ಬಾಗಲಕೋಟೆ : ಕೆರೂರು ಗಲಭೆಗೆ ಸಂಬಂಧಿಸಿದಂತೆ ಸ್ವತಃ ಎಡಿಜಿಪಿ ಅಲೋಕ್ ಕುಮಾರ್ ಫೀಲ್ಡ್‌ಗೆ ಇಳಿದಿದ್ದು, ಗುರುವಾರ ಬಾದಾಮಿ ತಾಲೂಕಿನ ಕೆರೂರು ಪಟ್ಟಣಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ನೈಜ ಆರೋಪಿಗಳ ಪತ್ತೆಗೆ ಸೂಚಿಸಿ, ಕಠಿಣ ಕ್ರಮಕ್ಕೆ ಆದೇಶಿಸಿದ್ದಾರೆ. ಘಟನೆ ಮರುಕಳಿಸಿದರೆ ನಾನೇ ಕೋಲು ಹಿಡಿದುಕೊಂಡು ಬರುತ್ತೇನೆ ಎನ್ನುವ ಮೂಲಕ ಗಲಭೆಕೋರರಿಗೆ ಖಡಕ್ ಸಂದೇಶ ರವಾನಿಸಿದ್ದಾರೆ.
ಕೆರೂರು ಗಲಭೆ ಮುಗಿದು ಸದ್ಯಕ್ಕೆ ಸ್ಥಿತಿ ತಣ್ಣಗಾದರೂ ಇಂದಿಗೂ ಖಾಕಿ ಕಣ್ಗಾವಲು ಮುಂದುವರೆದಿದೆ. ಬಾಕಿ ಉಳಿದ ಗಲಭೆಕೋರರ ಬಂಧನಕ್ಕೆ ಖಾಕಿ ಕಸರತ್ತು ನಡೆಸಿದೆ.ಇದರ ಬೆನ್ನಲ್ಲೇ ಬುಧವಾರ ಮತ್ತು ಇಂದು ಎಡಿಜಿಪಿ ಜಿಲ್ಲೆಯಲ್ಲಿ ಬೀಡು ಬಿಟ್ಟಿದ್ದು, ನಿನ್ನೆ ಗಾಯಾಳುಗಳ ಆರೋಗ್ಯ ವಿಚಾರಿಸಿದರೆ, ಇಂದು ಘರ್ಷಣೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರಿಂದ ಮಾಹಿತಿ ಪಡೆದರು. ಸೂಕ್ತ ಮಾಹಿತಿ ನೀಡದ ಅಂಗಡಿ ಮಾಲೀಕನ ಮೊಬೈಲ್ ಜಪ್ತಿ ಮಾಡಿಸಿ, ಸೂಕ್ತ ಮಾಹಿತಿ ನೀಡದ ಕಾರಣ ಅಂಗಡಿ ಬಂದ್ ಮಾಡಿಸಿದರು. ಮಿಂಚಿನ ಸಂಚಾರ ಮಾಡಿ ಇಂಚಿಂಚು ಮಾಹಿತಿ ಸಂಗ್ರಹ ಮಾಡಿ ಪೊಲೀಸರಿಗೆ ಕ್ಲಾಸ್ ತೆಗೆದುಕೊಂಡರು.
ಜುಲೈ 6 ರಂದು ಗಲಭೆ ನಡೆದ ಸ್ಥಳದಲ್ಲಿ ಬೆಳಗ್ಗೆ ಬಸ್ ನಿಲ್ದಾಣ, ತರಾಕಾರಿ ಮಾರುಕಟ್ಟೆಗೆ ತೆರಳಿ ಸ್ಥಳಿಯರ ವಿಚಾರಣೆ ನಡೆಸಿ ಮಾಹಿತಿ ಪಡೆದರು. ಅಂಗಡಿ ಮಾಲೀಕರು ಘಟನೆ ಕುರಿತು ಮಾಹಿತಿ ನೀಡಿದರು, ಅವರನ್ನು ಐ ವಿಟ್ನೆಸ್ ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ನಂತರ ಕೆರೂರು ಠಾಣೆಯಲ್ಲಿ ಸಭೆ ನಡೆಸಿದರು. ಈ ವೇಳೆ ಅರೆಸ್ಟ್ ಆಗಿದ್ದ ಕೆಲವರ ಕುಟುಂಬಸ್ಥರು ನಮ್ಮವರದು ಏನೂ ತಪ್ಪಿಲ್ಲ.ಘಟನೆ ನಡೆದಾಗ ಅವರು ಬೇರೆ ಕಡೆ ಇದ್ದರು ಅವರನ್ನು ಬಿಡುವಂತೆ ಅಳಲು ತೋಡಿಕೊಂಡರು.ಇದಕ್ಕೆ ಉತ್ತರಿಸಿದ ಎಡಿಜಿಪಿ, ನಾವು ಅಮಾಯಕರನ್ನ ಕೈಬಿಡುತ್ತೇವೆ, ಆದರೆ ನಿಜ ಆರೋಪಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳುತ್ತೇವೆ. ನಮಗೆ ಆರೋಪಿಗಳು ಯಾರು ಅನ್ನುವುದು ಗೊತ್ತಿರುವುದಿಲ್ಲ. ಹಾಗಾಗಿ ವಶಕ್ಕೆ ಪಡೆದಿರುತ್ತೇವೆ, ಅವರು ಅಮಾಯಕರು ಅಂತ ತಿಳಿದರೆ ಕೈಬಿಡುತ್ತೇವೆ ಎಂದರು.
ಪೊಲೀಸ್ ಸಿಬ್ಬಂದಿಗೆ ಕ್ಲಾಸ್ ತೆಗೆದುಕೊಂಡು, ಘಟನೆ ನಡೆದಾಗ ಎಲ್ಲರೂ ಏನು ಮಾಡುತ್ತಿದ್ದಿರಿ, ಈ ಮಟ್ಟಕ್ಕೆ ಹೋಗಲು ಸಿಬ್ಬಂದಿ ನಿರ್ಲಕ್ಷ್ಯವೇ ಕಾರಣ ಎಂದರು.
ಶಾಂತಿಗಾಗಿ ನಡೆದ ಎಡಿಜಿಪಿ ಸಭೆಯಲ್ಲಿ ಕೆರೂರು ಪಟ್ಟಣದ ಮುಖಂಡರು, ಸಾರ್ವಜನಿಕರು, ರಾಜಕೀಯ ನಾಯಕರು ಭಾಗಿಯಾದರು. ಈ ವೇಳೆ ಕೆರೂರು ಠಾಣಾ ವ್ಯಾಪ್ತಿಯ ಕಾಡರಕೊಪ್ಪ ಗ್ರಾಮದ ಬೈಲಪ್ಪ ಮಾದರ ನಾಪತ್ತೆ ಕುರಿತು ಕುಟುಂಬಸ್ಥರು ಆಗಿನ ಪಿಎಸ್‌ಐ ರಾಮಣ್ಣ ಜಲಗೇರಿ ನಮ್ಮ ಕಂಪ್ಲೆಂಟ್ ತೆಗೆದುಕೊಂಡಿರಲಿಲ್ಲ ,ಸರಿಯಾಗಿ ಸ್ಪಂದಿಸಲಿಲ್ಲ ಎಂದರು. ನ್ಯಾಯ ಕೊಡಿಸುವಂತೆ ಬೈಲಪ್ಪ ಮಾದರ ಪತ್ನಿ ರೇಷ್ಮಾ ಕಣ್ಣೀರು ಹಾಕಿದರು. ಸಭೆಯಲ್ಲಿ ಕೆರೂರು ಠಾಣೆಯ ಹಿಂದಿನ ಪಿಎಸ್‌ಐ ರಾಮಣ್ಣ ಜಲಗೇರಿ ಕುರಿತು ಹೆಚ್ಚಿನ ದೂರುಗಳು ಕೇಳಿಬಂದವು.