Advertisement

ಬಿಜೆಪಿ ಸರಕಾರದಿಂದ ಜನಪರ ಆಡಳಿತ

03:43 PM May 08, 2022 | Team Udayavani |

ಯಲಬುರ್ಗಾ: ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರಗಳು ಜನಪರ ಆಡಳಿತ ನೀಡುತ್ತಿವೆ. ಇತರೆ ರಾಷ್ಟ್ರಗಳಿಗೆ ಇಂದು ಭಾರತ ದೇಶ ವಿಶ್ವ ಗುರುವಾಗಿದೆ ಎಂದು ಸಚಿವ ಹಾಲಪ್ಪ ಆಚಾರ್‌ ಹೇಳಿದರು.

Advertisement

ತಾಲೂಕಿನ ಹಿರೇವಡ್ರಕಲ್‌ ಗ್ರಾಮದಲ್ಲಿ ಶನಿವಾರ 60 ಲಕ್ಷ ರೂ. ವೆಚ್ಚದ ಹಿರೇವಡ್ರಕಲ್‌ -ಗಾಣಧಾಳ ಗ್ರಾಮದವರೆಗೆ ರಸ್ತೆ ಸುಧಾರಣಾ ಕಾಮಗಾರಿ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ನೇರವೇರಿಸಿ ಅವರು ಮಾತನಾಡಿದರು.

ಗ್ರಾಮದಲ್ಲಿ ಈ ಹಿಂದೆ ರೈತರ ಪಹಣಿಗಳಲ್ಲಿ ಲೋಪದೋಷ ಇತ್ತು. ಡಬಲ್‌ ಸರ್ವೇ ನಂಬರಿನಿಂದ ಮಾರಾಟ ಹಾಗೂ ವರ್ಗಾವಣೆ ಮಾಡಲು ಬರುತ್ತಿರಲಿಲ್ಲ ಇದಕ್ಕಾಗಿ ತಹಶೀಲ್ದಾರ್‌ನ್ನು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳನ್ನು ಹತ್ತಾರು ಬಾರಿ ಕರೆದುಕೊಂಡು ಬೆಂಗಳೂರಿಗೆ ಹೋಗಿ ಆ ಸಮಸ್ಯೆ ಶಾಶ್ವತ ಪರಿಹಾರ ಕಂಡುಕೊಂಡು ಪಹಣಿಗಳನ್ನು ಸರಿಪಡಿಸುವ ಮಹತ್ತರ ಕಾರ್ಯ ಮಾಡಿದ್ದೇನೆ. ನಾನು ರೈತನ ಮಗ, ಕೃಷಿ ಕುಟುಂಬದಿಂದ ಬಂದವನು. ರಾಜಕಾರಣಿ ಮಂತ್ರಿ ಎಂಬ ಅಹಂ ನನಗಿಲ್ಲ, ಮಂತ್ರಿಯಾದರೂ ಹಳ್ಳಿಯಲ್ಲಿರುವ ಮಸಬಹಂಚಿನಾಳದ ಪಡಸಾಲೆಯಲ್ಲಿ ನಿತ್ಯ ವಾಸ ಮಾಡುವ ಸರಳ ವ್ಯಕ್ತಿ. ಈ ಹಿಂದೆ ಆಡಳಿತ ನಡೆಸಿದ ಕಾಂಗ್ರೆಸ್‌ ಸರಕಾರ ಜನವಿರೋಧಿ ನೀತಿ, ಆಡಳಿತ ನೀಡಿದ ಫಲದಿಂದ ರಾಜ್ಯ, ರಾಷ್ಟ್ರದಲ್ಲಿ ನೆಲಕಚ್ಚಿದೆ. ಗ್ರಾಮಗಳಲ್ಲಿ ನಡೆಯುವ ಕಾಮಗಾರಿಗಳ ಬಗ್ಗೆ ಜನತೆ ಕಾಳಜಿ ವಹಿಸಿಕೊಳ್ಳಬೇಕು. ತಪ್ಪಾದರೇ ಬರೀ ರಾಜಕಾರಣಿ, ಅಧಿಕಾರಿಗಳಿಗೆ ಬೊಟ್ಟು ಮಾಡಿ ತೋರಿಸಿದರೆ ಸಾಲದು ಜನತೆ ತಮ್ಮ ಜವಾಬ್ದಾರಿ ಅರಿತುಕೊಳ್ಳಬೇಕಿದೆ ಎಂದರು.

ಪ್ರಥಮ ಬಾರಿ ಶಾಸಕನಾದ ನನಗೆ ರಾಜ್ಯ ಸರಕಾರದಲ್ಲಿ ಸಚಿವ ಸ್ಥಾನ ಪಡೆದು ಎರಡು ಪ್ರಬಲ ಖಾತೆಗಳು ಸಿಗಲು ಈ ತಾಲೂಕಿನ ಮತದಾರರ ಆರ್ಶೀವಾದವೇ ಕಾರಣ. ಕ್ಷೇತ್ರದಲ್ಲಿ ನಡೆಯುವ ಕಾಮಗಾರಿಗಳು ಗುಣಮಟ್ಟದಿಂದ ಕೂಡಿವೆ. ಗುಣಮಟ್ಟಕ್ಕೆ ಹೆಚ್ಚು ಒತ್ತು ಕೊಟ್ಟಿದ್ದೇನೆ ಎಂದರು.

ತಹಶೀಲ್ದಾರ್‌ ಶ್ರೀಶೈಲ ತಳವಾರ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ನಿಂಗಮ್ಮ ಹರಿಜನ, ಮುಖಂಡರಾದ ಕಳಕಪ್ಪ ಕಂಬಳಿ, ವೀರಣ್ಣ ಹುಬ್ಬಳ್ಳಿ, ಶಿವಕುಮಾರ ನಾಗಲಾಪುರಮಠ, ಬಸವನಗೌಡ ತೊಂಡಿಹಾಳ, ಶರಣಪ್ಪ ಬಣ್ಣದಭಾವಿ, ಶಿವಪ್ಪ ವಾದಿ, ಅಯ್ಯನಗೌಡ ಕೆಂಚಮ್ಮನವರ, ಹನುಮಂತಪ್ಪ ತರಲಕಟ್ಟಿ, ಈಶ್ವರ ಬೊಮ್ಮನಾಳ, ಇಒ ಎಚ್‌. ಮಹೇಶ, ಪಿಎಸ್‌ಐ ಯು. ಡಾಕೇಶ, ಪಿಡಿಒ ಬಸವರಾಜ ಕಿಳ್ಳಿಕ್ಯಾತರ ಇತರರು ಇದ್ದರು.

Advertisement

ಅಧಿಕಾರ ಇದ್ದಾಗ ಕಣ್ಮುಚ್ಚಿ ನಿದ್ದೆ ಮಾಡುವ ತಾಲೂಕಿನ ಕಾಂಗ್ರೆಸ್‌ ನಾಯಕ, ಇದೀಗ ಕೊಪ್ಪಳ ಏತ ನೀರಾವರಿ ಯೋಜನೆ ಅಂತಿಮ ಹಂತಕ್ಕೆ ತಲುಪುತ್ತಿದ್ದಂತೆ ನಾನೇ ಮಾಡಿದ್ದೇನೆ ಎಂಬ ರೀಲು ಬಿಡುತ್ತಿದ್ದಾರೆ. ಇವರು ಮಾಡಿರುವ ದೊಡ್ಡ ಸಾಧನೆಯಂದರೇ ಪ್ರವಾಸಿ ಮಂದಿರಗಳನ್ನು ನಿರ್ಮಿಸಿದ್ದಾರೆ. ಜನತೆ ಎಲ್ಲವನ್ನೂ ಅರ್ಥ ಮಾಡಿಕೊಳ್ಳುತ್ತಾರೆ. ಮುಂದಿನ ಬೇಸಿಗೆಯೊಳಗೆ ಕೆರೆ ತುಂಬಿಸುತ್ತೇನೆ. ಕ್ಷೇತ್ರ ಇಡೀ ಜಿಲ್ಲೆಯಲ್ಲಿಯೇ ಮಾದರಿಯಾಗುತ್ತಿದೆ. –ಹಾಲಪ್ಪ ಆಚಾರ್‌, ಸಚಿವ

Advertisement

Udayavani is now on Telegram. Click here to join our channel and stay updated with the latest news.

Next