Advertisement

ಘನತ್ಯಾಜ್ಯ ನಿರ್ವಹಣೆಗೆ ಹೆಚ್ಚುವರಿ ಸೆಸ್‌?

12:37 PM Jul 17, 2017 | |

ಹುಬ್ಬಳ್ಳಿ: ಮೂರು ವರ್ಷಗಳ ಆಸ್ತಿಕರ ಹೆಚ್ಚಳವನ್ನು ಒಂದೇ ಬಾರಿಗೆ ಜಾರಿಗೊಳಿಸಿದ, ಘನತ್ಯಾಜ್ಯ, ವಾಹನ ಇನ್ನಿತರ ಸೆಸ್‌ -ಕರಗಳನ್ನು ಯಾವುದೇ ವಿರೋಧವಿಲ್ಲದೆ ಜಾರಿಯ ರುಚಿ ಕಂಡಿರುವ ಮಹಾನಗರ ಪಾಲಿಕೆ ಇದೀಗ ಘನತ್ಯಾಜ್ಯ ವಿಷಯವಾಗಿ ಹೆಚ್ಚುವರಿ ಸೆಸ್‌ ಜಾರಿಗೆ ಮುಂದಾಗಿದೆ.

Advertisement

ಘನತ್ಯಾಜ್ಯ ವಿಲೇವಾರಿ ಹೆಸರಲ್ಲಿ ಈಗಾಗಲೇ ಸೆಸ್‌ ಹಾಕುತ್ತಿರುವ ಮಹಾನಗರ ಪಾಲಿಕೆ, ನಿರ್ವಹಣೆ ವೆಚ್ಚದ ನೆಪದಲ್ಲಿ ಇದೀಗ ಹೆಚ್ಚುವರಿ ಸೆಸ್‌ ಹಾಕಲು ಮುಂದಾಗಿದ್ದು, ಇದಕ್ಕೆ ಸೋಮವಾರ ನಡೆಯುವ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಅನುಮೋದನೆ ದೊರೆತರೆ ಮಹಾನಗರ ಜನತೆ ಮತ್ತೂಂದು ಹೆಚ್ಚುವರಿ ಸೆಸ್‌ ಪಾವತಿಗೆ ಸಿದ್ಧವಾಗಬೇಕಾಗುತ್ತದೆ. 

ಈ ಹಿಂದೆ ಆಸ್ತಿಕರವನ್ನು ಶೇ.15ರಷ್ಟು ಹೆಚ್ಚಳ ಮಾಡಿದ್ದ ಮಹಾನಗರ ಪಾಲಿಕೆ ಮೂರು ವರ್ಷದ ಕರ ಹೆಚ್ಚಳದ ಶೇ.45ರಷ್ಟು ಕರವನ್ನು ಒಂದೇ ಬಾರಿಗೆ ಅನುಷ್ಠಾನಗೊಳಿಸಿತ್ತು. ಸಾರ್ವಜನಿಕರಾಗಲಿ, ಸಂಘ- ಸಂಸ್ಥೆಗಳಾಗಲಿ, ಕನಿಷ್ಠ ಪಾಲಿಕೆಯಲ್ಲಿನ ವಿರೋಧ ಪಕ್ಷಗಳಿಂದಾಗಲಿ ಸಮರ್ಪಕ ಹಾಗೂ ದೊಡ್ಡ ಪ್ರಮಾಣ ಪ್ರತಿರೋಧ ಇಲ್ಲವಾಗಿತ್ತು.

ಅನಂತರದಲ್ಲಿ ಆಸ್ತಿ ಕರದಲ್ಲಿ ಎಲ್ಲ ವಿಭಾಗಗಳ ಸೆಸ್‌ ಹಾಗೂ ಕರ ಇದ್ದರೂ ಸಹ ಘನತ್ಯಾಜ್ಯ ನಿರ್ವಹಣೆ ಹಾಗೂ ವಿಲೇವಾರಿ ಎಂದು ಹೇಳಿ ಸೆಸ್‌ ಹಾಕಲಾಗಿತ್ತು. ಅದನ್ನು ಆಸ್ತಿಕರದಲ್ಲಿ ಸೇರಿಸಿ ಪಡೆಯಲಾಗುತ್ತಿದೆ. ಇದೀಗ ಘನತ್ಯಾಜ್ಯ ವಿಲೇವಾರಿ ನಿರ್ವಹಣೆಗೆ ಹಣ ಸಾಲದಾಗಲಿದೆ ಎಂದು ಹೇಳುವ ಮೂಲಕ ಹೆಚ್ಚುವರಿ ಸೆಸ್‌ ಪಡೆಯಲು ಪೌರಾಡಳಿತ ನಿರ್ದೇಶನಾಲಯ ಪತ್ರದ ಆಧಾರದಲ್ಲಿ ಪಾಲಿಕೆ ಆಯುಕ್ತರು ಪಾಲಿಕೆ ಸಾಮಾನ್ಯ ಸಭೆಗೆ ವಿಷಯ ತಂದಿದ್ದು, ಸಾಮಾನ್ಯ ಸಭೆ ಏನು ಮಾಡಲಿದೆ ನೋಡಬೇಕು. 

ಒಂದು ಕಡೆ ದೇಶಕ್ಕೊಂದೇ ತೆರಿಗೆ ಇರಲಿ ಎಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಜಿಎಸ್‌ಟಿ ಜಾರಿಗೊಳಿಸಿದ್ದರೆ, ಅವರದ್ದೇ ಪಕ್ಷ ಪಾಲಿಕೆಯಲ್ಲಿ ಕರಗಳ ಮೇಲೆ ಕರ, ಸೆಸ್‌ಗಳ ಮೇಲೆ ಸೆಸ್‌ಗಳ ಜಾರಿಗೆ ಮುಂದಾಗಿದೆ. ಕಳೆದ ಏಳೆಂಟು ವರ್ಷಗಳಿಂದ ಘನತ್ಯಾಜ್ಯ ವಿಲೇವಾರಿ ಘಟಕ ಇನ್ನೇನು ಸ್ಥಾಪನೆಗೊಂಡು ಬಿಟ್ಟಿತು ಎಂದು ಬಿಂಬಿಸಿದ್ದು ಬಿಟ್ಟರೆ ಇಂದಿಗೂ ಅದು ಅನುಷ್ಠಾನಗೊಂಡಿಲ್ಲ.

Advertisement

ಆದರೆ, ನಿರ್ವಹಣೆ ಹೆಸರಲ್ಲಿ ಮಾತ್ರ ಸೆಸ್‌ಗಳ ಮೇಲೆ ಸೆಸ್‌ ಬೀಳುತ್ತಿದೆ. ಪಾಲಿಕೆ ಆಯುಕ್ತರು ಸಾಮಾನ್ಯ ಸಭೆಗೆ ಮಂಡಿಸಿದ ವಿಷಯದ ಅನ್ವಯ ಘನತ್ಯಾಜ್ಯ ನಿರ್ವಹಣೆ ಹೆಚ್ಚುವರಿ ಸೆಸ್‌ನ್ನು 1,000 ಚದರ ಅಡಿಗಿಂತ ಕಡಿಮೆ ಇರುವ ಮನೆಗಳಿಗೆ 10ರೂ., 3,000 ಚದರ ಅಡಿ ವರೆಗಿನ ಮನೆಗಳಿಗೆ 30 ರೂ., ಅದಕ್ಕೂ ಮೇಲ್ಪಟ್ಟವುಗಳಿಗೆ 50ರೂ., ವಾಣಿಜ್ಯ ಕಟ್ಟಗಳಿಗೆ 1,000 ಚ.ಅ.ಒಳಗಿನವುಗಳಿಗೆ 50ರೂ., 5,000 ಚ.ಅ.ಒಳಗಿನವುಗಳಿಗೆ 100ರೂ.,

ಇದಕ್ಕೂ ಮೇಲ್ಪಟ್ಟವುಗಳಿಗೆ 200ರೂ., ಕೈಗಾರಿಕಾ ಕಟ್ಟಡಗಳಿಗೆ 1,000ಚ.ಅ.ಒಳಗೆ 100ರೂ., 5000 ಚ.ಅ.ಒಳಗೆ 200ರೂ., ಇದಕ್ಕೂ ಮೇಲ್ಪಟ್ಟು 300ರೂ., ಹೊಟೇಲ್‌, ಕಲ್ಯಾಣ ಮಂಟಪ, ನರ್ಸಿಂಗ್‌ ಹೋಂಗಳಿಗೆ 1,000ಚ.ಅ.ಗಿಂತ ಕಡಿಮೆ 300ರೂ., 5000ಚ.ಅ.ಒಳಗೆ 500ರೂ., ಮೇಲ್ಪಟು 600 ರೂ.ಗಳ ಹೆಚ್ಚುವರಿ ಸೆಸ್‌ ವಿಧಿಸಲು ಮುಂದಾಗಿದೆ. 

ಘನತ್ಯಾಜ್ಯ ಸೆಸ್‌ ಈಗಾಗಲೇ ಹಾಕಲಾಗಿದ್ದು, ಮತ್ತೂಮ್ಮೆ ಹೆಚ್ಚುವರಿ ಸೆಸ್‌ ಹಾಕಿದರೆ ತಪ್ಪು ಸಂದೇಶ ರವಾನೆ ಆಗಲಿದೆ ಎಂಬ ಉದ್ದೇಶದೊಂದಿಗೆ ಅನೇಕ ಸದಸ್ಯರು ಇದನ್ನು ವಿರೋಧಿಸುವ ಸಾಧ್ಯತೆ ಇದೆ ಎನ್ನಲಾಗಿದೆಯಾದರು, ಸಾಮಾನ್ಯ ಸಭೆ ಇದಕ್ಕೆ ಒಪ್ಪಿಗೆ ನೀಡುವುದೋ ಅಥವಾ ಮುಂದೂಡುವುದೋ ಸೋಮವಾರ ಸಾಮಾನ್ಯ ಸಭೆಯಲ್ಲಿ ಸ್ಪಷ್ಟವಾಗಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next