ಮೈಸೂರು: ಮನರಂಜನೆ ಮೂಲಕ ಮಕ್ಕಳಲ್ಲಿರುವ ಕಲೆ ಹಾಗೂ ಪ್ರತಿಭೆ ಗುರುತಿಸಿ, ಪ್ರೋತ್ಸಾಹಿಸಿ ಹೊರತರುವ ಉದ್ದೇಶದಿಂದ ನಗರದ ಕಲಿಸು ಫೌಂಡೇಷನ್‌ನಿಂದ ಆಯೋಜಿಸಿದ್ದ ಕಾಮನಬಿಲ್ಲು ಕಾರ್ಯಕ್ರಮ ಸರ್ಕಾರಿ ಶಾಲಾ ಮಕ್ಕಳನ್ನು ಆಕರ್ಷಿಸಿತು.
ಮಕ್ಕಳ ದಿನಾಚರಣೆಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸುವ ನಿಟ್ಟಿನಲ್ಲಿ ನಗರದ ಹೂಟಗಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಟಿ ಶಾನ್ವಿ ಶ್ರೀವಾತ್ಸವ್, ಕಲಾವಿದ ಬಾದಲ್ ನಂಜುಂಡಸ್ವಾಮಿ ಕಾರ್ಯಕ್ರಮಕ್ಕೆ ತಾರಾ ಮೆರುಗು ತಂದರು.
ಶಾಲಾ ಮಕ್ಕಳೊಂದಿಗೆ ಮಗುವಾಗಿ ಬೆರೆತ ನಟಿ ಶಾನ್ವಿ ಶ್ರೀವಾತ್ಸವ್, ಕಾಗದದ ಬಾತುಕೋಳಿ ಸೇರಿದಂತೆ ಇನ್ನಿತರ ಕಲಾಕೃತಿಗಳನ್ನು ಮಾಡಿದರೆ, ಕಲಾವಿದ ಬಾದಲ್ ನಂಜುಂಡಸ್ವಾಮಿ ಸಹ ಕಲೆ, ಕ್ರೀಡೆ ಮನರಂಜನೆ ಮೂಲಕ ದಿನವಿಡೀ ಚಿಣ್ಣರ ಸಂಭ್ರಮಕ್ಕೆ ಸಾಕ್ಷಿಯಾದರು.
ಇದಕ್ಕೂ ಮುನ್ನ ಸಸಿನೆಟ್ಟು ಬಣ್ಣದ ಬಲೂನ್‌ಗಳನ್ನು ಹಾರಿ ಬಿಡುವ ಮೂಲಕ ಕಾಮನಬಿಲ್ಲು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮಕ್ಕಳೊಂದಿಗೆ ಸಂವಾದ ನಡೆಸಿದ ನಟಿ ಶಾನ್ವಿ, ಮಕ್ಕಳು ಹೆಚ್ಚಾಗಿ ಓದಿನಲ್ಲಿ ತೊಡಗಿಸಿಕೊಳ್ಳಬೇಕು. ಜೀವನದಲ್ಲಿ ಶಿಕ್ಷಣ ಅತ್ಯವಶ್ಯಕವಾಗಿದ್ದು, ಅಂತಹದೊಂದು ಅದ್ಭುತ ಕೆಲಸವನ್ನು ನಿರ್ವಹಿಸುವ ಶಿಕ್ಷಕರ ವೃತ್ತಿ ದೊಡ್ಡದು ಎಂದು ಶಿಕ್ಷಕರಿಗೆ ಅಭಿನಂದಿಸಿದರು.
ಕಲಿಸು ಫೌಂಡೇಷನ್ ಸಂಸ್ಥಾಪಕ ನಿಖೀಲೇಶ್, ಕಾಮನಬಿಲ್ಲು ಕಾರ್ಯಕ್ರಮದ ಮೂಲಕ ಮಕ್ಕಳಿಗೆ ಮನರಂಜನೆ ಕಲೆ ಹೊರತರಬೇಕಿದೆ. ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುವ ಮಕ್ಕಳ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ, ಮಕ್ಕಳನ್ನು ಆಕರ್ಷಿಸಲು ಇಂತಹ ಪಠ್ಯೇತರ ಚಟುವಟಿಕೆಗಳು ಅತ್ಯಂತ ಮುಖ್ಯವಾಗಲಿದೆ ಎಂದರು.
ಇದೇ ವೇಳೆ ಚಿತ್ರಕಲೆ, ಕರಕುಶಲ ಕಲೆ, ಕ್ರೀಡೆಯಲ್ಲಿ ಗೆದ್ದ ಮಕ್ಕಳಿಗೆ ಬಹುಮಾನವಾಗಿ ಸಸಿ ವಿತರಿಸಲಾಯಿತು. ಈ ಮುನ್ನ ನೆರೆದಿದ್ದ ಮಕ್ಕಳು ಹಾಗೂ ಶಿಕ್ಷಕರೊಂದಿಗೆ ಬೆರೆತ ಶಾನ್ವಿ ಶ್ರೀವಾತ್ಸವ್ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂತಸಪಟ್ಟರು. ಚಿತ್ರ ನಿರ್ದೇಶಕ ಸುರಾಜ್‌ಕುಮಾರ್, ಗ್ರಾಮೀಣ ವಲಯ ಬಿಇಒ ವಿವೇಕಾನಂದ, ಶಾಲೆಯ ಮುಖ್ಯೋಪಾಧ್ಯಾಯ ಸತೀಶ್ ಮತ್ತಿತರರಿದ್ದರು.