Advertisement
ಆದಿತ್ಯ ಎಲ್1 ನೌಕೆಯಲ್ಲಿರುವ ಆದಿತ್ಯ ಸೌರ ಮಾರುತ ಕಣಗಳ ಪ್ರಯೋಗದ ಪೇಲೋಡ್(ಎಎಸ್‌ಪಿಇಎಕ್ಸ್) ತನ್ನ ಕಾರ್ಯಾಚರಣೆಯನ್ನು ಆರಂಭಿಸಿದ್ದು, ಇಡೀ ವ್ಯವಸ್ಥೆ ಸುಸ್ಥಿತಿಯಲ್ಲಿದೆ ಎಂದು ಇಸ್ರೋ ತಿಳಿಸಿದೆ.
ಎಎಸ್‌ಪಿಇಎಕ್ಸ್ ಒಟ್ಟು ಎರಡು ಸಾಧನಗಳನ್ನು ಒಳಗೊಂಡಿದೆ. ಅವೆಂದರೆ ಸೋಲಾರ್ ವಿಂಡ್ ಅಯಾನ್ ಸ್ಪೆಕ್ಟ್ರೋಮೀಟರ್(ಸ್ವಿಸ್) ಮತ್ತು ಸುಪ್ರಾ ಥರ್ಮಲ್ ಆ್ಯಂಡ್ ಎನರ್ಜೆಟಿಕ್ ಪಾರ್ಟಿಕಲ್ ಸ್ಪೆಕ್ಟ್ರೋಮೀಟರ್(ಸ್ಟೆಪ್ಸ್). ಈ ಪೈಕಿ ಸ್ಟೆಪ್ಸ್ ಸಾಧನವು ಸೆ.10ರಂದೇ ತನ್ನ ಕಾರ್ಯಾಚರಣೆ ಆರಂಭಿಸಿದ್ದರೆ ಸ್ವಿಸ್ ಸಾಧನವು ಶನಿವಾರ ಸಕ್ರಿಯಗೊಂಡಿದ್ದು, ಅತ್ಯುತ್ತಮ ಕಾರ್ಯಕ್ಷಮತೆಯನ್ನು ತೋರಿದೆ. ಈ ಸಾಧನವು ಸೌರ ಮಾರುತದ ಅಯಾನುಗಳನ್ನು ಅಂದರೆ ಪ್ರೊಟಾನುಗಳು ಮತ್ತು ಆಲ್ಫಾ ಕಣಗಳನ್ನು ಯಶಸ್ವಿಯಾಗಿ ಅಳೆದಿದೆ. ಇದರಿಂದಾಗಿ ಸೌರ ಮಾರುತದ ಕಣಗಳ ವರ್ತನೆಯ ಸಮಗ್ರ ಚಿತ್ರಣವನ್ನು ಪಡೆಯಲು ಸಾಧ್ಯವಾಗಲಿದೆ. ಜತೆಗೆ ಸೌರ ಮಾರುತದ ಗುಣಲಕ್ಷಣಗಳು, ಅಂತರ್ಗತ ಪ್ರಕ್ರಿಯೆಗಳು ಹಾಗೂ ಭೂಮಿಯ ಮೇಲೆ ಅವುಗಳ ಪ್ರಭಾವದ ಕುರಿತ ದೀರ್ಘಕಾಲದ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವಲ್ಲಿ ಗಮನಾರ್ಹ ಕೊಡುಗೆಯನ್ನು ಇದು ನೀಡಲಿದೆ ಎಂದು ಇಸ್ರೋ ತಿಳಿಸಿದೆ.