಪಾಲಿಕೆ ಆಯುಕ್ತ ಜಗದೀಶ್, ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಜನಾರ್ದನ್, ಪ್ರೊಬೆಷನರಿ ಐಪಿಎಸ್ ಅಧಿಕಾರಿ ಅರುಣಾಂಶು ಗಿರಿ ಸೇರಿದಂತೆ ಹಲವರು ಸಭೆಯಲ್ಲಿ ಉಪಸ್ಥಿತರಿದ್ದರು.
“ಪ್ರವಾಸೋದ್ಯಮ ಕ್ಯಾಲೆಂಡರ್’ಮೈಸೂರು: ಪ್ರವಾಸೋದ್ಯಮಕ್ಕೆ ಇನ್ನಷ್ಟು ಉತ್ತೇಜನ ನೀಡುವ ಮೂಲಕ ಮೈಸೂರು ನಗರ ಮತ್ತು ಜಿಲ್ಲೆಯನ್ನು ವಿಶ್ವ ಹಾಗೂ ದೇಶಕ್ಕೆ ಪರಿಚಯಿಸುವ ದೃಷ್ಟಿಯಿಂದ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಅವಕಾಶವಿದೆ. ಸೆಪ್ಟೆಂಬರ್-ಅಕ್ಟೋಬರ್ ತಿಂಗಳಲ್ಲಿ ದಸರಾ ಬಿಟ್ಟು ಉಳಿದ ತಿಂಗಳುಗಳಲ್ಲಿ ನಿಗದಿತ ಕಾರ್ಯಕ್ರಮಗಳಿಲ್ಲ. ಹೀಗಾಗಿ ಮೈಸೂರಿಗೆ ಪ್ರವಾಸೋದ್ಯಮ ಕ್ಯಾಲೆಂಡರ್ ರೂಪಿಸ ಬಹುದು ಎಂದು ಡೀಸಿ ರಂದೀಪ್ ತಿಳಿಸಿದರು. ಅರಮನೆಯಲ್ಲಿ ಧ್ವನಿ-ಬೆಳಕು ಕಾರ್ಯಕ್ರಮದ ಕನ್ನಡ ಅವತರಣಿಕೆಯನ್ನು ಹಿಂದಿ ಮತ್ತು ಇಂಗ್ಲೀಷ್‌ಗೆ ಅನುವಾದಿಸುವ ಪ್ರಸ್ತಾವ ಇದೆ. ಜತೆಗೆ ಕುಪ್ಪಣ್ಣ ಉದ್ಯಾನದಲ್ಲಿ ಪ್ರತಿ ನಿತ್ಯ ಸಂಗೀತ ಕಾರಂಜಿ ವ್ಯವಸ್ಥೆ, ಅರಮನೆಯಲ್ಲಿ ಹಿಂದೆ ನಡೆಯುತ್ತಿದ್ದು, ಸದ್ಯ ಸ್ಥಗಿತಗೊಂಡಿರುವ ಯುಗಾದಿ ಉತ್ಸವವನ್ನು ಮಾರ್ಚ್, ಎಪ್ರಿಲ್ ತಿಂಗಳಲ್ಲಿ ಪುನಾರಂಭಿಸುವ ಉದ್ದೇಶವಿದೆ. ನಗರದ 400 ಹೆಚ್ಚು ಉದ್ಯಾನಗಳನ್ನು ನಿರ್ವಹಣೆಗಾಗಿ ದತ್ತು ನೀಡಲು ಸಿದ್ಧವಿದ್ದು, ಪುರಭವನ ಸೇರಿದಂತೆ ನಗರದ ಪಾರಂಪರಿಕ ಕಟ್ಟಡಗಳಲ್ಲಿ ಶಾಶ್ವತವಾಗಿ 3ಡಿ ಪ್ರೊಜೆಕ್ಷನ್ ಮಾಡಬಹುದು ಎಂದ ಅವರು, ಕೇವಲ ಹಣದಿಂದಲೇ ಪ್ರವಾಸೋದ್ಯಮ ಉತ್ತೇಜನ ಸಾಧ್ಯವಾಗದು, ಬೇರೆ ಬೇರೆ ದೇಶ, ರಾಜ್ಯಗಳಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಏನೇನು ಮಾಡ ಲಾಗಿದೆ ಎಂದು ತಿಳಿದುಕೊಂಡು ಇಲ್ಲಿಯೂ ಅಳವಡಿಸಿಕೊಳ್ಳಬಹುದಾಗಿದೆ ಎಂದು ಹೇಳಿದರು.