ಅದೊಂದು ಮೋಜು ಮಸ್ತಿಯ ಗೆಳೆಯರ ಗುಂಪು. ಅದರಲ್ಲಿ ಪ್ರೇಮಿಗಳೂ ಇದ್ದಾರೆ. ಗೊತ್ತಿಲ್ಲದ ಜಾಗಗಳನ್ನು ಅನ್ವೇಷಿಸಿ ಅಲ್ಲಿ ಚಾರಣ ಮಾಡುವುದೇ ಇವರ ಹವ್ಯಾಸ. ಹೀಗೆ ಹೊಸ ಜಾಗವೊಂದನ್ನು ಹುಡುಕಿ ಹೋದಾಗ ನಡೆಯುವ ಸನ್ನಿವೇಶಗಳ ಕಥೆಯೇ “ಅಡವಿಕಟ್ಟೆ’.
ಹದಿಮೂರನೇ ಶತಮಾನದ ರಾಜನೊಬ್ಬ ದೇವಿಯ ವಿಗ್ರಹವನ್ನು ಕಾಡಿನಲ್ಲಿ ಬಿಟ್ಟಿದ್ದನಂತೆ…! ಹೀಗೆ ಆರಂಭವಾಗುವ ಚಿತ್ರ ವರ್ತಮಾನಕ್ಕೆ ಸಾಗುತ್ತದೆ. ಆಕಸ್ಮಿಕವಾಗಿ ಕಥಾನಾಯಕನ ಕೈ ಸೇರುವ ಚರಿತ್ರೆಯ ಪುಸ್ತಕ, ಅದನ್ನೋದಿದ ಬಳಿಕ ತನ್ನ ಪ್ರೇಯಸಿಯೊಂದಿಗೆ ಸಂಚು ರೂಪಿಸುತ್ತಾನೆ. ತನ್ನ ಗೆಳೆಯರನ್ನೆಲ್ಲ ಒಂದುಗೂಡಿಸಿ ಅಡವಿಕಟ್ಟೆ ಎಂಬ ನಿಗೂಢ ಜಾಗಕ್ಕೆ ಚಾರಣಕ್ಕೆಂದು ಹೋದ ಮೇಲೆ, ಅಸಲಿ ಕಥೆ ಆರಂಭವಾಗುತ್ತದೆ.
ಅಲ್ಲೊಂದಿಷ್ಟು ಘಟನೆಗಳು ನಡೆಯುತ್ತವೆ. ಇದು ಏಕೆ, ಹೇಗೆ, ಯಾರಿಂದ ನಡೆಯುತ್ತಿದೆ ಎಂಬ ಗೊಂದಲ ಒಂದು ಕಡೆಯಾದರೆ, ಇತ್ತ ಅವರನ್ನು ಹುಡುಕಿಕೊಂಡು ಅಡವಿಕಟ್ಟೆಗೆ ಬರುವ ಪೊಲೀಸರು, ಕಥೆಗೆ ಹೊಸ ತಿರುವು ನೀಡುತ್ತಾರೆ. ಕೊಲೆಗೆ ಕಾರಣ ಯಾರು, ಉದ್ದೇಶವೇನು, ಕಥೆಯ ಅಂತ್ಯದಲ್ಲಿ ಏನಾಗುತ್ತದೆ ಎಂಬುದನ್ನು ತಿಳಿಯಲು ಚಿತ್ರ ನೋಡಬೇಕು.
ಚಿತ್ರ ಮುಗಿದ ಮೇಲೂ ಪ್ರೇಕ್ಷಕನ ಮನಸ್ಸಿನಲ್ಲಿ ಹಲವು ಪ್ರಶ್ನೆ ಉದ್ಭವಿಸುವುದಂತೂ ಖಂಡಿತ. ಚಿತ್ರದ ಬಹುತೇಕ ಭಾಗ ಕತ್ತಲೆಯಲ್ಲೇ ಸಾಗುತ್ತದೆ. ಚಿತ್ರದ ಆರಂಭದಿಂದ ಆವರಿಸಿಕೊಳ್ಳುವ ನಿಗೂಢತೆಯನ್ನು ಅಂತ್ಯದವರೆಗೂ ಕಾಪಾಡುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಅಭಿಜಿತ್, ನಾಗರಾಜು, ಶಾಂತಿ, ಯಶ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ನಿತೀಶ್ ಡಂಬಳ