ಜಮ್ಮು : ‘ಉಗ್ರ ಬೋಧನೆಗಳಿಂದ ದಾರಿ ತಪ್ಪಿರುವ ಕಾಶ್ಮೀರಿ ಯುವಕರನ್ನು ಸರಿದಾರಿಗೆ ತರುವುದೇ ಭಾರತದ ಮುಂದಿರವ ಬಹಳ ದೊಡ್ಡ ಸವಾಲಾಗಿದೆ; ಅಂತೆಯೇ ಜಮ್ಮು ಕಾಶ್ಮೀರ ಇನ್ನೊಂದು ಸಿರಿಯಾ ಆಗುವುದನ್ನು ತಡೆಯುವುದು ಕೂಡ ದೊಡ್ಡ ಸವಾಲಾಗಿದೆ ಎಂದು ಜಮ್ಮು ಕಾಶ್ಮೀರದಲ್ಲಿ ಮಾತುಕತೆಯ ಮಾರ್ಗವನ್ನು ಅನ್ವೇಷಿಸಲು ನೇಮಕಗೊಂಡಿರುವ ನೂತನ ಮದ್ಯವರ್ತಿ ದಿನೇಶ್ವರ್ ಶರ್ಮಾ ಹೇಳಿದ್ದಾರೆ.
“ಕಾಶ್ಮೀರದ ಜನರ ಭವಿಷ್ಯದ ಬಗ್ಗೆ ನನಗೆ ನಿಜಕ್ಕೂ ಭಯ, ಆತಂಕವಿದೆ. ಯುವಕರನ್ನು ದಾರಿ ತಪ್ಪಿಸುವ ಉಗ್ರ ಬೋಧನೆಗೆ ಇನ್ನಷ್ಟು ಯುವಕರು ಬಲಿಯಾದರೆಂದರೆ ಕಾಶ್ಮೀರವು ಇನ್ನೊಂದು ಯೆಮೆನ್, ಸಿರಿಯಾ ಮತ್ತು ಲಿಬಿಯಾ ಆಗುವುದರಲ್ಲಿ ಸಂದೇಹವೇ ಇಲ್ಲ. ಆದುದರಿಂದ ನಾವೆಲ್ಲರೂ ಒಗ್ಗೂಡಿ ಕಾಶ್ಮೀರಿಗಳ ಯಾತನೆಯನ್ನು ಕೊನೆಗಾಣಿಸಲು ಶ್ರಮಿಸಬೇಕಾಗಿದೆ” ಎಂದು ಶರ್ಮಾ ಹೇಳಿದರು.
ಕಾಶ್ಮೀರದಲ್ಲಿ ಹಿಂಸೆಯನ್ನು ಕೊನೆಗಾಣಿಸಲು ರಸ್ತೆ ಬದಿಯ ವ್ಯಾಪರಿಗಳೊಂದಿಗೆ, ಯುವಕರೊಂದಿಗೆ, ಎಲ್ಲರೊಂದಿಗೆ ಮತ್ತು ಪ್ರತಿಯೊಬ್ಬರೊಂದಿಗೆ ನಾನು ಮಾತನಾಡಲು ಬಯಸುತ್ತೇನೆ; ಅದುವೇ ನನ್ನ ಯೋಜನೆಯಾಗಿದೆ ಎಂದು ಶರ್ಮಾ ಹೇಳಿದರು.
ಆಜಾದಿ, ಇಸ್ಲಾಮಿಕ್ ಖಲೀಫಾ ಅಥವಾ ಇಸ್ಲಾಂ ಹೆಸರಿನಲ್ಲಿ ನೀವು ನಿಮ್ಮ ಭವಿಷ್ಯವನ್ನು ಹಾಳು ಮಾಡುತ್ತಿರುವಿರಿ ಎಂದು ಕಾಶ್ಮೀರೀ ಯುವಕರಿಗೆ ಮನವರಿಕೆ ಮಾಡಲು ನಾನು ಬಯಸುತ್ತೇನೆ ಮತ್ತು ಅದು ನನ್ನ ಯೋಜನೆಯ ಮುಖ್ಯ ಭಾಗವಾಗಿರುತ್ತದೆ ಎಂದು ಶರ್ಮಾ ಹೇಳಿದರು.
ಗುಪ್ತಚರ ದಳದ ನಿರ್ದೇಶಕರಾಗಿರುವ ದಿನೇಶ್ವರ್ ಶರ್ಮಾ ಅವರನ್ನು ಕೇಂದ್ರ ಸರಕಾರ ಕಳೆದ ಅ.23ರಂದು ಜಮ್ಮು – ಕಾಶ್ಮೀರ ಸಂವಾದ ಪ್ರಕ್ರಿಯೆಗೆ ಮಧ್ಯವರ್ತಿಯನ್ನಾಗಿ ನೇಮಿಸಿತ್ತು.