ನವದೆಹಲಿ: ಅಯೋಧ್ಯೆಯಲ್ಲಿ ಶ್ರೀ ಶಂಕರಾಚಾರ್ಯರ ಮಂದಿರ ಮತ್ತು ಭಾರತೀಯ ತತ್ವಶಾಸ್ತ್ರದ ಬಗ್ಗೆ ಸಂಶೋಧನಾ ಕೇಂದ್ರ ಸ್ಥಾಪಿಸಲು ಜಮೀನು ಪಡೆಯಲು ಪ್ರಯತ್ನಿಸಲಾಗುತ್ತಿದೆ. ಈ ಬಗ್ಗೆ ಮೈಸೂರು ಜಿಲ್ಲೆಯ ಯೆಡತೊರೆ ಯೋಗಾನಂದೇಶ್ವರ ಸರಸ್ವತಿ ಮಠದ ಶ್ರೀ ಶಂಕರ ಭಾರತಿ ಸ್ವಾಮೀಜಿ ನೇತೃತ್ವದಲ್ಲಿನ ಸ್ವಾಮೀಜಿಗಳ ನಿಯೋಗ ಪ್ರಧಾನಿ ನರೇಂದ್ರ ಮೋದಿಯವರಿಗೆ ಶನಿವಾರ ಮಾಹಿತಿ ನೀಡಿದೆ.
ಜತೆಗೆ ವಾರಾಣಸಿ ಮತ್ತು ಕೇದಾರನಾಥದಲ್ಲಿ ಆದಿ ಶಂಕರರ ಪ್ರತಿಮೆ ಸ್ಥಾಪನೆ ಮಾಡಿ, ಪುಣ್ಯ ಕ್ಷೇತ್ರಗಳ ಪುನರುತ್ಥಾನಕ್ಕಾಗಿ ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಸ್ವಾಮೀಜಿಗಳ ನಿಯೋಗ ಮೆಚ್ಚುಗೆ ವ್ಯಕ್ತಪಡಿಸಿದೆ.
2017ರಲ್ಲಿ ಪ್ರಧಾನಿ ಮೋದಿಯವರು ಬೆಂಗಳೂರಿಗೆ ಆಗಮಿಸಿದ್ದ ವೇಳೆ ವೇದಾಂತ ಭಾರತಿ ಸಂಸ್ಥೆ ಆಯೋಜಿಸಿದ್ದ ಬೃಹತ್ ಸೌಂದರ್ಯ ಲಹರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಸಮಾಜದ ಮೇಲೆ ಆದ ಧನಾತ್ಮಕ ಪರಿಣಾಮಗಳ ಬಗ್ಗೆ ಸ್ವಾಮೀಜಿಗಳ ತಂಡ ವಿವರಿಸಿತು. ಶಂಕರಾಚಾರ್ಯರು ಪ್ರತಿಪಾದಿಸಿದ ತತ್ವಗಳ ಪ್ರಚಾರಕ್ಕಾಗಿ ಶ್ರೀ ಶಂಕರಾಚಾರ್ಯ ಸೇವಾ ಪರಿಷತ್ ಸ್ಥಾಪನೆಯ ಬಗ್ಗೆ ಕೂಡ ಸ್ವಾಮೀಜಿಗಳ ನಿಯೋಗ ಪ್ರಧಾನಿಯವರಿಗೆ ವಿವರಿಸಿತು. ಪ್ರಧಾನಿ ಮೋದಿಯವರು ಎಲ್ಲಾ ಅಂಶಗಳನ್ನು ತಾಳ್ಮೆಯಿಂದ ಆಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಆದಿ ಶಂಕರರು ಸಮಾಜವನ್ನು ಒಗ್ಗೂಡಿಸಿದ ಮಹಾನ್ ಚೇತನ ಎಂದು ಬಣ್ಣಿಸಿದರು ಎಂದು ನಿಯೋಗ ತಿಳಿಸಿದೆ.
ಅಖಿಲ ಭಾರತ ಅಖಾಡಾ ಪರಿಷತ್ ಅಧ್ಯಕ್ಷ ಮಹಾಮಂಡಲೇಶ್ವರ ಸ್ವಾಮಿ ಶ್ರೀ ರವೀಂದ್ರ ಪುರಿಜಿ, ಹರಿದ್ವಾರದ ಮೃತ್ಯುಂಜಯ ಆಶ್ರಮದ ಶ್ರೀಚಿದಂಬರಾನಂದ ಸರಸ್ವತಿ ಜಿ, ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಖಜಾಂಚಿ ಸ್ವಾಮಿ ಗೋವಿಂದ ದೇವಗಿರಿ, ರೋಹ್‌ತಕ್‌ನ ಬ್ರಹ್ಮವೇದಾಮೃತ ಆಶ್ರಮದ ಶ್ರೀ ವಿಶ್ವೇಶ್ವರಾನಂದಗಿರಿಜಿ, ಯೋಗಿ ಸಹಜಾನಂದ ಜಿ ನಿಯೋಗದಲ್ಲಿ ಇದ್ದರು.