ಬೆಂಗಳೂರು: ಖ್ಯಾತ ನಟಿ, ಮಾಜಿ ಸಂಸದೆ ರಮ್ಯಾ(Ramya) ಅವರು ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನುವ ಸುದ್ದಿ ಮತ್ತೆ ಹರಿದಾಡುತ್ತಿದೆ. ಕೆಲ ಮಾಧ್ಯಮಗಳು 41 ರ ಹರೆಯದ ರಮ್ಯಾ ಅವರು ಉದ್ಯಮಿಯೊಬ್ಬರನ್ನು ವರಿಸಲಿದ್ದಾರೆ ಎನ್ನುವ ಸುದ್ದಿಯನ್ನೂ ಪ್ರಕಟಿಸಿವೆ.ಸಾಮಾಜಿಕ ತಾಣಗಳಲ್ಲೂ ಈ ಬಗ್ಗೆ ಚರ್ಚೆಯಾಗುತ್ತಿದೆ. ಆದರೆ, ಯಾವೂದು ಇನ್ನೂ ಅಧಿಕೃತವಾಗಿಲ್ಲ, ಎಲ್ಲವೂ ಗಾಳಿ ಸುದ್ದಿ ಎನ್ನಲಾಗುತ್ತಿದೆ.
ಈ ಹಿಂದೆಯೂ ಕನ್ನಡದ ಜನಪ್ರಿಯ ನಟಿ ರಮ್ಯಾ ಅವರ ಮದುವೆ ವಿಚಾರ ಹಲವು ಬಾರಿ ಚರ್ಚೆಯಾಗಿತ್ತೇ ಹೊರತು ಅದೆಲ್ಲವೂ ಹುಸಿಯಾಗಿತ್ತು. ಈ ಬಾರಿ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅವರು ನಿಜವಾಗಿಯೂ ಹೊಸ ಬಾಳಿಗೆ ಕಾಲಿಡಲಿದ್ದಾರೆಯೇ ಎನ್ನುವ ಕುತೂಹಲ ಮತ್ತೆ ಅಭಿಮಾನಿಗಳಲ್ಲಿ ಮೂಡಿದೆ.
ಸಿನಿಮಾರಂಗದಲ್ಲಿ ದಿಗ್ಗಜ ನಟರೊಂದೊಂದಿಗೆ ಹಲವು ಹಿಟ್ ಚಿತ್ರಗಳಲ್ಲಿ ನಟಿಸಿ ಜನಪ್ರಿಯತೆಯ ಉತ್ತುಂಗದಲ್ಲಿದ್ದ ವೇಳೆ ರಮ್ಯಾ 2012 ರಲ್ಲಿ ಕಾಂಗ್ರೆಸ್ ಸೇರಿದ್ದರು. 2013 ರಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಉಪಚುನಾವಣೆಯಲ್ಲಿ ಗೆಲ್ಲುವ ಮೂಲಕ ಸಂಸದೆಯಾದರು. 2014 ರ ಸಾರ್ವತ್ರಿಕ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು. ಬಳಿಕ ಕಾಂಗ್ರೆಸ್ ನಲ್ಲಿ ಅಷ್ಟೇನೂ ಸಕ್ರಿಯವಾಗಿರದಿದ್ದರೂ ಅವರಿಗೆ ಸಾಮಾಜಿಕ ಮಾಧ್ಯಮದ ಜವಾಬ್ದಾರಿ ವಹಿಸಲಾಗಿತ್ತು. ಆ ಜವಾಬ್ದಾರಿಯಿಂದ ಕೆಳಗಿಳಿದಿದ್ದಾರೆ ಎಂದೂ ಊಹಾಪೋಹಗಳು ಹರಿದಾಡಿವೆ.
ಇತ್ತೀಚೆಗೆ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾವನ್ನು ನಿರ್ಮಾಣ ಮಾಡಿ ಚಿತ್ರರಂಗದ ನಂಟು ಕಳೆದುಕೊಂಡಿಲ್ಲ ಅನ್ನುವುದನ್ನು ರಮ್ಯಾ ಸಾರಿದ್ದರು.