Advertisement
ಮಣಿಪಾಲದ ಸಿಂಡಿಕೇಟ್ ಬ್ಯಾಂಕ್ ಗೋಲ್ಡನ್ ಜುಬಿಲಿ ಸಭಾಂಗಣದಲ್ಲಿ ಗುರುವಾರ ನಡೆದ ಬ್ಯಾಂಕ್ ಸಂಸ್ಥಾಪನ ದಿನಾಚರಣೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬ್ಯಾಂಕ್‌ನ ಎಲ್ಲ ಸಾಧನೆಗಳಿಗೂ ಸ್ಥಾಪಕರ ಉತ್ತಮ ಆಶಯಗಳೇ ಕಾರಣ. ಅವರು ಆರಂಭಿಸಿದ ಕೃಷಿ ಸಾಲ ಈಗ ಆದ್ಯತಾ ರಂಗವಾಗಿದೆ, ಪಿಗ್ಮಿಯಂತಹ ಯೋಜನೆಗಳು ವಿತ್ತೀಯ ಸೇರ್ಪಡೆಯಾಗಿವೆ. ರುಡ್‌ಸೆಟಿ ಈಗ ರಾಷ್ಟ್ರದಲ್ಲಿ ಆರ್‌ಸೆಟಿಯಾಗಿ ಕಾರ್ಯಾ ಚರಿಸುತ್ತಿದೆ. 2001ರಲ್ಲಿ ಕೋರ್ ಬ್ಯಾಂಕಿಂಗ್ ವ್ಯವಸ್ಥೆ ರೂಪಿಸಿದ ಪ್ರಥಮ ರಾಷ್ಟ್ರೀಕೃತ ಬ್ಯಾಂಕ್ ಎಂದರು.ಹೀಗೆ ಅನೇಕ ರೀತಿಯಲ್ಲಿ ಮುಂಚೂಣಿಯಲ್ಲಿರುವ ತಮ್ಮ ಬ್ಯಾಂಕ್ ಬಲಿಷ್ಠ ಬ್ಯಾಂಕ್ ಆಗಿದೆ. ಇದು ಇತರ ಬ್ಯಾಂಕುಗಳನ್ನು ತನ್ನೊಂದಿಗೆ ವಿಲೀನ ಗೊಳಿಸುವುದೇ ವಿನಾ ಅನ್ಯ ಬ್ಯಾಂಕ್‌ನೊಂದಿಗೆ ವಿಲೀನ ಗೊಳ್ಳದು ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸಂಸ್ಥಾಪಕರನ್ನು ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಅವರನ್ನು ಸ್ಮರಿಸಲೋಸುಗ ಸ್ಥಾಪಕರ ಕುಟುಂಬದ ಸದಸ್ಯರನ್ನು ಸಮ್ಮಾನಿಸುತ್ತಿದ್ದೇವೆ ಎಂದು ಪಾಂಡೆ ಹೇಳಿದರು.
ಮಣಿಪಾಲದಲ್ಲಿ ಹಿಂದೆ ಅಂಚೆ ಕಚೇರಿ ಇದ್ದಿರಲಿಲ್ಲ. ಸಿಂಡಿಕೇಟ್ ಬ್ಯಾಂಕ್ ಪ್ರಧಾನ ಕಚೇರಿ ಉಡುಪಿಯಲ್ಲಿತ್ತು. ಮಣಿಪಾಲದಲ್ಲಿ ಅಂಚೆ ಕಚೇರಿ ತೆರೆಯಲು ಅನುವು ಮಾಡಿಕೊಟ್ಟ ಡಾ| ಟಿ.ಎಂ.ಎ. ಪೈಯವರು, ಉಡುಪಿ ಸಿಂಡಿಕೇಟ್ ಬ್ಯಾಂಕ್ ಪ್ರಧಾನ ಕಚೇರಿಗೆ ಬರುವ ಕಾಗದ ಪತ್ರಗಳನ್ನು ಮಣಿಪಾಲದ ಅಂಚೆ ಕಚೇರಿ ಮೂಲಕ ಬರುವಂತೆ ಮಾಡಿದರು ಎಂದು ಮಣಿಪಾಲದ ಅಭಿವೃದ್ಧಿಯನ್ನು ಸುಮಾರು ಆರು ದಶಕಗಳಿಂದ ಹತ್ತಿರದಿಂದ ಕಂಡ ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಆಡಳಿತಾಧಿಕಾರಿ
ಡಾ| ಎಚ್. ಶಾಂತಾರಾಮ್ ಕಾರ್ಯಕ್ರಮವನ್ನು ಉದ್ಘಾಟಿಸಿ ಹೇಳಿದರು.
ಸ್ಥಾಪಕರ ಕುಟುಂಬದ ಸದಸ್ಯರಾದ ಟಿ. ಸತೀಶ್ ಪೈ, ಟಿ. ವಸಂತಿ ಪೈ, ಡಾ| ಸಂಧ್ಯಾ ಎಸ್. ಪೈ, ಗಾಯತ್ರಿ ಎ. ಪೈ ಅವರನ್ನು ಸಮ್ಮಾನಿಸಲಾಯಿತು. ಗ್ರಾಹಕರ ಪರವಾಗಿ ಕ್ಯಾಂಪ್ಕೋ ಅಧ್ಯಕ್ಷ ಸತೀಶ್ಚಂದ್ರ, ಉದ್ಯಮಿಗಳಾದ ಉಡುಪಿಯ ಎಂ. ಸೋಮಶೇಖರ ಭಟ್, ಹೆಬ್ರಿಯ ಎಚ್. ಸತೀಶ್ ಪೈ, ಕವಿ ಸುಬ್ರಾಯ ಚೊಕ್ಕಾಡಿ, ಹಿರಿಯ ಗ್ರಾಹಕ ಕರುಣಾಕರ ಸೈಮನ್, ಎಸೆಸೆಲ್ಸಿ ಪ್ರತಿಭಾವಂತ ರೋಹನ್ ರಾವ್ ಅವರನ್ನು ಸಮ್ಮಾನಿಸಲಾಯಿತು.
ಆಗಿನ ಲಕ್ಷಣ- ಈಗಿನ ಸರ್ಕಲ್: ಮಣಿಪಾಲವೆಂದರೆ ಹಿಂದೆ ಇಲ್ಲಿ ಹುಲಿಗಳು ಓಡಾಡುತ್ತಿದ್ದವು. ಈಗಲೂ ಮಣಿಪಾಲದ ಬಸ್ ನಿಲ್ದಾಣ ವೃತ್ತವನ್ನು ಟೈಗರ್ ಸರ್ಕಲ್ ಎನ್ನುತ್ತೇವೆ. ಇಂತಹ ಕುಗ್ರಾಮದಲ್ಲಿ ಉದ್ದಿಮೆಯನ್ನು ಸ್ಥಾಪಿಸಿದ ನಮ್ಮ ಮಾವನವರು ಮಾಡಿದ ಸಾಧನೆಗೆ ಎಣೆ ಇಲ್ಲ. ಕೇವಲ ಮಣಿಪಾಲಕ್ಕೆ ಸಂಬಂಧಿಸಿಯೇ ನೂರಾರು ಕತೆಗಳು ಇವೆ. ಅವರ ದೂರದರ್ಶಿತ್ವದಿಂದಲೇ ಮಣಿಪಾಲ ಹೀಗೆ ಬೆಳೆದು ನಿಂತಿದೆ ಎಂದು “ತರಂಗ’ದ ವ್ಯವಸ್ಥಾಪಕ ಸಂಪಾದಕಿ ಡಾ| ಸಂಧ್ಯಾ ಎಸ್. ಪೈ ಹೇಳಿದರು. ಶ್ರೇಷ್ಠ ಮಾವ ಕೇಂದ್ರ ಸರಕಾರ
1969ರಲ್ಲಿ ಸಿಂಡಿಕೇಟ್ ಬ್ಯಾಂಕನ್ನು ರಾಷ್ಟ್ರೀಕರಣ ಗೊಳಿಸುವಾಗ ಕೆಲವರು ವಿರೋಧಿಸುವಂತೆ ಡಾ| ಟಿಎಂಎ ಪೈ ಅವರಿಗೆ ತಿಳಿಸಿದರು. ಅದಕ್ಕೆ ಅವರು “ಮಗಳನ್ನು ಬೆಳೆಸಿದ ಬಳಿಕ ಉತ್ತಮ ವರನಿಗೆ ಕೊಡುವುದು ಕ್ರಮ. ಭಾರತ ಸರಕಾರಕ್ಕಿಂತ ಉತ್ತಮ ವರ ಇನ್ನಾರು ಸಿಗುತ್ತಾರೆ’ ಎಂದು ಪ್ರಶ್ನಿಸಿದ್ದರು ಎಂದು ಗಾಯತ್ರಿ ಪೈ ಸ್ಮರಿಸಿಕೊಂಡರು. ಬ್ಯಾಂಕ್ ಮಹಾಪ್ರಬಂಧಕರಾದ ಸತೀಶ್ ಕಾಮತ್ ಸ್ವಾಗತಿಸಿ, ಅಳಗಿರಿ ಸ್ವಾಮಿ ವಂದಿಸಿದರು. ಹಿರಿಯ ಪ್ರಬಂಧಕ ರಂಜನ್ ಕೇಳ್ಕರ್ ಕಾರ್ಯಕ್ರಮ ನಿರ್ವಹಿಸಿದರು. ಬುಧವಾರ ಮಣಿಪಾಲ ಆಸ್ಪತ್ರೆ, ಕೆಎಂಸಿ ಸಹಕಾರದಿಂದ ರಕ್ತದಾನ ಶಿಬಿರವನ್ನು ನಡೆಸಲಾಯಿತು.