ದಾವಣಗೆರೆ: ಮರ್ಯಾದ ಪುರುಷೋತ್ತಮ ಎಂದೇ ಆರಾಧಿಸಲ್ಪಡುವ ಶ್ರೀರಾಮ ಜಯಂತಿ ಬುಧವಾರ ದಾವಣಗೆರೆಯ ವಿವಿಧ ದೇವಾಲಯ, ಪ್ರಮುಖ ಬೀದಿ, ವೃತ್ತದಲ್ಲಿ ಅತಿ ಶ್ರದ್ಧೆ, ಭಕ್ತಿ ಪೂರ್ವಕವಾಗಿ ವಿಜೃಂಭಣೆಯಿಂದ ಆಚರಿಸಲಾಯಿತು.
ಪಿಜೆ ಬಡಾವಣೆಯಲ್ಲಿರುವ ಶ್ರೀರಾಮ ಮಂದಿರದಲ್ಲಿ ತೊಟ್ಟಿಲೋತ್ಸವದ ಮೂಲಕ ಶ್ರೀರಾಮ ಜಯಂತಿಗೆ ಚಾಲನೆ ನೀಡಲಾಯಿತು. ವಿಶೇಷ ಪೂಜೆ, ಆರಾಧನೆ, ರಾಮಸೋತ್ರ ಪಠಣ, ಭಕ್ತಾದಿಗಳಿಗೆ ಪಾನಕ- ಕೋಸುಂಬರಿ ವಿತರಣೆ ನಡೆಯಿತು. ಶ್ರೀರಾಮ ಜಯಂತಿ ಅಂಗವಾಗಿ ದಿನವಿಡೀ ವಿಶೇಷ ಪೂಜಾ ಕಾರ್ಯಕ್ರಮ ನಡೆದವು.
ಚಾಮರಾಜಪೇಟೆಯ ಶ್ರೀಕೋದಂಡಧಿ ರಾಮ ದೇವಸ್ಥಾನದಲ್ಲಿ ರಾಮೋತ್ಸವ ಪ್ರಾರಂಭವಾಯಿತು. ಶ್ರೀರಾಮನಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಕೋಸಂಬರಿ, ಪಾನಕ, ಪ್ರಸಾದ ವಿನಿಯೋಗ ನಡೆಯಿತು. ಸಂಜೆ ವಾಸವಿ ಮಹಿಳಾ ಮಂಡಳಿ ಪದಾಧಿಕಾರಿಗಳು ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು.
ಗುರುವಾರ ಬೆಳಗ್ಗೆ 8ಕ್ಕೆ ಶ್ರೀರಾಮ ತಾರಕ ಹೋಮ, ಶ್ರೀ ಸೂಕ್ತ ಹೋಮ, 10 ರಂದು ಪವಮಾನ ಮತ್ತು ನವಗ್ರಹ ಹೋಮ, 11 ರಂದು ಶ್ರೀ ವಿಷ್ಣುಸಹಸ್ರನಾಮ, ಅಂದು ಸಂಜೆ 7ಕ್ಕೆ ಸೀತಾರಾಮ ಕಲ್ಯಾಣೋತ್ಸವ, 12ರ ಬೆಳಗ್ಗೆ 11ಕ್ಕೆ ಶ್ರೀರಾಮ ಪಟ್ಟಾಭಿಷೇಕ, 13 ರಂದು ನಾರಾಯಣ ಸೇವೆ ಹಮ್ಮಿಕೊಳ್ಳಲಾಗಿದೆ.
ರಾಮೋತ್ಸವ ಅಂಗವಾಗಿ ಪ್ರತಿ ದಿನ ಪಂಚಾಮೃತಾಭಿಷೇಕ, ತುಳಸಿ ಅರ್ಚನೆ ನೆರವೇರಿಸಲಾಗುವುದು. ರಾಂ ಅಂಡ್ ಕೋ ವೃತ್ತ, ತೊಗಟವೀರ ಕಲ್ಯಾಣ ಮಂಟಪ ರಸ್ತೆ, ಹೊಂಡದ ವೃತ್ತ, ಕೆಬಿ ಬಡಾವಣೆ, ಭಾರತ್ ಕಾಲೋನಿ, ಎಪಿಎಂಸಿ ಮಾರ್ಕೆಟ್, ಗಡಿಯಾರ ಕಂಬ… ಹೀಗೆ ಹಲವಾರು ಕಡೆ ಶ್ರೀರಾಮ ಜಯಂತಿ ನಡೆಯಿತು. ಶ್ರೀರಾಮನ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ, ಪ್ರಿಯವಾದ ಪಾನಕ-ಕೋಸುಂಬರಿ ವಿತರಿಸಲಾಯಿತು.