ಬೆಂಗಳೂರು: ಪವಿತ್ರ ರಂಜಾನ್ ಹಬ್ಬವನ್ನು ರಾಜಧಾನಿಯಲ್ಲಿ ಸೋಮವಾರ ಸಡಗರ -ಸಂಭ್ರಮದಿಂದ ಆಚರಿಸಲಾಯಿತು. ಒಂದು ತಿಂಗಳ ಉಪವಾಸ ವ್ರತಾಚರಣೆ ನಂತರ ಮುಸ್ಲಿಂ ಬಾಂಧವರು ಬಿಳಿ ಹಾಗೂ ವಿವಿಧ ಬಣ್ಣದ ಕುರ್ತಾ ಹಾಗೂ ಟೋಪಿ ಧರಿಸಿ ಈದ್ಗಾ ಮೈದಾನಗಳಲ್ಲಿ ಪ್ರಾರ್ಥನೆ ಸಲ್ಲಿಸಲು ಸಂಭ್ರದಿಂದ ತೆರಳುವ ದೃಶ್ಯ ನಗರದೆಲ್ಲೆಡೆ ಸಾಮಾನ್ಯವಾಗಿತ್ತು.
ಪ್ರಾರ್ಥನೆಯ ನಂತರ ಪರಸ್ಪರ ಶುಭಾಶಯ ಕೋರಿಕೆ, ಪರಸ್ಪರ ಆಲಿಂಗನ ಮಾಡುವ ಮೂಲಕ ಹಬ್ಬದ ಸಂದೇಶವನ್ನು ಹಂಚಿಕೊಂಡರು. ಕೆಲವೆಡೆ ಸಿಹಿ ವಿತರಣೆಯೂ ನಡೆಯಿತು. ಮಿಲ್ಲರ್ ರಸ್ತೆ, ಮೈಸೂರು ರಸ್ತೆ, ಟ್ಯಾನರಿ ರಸ್ತೆ, ಕಲಾಸಿಪಾಳ್ಯಂ, ಯಶವಂತಪುರ, ಜಗಜೀವನ್‌ರಾಂ ನಗರ, ಬನ್ನೇರುಘಟ್ಟ ರಸ್ತೆ, ಹೊಸೂರು ರಸ್ತೆ, ಜಾನ್ಸನ್ ಮಾರ್ಕೆಟ್, ತಿಲಕ್ ನಗರ, ಇಲಿಯಾಸ್ ನಗರ, ಜೆಪಿ ನಗರದ ಈದ್ಗಾ ಮೈದಾನ ಹಾಗೂ ಮಸೀದಿಗಳಲ್ಲಿ ಆಯೋಜಿಸಿದ್ದ ಸಾಮೂಹಿಕ ಪ್ರಾರ್ಥನೆಯಲ್ಲಿ ಸಾವಿರಾರು ಮುಸ್ಲಿಂ ಬಾಂಧವರು ಪಾಲ್ಗೊಂಡಿದ್ದರು.
ನಾಗವಾರದ ಅರೇಬಿಕ್ ಕಾಲೇಜು ಆವರಣದಲ್ಲಿ ಬೆಳಗ್ಗೆ 9 ಗಂಟೆಗೆ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಉಪಸ್ಥಿತರಿದ್ದು, ಮುಸ್ಲಿಂ ಬಾಂಧವರಿಗೆ ಶುಭ ಹಾರೈಸಿದರು.
ಎಲ್ಲೆಡೆ ಶಾಂತಿ ನೆಲೆಸಿ, ಎಲ್ಲರೂ ಶಾಂತಿಯುತವಾಗಿ ಬಾಳುವಂತಾಗಲಿ. ರಾಜ್ಯದಲ್ಲಿ ತೀವ್ರ ಬರಗಾಲವಿದೆ. ಮುಂಬರುವ ದಿನಗಳಲ್ಲಿ ಉತ್ತಮ ಮಳೆಗಾಗಿ ಪ್ರಾರ್ಥನೆ ನಡೆಸಿದ್ದೇವೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಉತ್ತಮ ಮಳೆಯಾಗಿ ಬರ ಪರಿಸ್ಥಿತಿ ಕೊನೆಗೊಳ್ಳಲಿದೆ ಎಂದು ಆಶಾ ಭಾವನೆ ವ್ಯಕ್ತಪಡಿಸಿದರು.
ಪೊಲೀಸ್ ಬಂದೋಬಸ್ತ್: ರಂಜಾನ್ ಆಚರಣೆ ಹಿನ್ನೆಲೆಯಲ್ಲಿ ಮುನ್ನಚ್ಚರಿಕೆಯಾಗಿ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ರಂಜಾನ್ ಸಾಮೂಹಿಕ ಪ್ರಾರ್ಥನೆ ನಡೆಯುವ ಪ್ರದೇಶದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ ಕೈಗೊಂಡಿದ್ದು, ಕೆಲವು ಮುಖ್ಯರಸ್ತೆಗಳಲ್ಲಿ ಪರ್ಯಾಯ ಸಂಪರ್ಕ ವ್ಯವಸ್ಥೆ ಮಾಡಲಾಗಿತ್ತು. ಹೊಯ್ಸಳ ಸೇರಿ ಅಲ್ಲಲ್ಲಿ ಪೊಲೀಸ್ ಗಸ್ತು ವಾಹನ ಸುತ್ತಾಡುತ್ತಿದ್ದು, ಸಂಚಾರ ನಿಯಂತ್ರಣಕ್ಕೆ ಹೆಚ್ಚುವರಿ ಟ್ರಾಫಿಕ್ ಪೊಲೀಸರನ್ನು ನಿಯೋಜಿಸಲಾಗಿತ್ತು.