ಗೋರಖ್‌ಪುರ: ಸುಲಿಗೆ ಬೆದರಿಕೆಗಳ ಮೂಲಕ ಜನರನ್ನು ಭಯಭೀತಗೊಳಿಸಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಲೆಕ್ಕಿಸದೆ ಅಪಹರಿಸುತ್ತಿದ್ದ ದರೋಡೆಕೋರರು ಈಗ ನ್ಯಾಯಾಲಯದ ಶಿಕ್ಷೆಯ ನಂತರ ತಮ್ಮ ಪ್ಯಾಂಟ್ ಒದ್ದೆ ಮಾಡಿಕೊಳ್ಳುತ್ತಿದ್ದಾರೆ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶನಿವಾರ ಹೇಳಿದ್ದಾರೆ.
ಬಾಟ್ಲಿಂಗ್ ಪ್ಲಾಂಟ್‌ನ ಭೂಮಿ ಪೂಜೆಯ ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಆದಿತ್ಯನಾಥ್, ‘ಮೊದಲು ಕಾನೂನು ಮತ್ತು ಸುವ್ಯವಸ್ಥೆಗೆ ಸ್ವಲ್ಪವೂ ಗೌರವ ತೋರಿಸದವರು ಈಗ ತಮ್ಮ ಪ್ರಾಣ ಉಳಿಸಿಕೊಳ್ಳುವುದಕ್ಕಾಗಿ ಓಡುತ್ತಿರುವುದನ್ನು ಜನರು ನೋಡುತ್ತಿದ್ದಾರೆ’ ಎಂದರು.
“ನ್ಯಾಯಾಲಯವು ಅವರಿಗೆ ಶಿಕ್ಷೆ ವಿಧಿಸಿದಾಗ, ಅವರ ಒದ್ದೆಯಾದ ಪ್ಯಾಂಟ್ ಗೋಚರಿಸುತ್ತದೆ. ಜನ ಅದನ್ನು ನೋಡುತ್ತಿದ್ದಾರೆ. ಮಾಫಿಯಾವು ಜನರನ್ನು ಭಯಭೀತಗೊಳಿಸುವುದು, ಕೈಗಾರಿಕೋದ್ಯಮಿಗಳಿಗೆ ಸುಲಿಗೆ ಬೆದರಿಕೆಗಳನ್ನು ಕಳುಹಿಸುವುದು, ಉದ್ಯಮಿಗಳನ್ನು ಅಪಹರಿಸುವುದಾಗಿತ್ತು. ಆದರೆ ಇಂದು ಅವರು ತಮ್ಮ ದುಷ್ಟಬುದ್ಧಿಯಿಂದ ಹೊರಬಂದು ಭಯದಿಂದ ಪ್ರಾಣ ಉಳಿಸಿಕೊಳ್ಳುವುದಕ್ಕಾಗಿ ಓಡುತ್ತಿದ್ದಾರೆ” ಎಂದರು.
ಉತ್ತರ ಪ್ರದೇಶದ 25 ಕೋಟಿ ಜನರು ಅಭಿವೃದ್ಧಿಯಲ್ಲಿ ನಂಬಿಕೆ, ಹೂಡಿಕೆಯಲ್ಲಿ ನಂಬಿಕೆ, ಉದ್ಯೋಗದಲ್ಲಿ ನಂಬಿಕೆ, ಡಬಲ್ ಇಂಜಿನ್ ಸರ್ಕಾರದಲ್ಲಿ ನಂಬಿಕೆ ಇಟ್ಟಿದ್ದಾರೆ ಎಂದರು.
2006 ರ ಉಮೇಶ್ ಪಾಲ್ ಅಪಹರಣ ಪ್ರಕರಣದಲ್ಲಿ ದರೋಡೆಕೋರ-ರಾಜಕಾರಣಿ ಅತೀಕ್ ಅಹ್ಮದ್ ಮತ್ತು ಇತರ ಇಬ್ಬರು ತಪ್ಪಿತಸ್ಥರೆಂದು ಜನಪ್ರತಿನಿಧಿಗಳ ನ್ಯಾಯಾಲಯವು ತೀರ್ಪು ನೀಡಿ ಜೀವಾವಧಿ ಶಿಕ್ಷೆ ವಿಧಿಸಿದ ದಿನಗಳ ನಂತರ ಸಿಎಂ ಯೋಗಿ ಅವರ ಈ ಹೇಳಿಕೆಗಳು ಬಂದಿವೆ. ಅಹ್ಮದ್ ವಿರುದ್ಧ 100 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದರೂ ಇದು ಅಹ್ಮದ್‌ಗೆ ಮೊದಲ ಶಿಕ್ಷೆಯಾಗಿದೆ.