ಹಾವೇರಿ: ಜಿಲ್ಲೆಯಲ್ಲಿ ಹೈನುಗಾರಿಕೆ, ಕುರಿ-ಮೇಕೆ ಸಾಕಾಣಿಕೆ ಹಾಗೂ ಕೋಳಿ ಸಾಕಾಣಿಕೆ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರಿಗೆ ವಿವಿಧ ಯೋಜನೆಯಡಿ ಸಹಾಯಧನ ವಿತರಣೆ ಕಾರ್ಯಕ್ರಮವನ್ನು ಅಭಿಯಾನದ ರೂಪದಲ್ಲಿ ಹಮ್ಮಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಪ್ರಾಣಿ ದಯಾ ಸಂಘ ಹಾಗೂ ಕಿಸಾನ್ ಕ್ರೆಡಿಟ್ ಕಾರ್ಡ್ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳನ್ನು ರೈತರಿಗೆ ತಲುಪಿಸುವಲ್ಲಿ ಅ ಕಾರಿಗಳು ಕ್ರಿಯಶೀಲರಾಗಿ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಯೋಜನೆಗಳ ಕುರಿತಂತೆ ಮಾಹಿತಿ ನೀಡಲು ವ್ಯಾಪಕ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವಂತೆ ಸಲಹೆ ನೀಡಿದರು.
ಹೈನುಗಾರಿಕೆ, ಕೃಷಿ ಪೂರಕ ಚಟುವಟಿಕೆಯಾಗಿ ಕುರಿ-ಮೇಕೆ, ಕೋಳಿ ಸಾಕಾಣಿಕೆ ಚಟುವಟಿಕೆಗೆ ರೈತಾಪಿ ವರ್ಗದವರಿಗೆ ಪ್ರೋತ್ಸಾಹ ಮತ್ತು ನೆರವು ಒದಗಿಸಲು ಪಶುಪಾಲನಾ ಮತ್ತು ಪಶುಣವೈದ್ಯಕೀಯ ಸೇವಾ ಇಲಾಖೆ, ಲೀಡ್ ಬ್ಯಾಂಕ್, ಹಾವೇರಿ ಹಾಲು ಒಕ್ಕೂಟ, ಕೆಸಿಪಿಎಫ್ ಹಾಗೂ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧಿಕಾರಿಗಳು ಸಮನ್ವಯದೊಂದಿಗೆ ಕ್ರಿಯಾಶೀಲರಾಗಿ ಕೆಲಸ ಮಾಡಬೇಕೆಂದು ಸೂಚನೆ ನೀಡಿದರು.
ಸರ್ಕಾರಿ ಗೋಶಾಲೆಗೆ ದಾಖಲಿಸಿ: ಅಕ್ರಮವಾಗಿ ಜಾನುವಾರು ಸಾಗಾಣಿಕೆ ತಡೆಗಟ್ಟಿ ರಕ್ಷಣೆ ಮಾಡಿದ ಜಾನುವಾರುಗಳನ್ನು ಸರ್ಕಾರಿ ಗೋಶಾಲೆಗೆ ದಾಖಲಿಸಿ ರಕ್ಷಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ, ಉಪವಿಭಾಗಾಧಿಕಾರಿಗಳಿಗೆ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮೂರು ಗೋಶಾಲೆ ಮಂಜೂರು: ಜಿಲ್ಲೆಗೆ 2022-23ನೇ ಸಾಲಿನಲ್ಲಿ 3 ಹೆಚ್ಚುವರಿ ಗೋಶಾಲೆಗಳು ಮಂಜೂರಾಗಿರುವ ಕುರಿತಂತೆ ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ಎಸ್.ವಿ ಸಂತಿ ಸಭೆಗೆ ಮಾಹಿತಿ ನೀಡಿದರು. ಸವಣೂರು ತಾಲೂಕಿನ ಕೆಳಲಕೊಂಡ, ರಾಣಿಬೆನ್ನೂರ ತಾಲೂಕಿನ ಕುದ್ರಿಹಾಳ ಹಾಗೂ ಶಿಗ್ಗಾವಿ ತಾಲೂಕಿನ ಕುನ್ನೂರನಲ್ಲಿ ಮಂಜೂರಾದ ಹೊಸ ಗೋಶಾಲೆ ಆರಂಭಿಸಲು ಸ್ಥಳ ಗುರುತಿಸಲಾಗಿದೆ. ಗುತ್ತಲನಲ್ಲಿ ಒಂದು ಸರ್ಕಾರಿ ಗೋಶಾಲೆ ಸಿದ್ಧವಾಗಿದ್ದು, ಯಾವುದೇ ಜಾನುವಾರುಗಳು ದಾಖಲಾಗಿರುವುದಿಲ್ಲ ಎಂದು ಸಭೆಗೆ ಮಾಹಿತಿ ನೀಡಿದರು.
ಸಮನ್ವಯ ಸಂಯೋಜಕ ರಾಘವೇಂದ್ರ ಡಿ.ಎಸ್. ಮಾತನಾಡಿ, ಗೋ ಉತ್ಪನ್ನಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಸಹಕಾರ ನೀಡುವುದಾಗಿ ತಿಳಿಸಿದರು.
ನೇಮಕ: ಗಾಯಗೊಂಡ ಪ್ರಾಣಿಗಳನ್ನು ತಕ್ಷಣ ರಕ್ಷಿಸಲು ಸ್ವಯಂ ಸಹಾಯಕರನ್ನಾಗಿ ಶಿತಲ ಜೈನ್ ಅವರನ್ನು ನೇಮಿಸಲಾಯಿತು. ಪ್ರಾಣಿ ಕಲ್ಯಾಣಕ್ಕೆ ಸಂಬಂಧಿಸಿದಂತೆ ಕಾನೂನು ಕ್ರಮಗಳ ಕುರಿತು ಸಲಹೆ ನೀಡಲು ಜಿ.ಸಿ.ಗಿರಿಯಪ್ಪನವರ ಅವರನ್ನು ಸಭೆಯಲ್ಲಿ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಡಿವೈಎಸ್‌ಪಿ, ಜಿಲ್ಲಾ ಯೋಜನಾ ನಿರ್ದೇಶಕರು, ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಎಸ್‌ಪಿಸಿಎ ಇಲಾಖೇತರ ಸದಸ್ಯರು, ಲೀಡ್ ಬ್ಯಾಂಕ್ ವ್ಯವಸ್ಥಾಪಕರು, ಡಿಡಿಎಂ ನಬಾರ್ಡ್, ಮೀನುಗಾರಿಕೆ ಇಲಾಖೆಯ ಅಧಿ ಕಾರಿಗಳು, ಅರಣ್ಯ ಇಲಾಖೆ ಅಧಿಕಾರಿಗಳು, ಕೆಎಂಎಫ್ ಪ್ರತಿನಿಧಿಗಳು ಹಾಗೂ ಪಶುಪಾಲನಾಮತ್ತು ಪಶುವೈದ್ಯ ಸೇವಾ ಇಲಾಖೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.