Advertisement

ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಕಡ್ಡಾಯ

12:23 PM Mar 31, 2019 | Lakshmi GovindaRaju |

ಬೆಂಗಳೂರು: ಪದವಿ ಶಿಕ್ಷಣಕ್ಕೆ ಸೇರುವ ಪ್ರತಿಯೊಬ್ಬ ವಿದ್ಯಾರ್ಥಿಯ ಹೆಸರನ್ನು ಕಡ್ಡಾಯವಾಗಿ ಮತದಾರರ ಪಟ್ಟಿಗೆ ಸೇರಿಸಲು ಶಿಕ್ಷಣ ಇಲಾಖೆಗೆ ಸೂಚಿಸಬೇಕು ಎಂದು ಬಿ-ಪ್ಯಾಕ್‌ ಶನಿವಾರ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ್‌ ಭಾಸ್ಕರ್‌ ಅವರಿಗೆ ಮನವಿ ಮಾಡಿತು.

Advertisement

ವಿವಿಧ ಕಾಲೇಜು ವಿದ್ಯಾರ್ಥಿಗಳೊಂದಿಗೆ ವಿಧಾನಸೌಧದಲ್ಲಿ ಮುಖ್ಯ ಕಾರ್ಯದರ್ಶಿಗಳನ್ನು ಭೇಟಿ ಮಾಡಿದ ಬಿ-ಪ್ಯಾಕ್‌ ತಂಡ, ಸರ್ಕಾರ ಮತ್ತು ಚುನಾವಣಾ ಆಯೋಗವು ಯುವಕರಲ್ಲಿ ಚುನಾವಣೆ ಬಗ್ಗೆ ಜಾಗೃತಿ ಮೂಡಿಸಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ.

ಇದರ ಮುಂದುವರಿದ ಭಾಗವಾಗಿ ಆಯಾ ಕಾಲೇಜುಗಳಲ್ಲೇ ಪದವಿ ಶಿಕ್ಷಣ ಪ್ರವೇಶ ಪಡೆಯುವ ಎಲ್ಲ ವಿದ್ಯಾರ್ಥಿಗಳಿಗೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಕಡ್ಡಾಯಗೊಳಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಗೆ ಸೂಚನೆ ನೀಡಬೇಕು ಎಂದು ಮನವಿ ಸಲ್ಲಿಸಿದರು.

18 ವರ್ಷ ತುಂಬಿದ ಪ್ರತಿಯೊಬ್ಬ ಪ್ರಜೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಅರ್ಹರಾಗಿರುತ್ತಾರೆ. ರಾಜ್ಯದಲ್ಲಿ ಸುಮಾರು ಎಂಟು ಲಕ್ಷ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಾರೆ. ಹಾಗೆಯೇ ಪಿಯುಸಿ ಪರೀಕ್ಷೆ ಬರೆಯುವವರ ಸಂಖ್ಯೆ ಐದು ಲಕ್ಷಕ್ಕೂ ಅಧಿಕ.

ಪದವಿಪೂರ್ವ ಶಿಕ್ಷಣ ಮುಗಿಸಿ ಪದವಿ ಶಿಕ್ಷಣಕ್ಕೆ ಕಾಲಿಡುವ ಎಲ್ಲ ವಿದ್ಯಾರ್ಥಿಗಳು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಸಲು ಅರ್ಹರಾಗಿರುತ್ತಾರೆ. ಆದರೆ, ಅವರಲ್ಲಿ ಬಹುತೇಕರು ಈ ಬಗ್ಗೆ ಆಸಕ್ತಿ ತೋರಿಸುತ್ತಿಲ್ಲ. ಒಂದು ವೇಳೆ ಕಾಲೇಜುಗಳಿಂದಲೇ ಇದನ್ನು ಕಡ್ಡಾಯಗೊಳಿಸಿದರೆ, ಹೆಚ್ಚು ಸೇರ್ಪಡೆ ಹಾಗೂ ಚುನಾವಣೆ ಮಹತ್ವ ತಿಳಿಸಲು ಅನುಕೂಲ ಆಗುತ್ತದೆ ಎಂದು ಮನವಿಯಲ್ಲಿ ತಿಳಿಸಿದೆ.

Advertisement

ಭೇಟಿ ವೇಳೆ ಬಿ-ಪ್ಯಾಕ್‌ ಸದಸ್ಯ ಆನಂದ್‌ ತೀರ್ಥ, ಕ್ರೈಸ್ಟ್‌ ಕಾಲೇಜು, ಬಿಎಂಎಸ್‌ ಮಹಿಳಾ ಕಾಲೇಜು, ರಾಮಯ್ಯ ಎಂಜಿನಿಯರಿಂಗ್‌ ಕಾಲೇಜು, ಎಂಎಲ್‌ಎ ಕಾಲೇಜು, ಆದರ್ಶ ಕಾಲೇಜು, ನ್ಯಾಷನಲ್‌ ಕಾಲೇಜು ಒಳಗೊಂಡಂತೆ ಹಲವು ಕಾಲೇಜು ವಿದ್ಯಾರ್ಥಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next