ಕನ್ನಡ ಚಿತ್ರರಂಗದ ಮಳೆ ಹುಡುಗಿ ಖ್ಯಾತಿಯ ಪೂಜಾ ಗಾಂಧಿ ಹಸೆಮಣೆ ಏರಲು ತಯಾರಾಗಿದ್ದಾರೆ. ಸ್ವತಃ ನಟಿ ಪೂಜಾಗಾಂಧಿ ಅವರೇ ತಾವು ವಿವಾಹವಾಗುತ್ತಿರುವ ವಿಷಯವನ್ನು ಸೋಶಿಯಲ್ ಮೀಡಿಯಾಗಳ ಮೂಲಕ ಖಚಿತಪಡಿಸಿದ್ದಾರೆ.
ಅಂದಹಾಗೆ, ಇಂದೇ (ನ. 29) ಪೂಜಾಗಾಂಧಿ ಅವರ ವಿವಾಹ ಸರಳವಾಗಿ ನೆರವೇರುತ್ತಿದ್ದು, ಸದ್ದಿಲ್ಲದೆ ಸಿಂಪಲ್ ಆಗಿ ಕುವೆಂಪು ಅವರ ಮಂತ್ರ ಮಾಂಗಲ್ಯದಂತೆ ತಮ್ಮ ಬಹುದಿನದ ಗೆಳೆಯನೊಂದಿಗೆ ಪೂಜಾಗಾಂಧಿ ಕೌಟುಂಬಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.
ಚಿತ್ರರಂಗದ ಮೂಲಗಳ ಪ್ರಕಾರ, ನಟಿ ಪೂಜಾ ಗಾಂಧಿ ಬೆಂಗಳೂರು ಮೂಲದ ಉದ್ಯಮಿಯನ್ನು ಮದುವೆ ಆಗುತ್ತಿದ್ದಾರೆ. ಪೂಜಾ ಗಾಂಧಿ ಕೆಲ ತಿಂಗಳಿನಿಂದ ಬೆಂಗಳೂರಿನ ಲಾಜಿಸ್ಟಿಕ್ ಕಂಪನಿ ಮಾಲೀಕರಾಗಿರುವ ವಿಜಯ್ ಘೋರ್ಪಡೆ ಎಂಬುವವರ ಜೊತೆ ಪ್ರೀತಿಯಲ್ಲಿದ್ದರು ಎನ್ನಲಾಗಿದ್ದು, ಇದೀಗ ಇಬ್ಬರೂ ಕೌಟುಂಬಿಕ ಜೀವನಕ್ಕೆ ಕಾಲಿಡುವುದಕ್ಕೆ ಸಿದ್ಧರಾಗಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ನಟಿ ಪೂಜಾಗಾಂಧಿ ತಮ್ಮ ಕೈಯ್ನಾರೆ ಕನ್ನಡದಲ್ಲಿಯೇ ಬರೆದು ತಮ್ಮ ಅಭಿಮಾನಿಗಳಿಗೆ ವಿವಾಹವಾಗುತ್ತಿರುವ ವಿಷಯವನ್ನು ತಿಳಿಸಿದ್ದಾರೆ.
“ಆತ್ಮೀಯರೇ, ನಿಮಗೆಲ್ಲರಿಗೂ ನನ್ನ ನಮಸ್ಕಾರಗಳು. ನನ್ನ ಚಿತ್ರ ಜೀವನದ ಎಲ್ಲಾ ಬೆಳವಣಿಗೆಗಳಲ್ಲೂ ನೀವು ನನ್ನ ಜೊತೆಗಿದ್ದೀರಿ. ನವೆಂಬರ್ 29, 2023ನೇ ತಾರೀಕು ಕುವೆಂಪು ಆಶಯದ ಮಂತ್ರ ಮಾಂಗಲ್ಯದ ಮೂಲಕ ವಿಜಯ್ ಘೋರ್ಪಡೆಯವರೊಂದಿಗೆ ಮದುವೆಯಾಗುತ್ತಿದ್ದೇನೆ. ಕುಟುಂಬದವರಾಗಿ ನೀವು ಬಂದು ಹರಸಿ,ಆಶೀರ್ವದಿಸಿ’ ಎಂದು ಪೂಜಾ ಆಮಂತ್ರಣ ಪತ್ರಿಕೆ ನೀಡಿದ್ದಾರೆ.
ಈ ಆಮಂತ್ರಣ ಪತ್ರಿಕೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಬೆಂಗಳೂರಿನ ಯಲಂಹಕದ ಸಮೀಪ ನಟಿ ಪೂಜಾ ಗಾಂಧಿ ಮದುವೆ ಮಂತ್ರ ಮಾಂಗಲ್ಯದಂತೆ ನಡೆಯಲಿದೆ. ಆದರೆ, ಪೂಜಾ ಗಾಂಧಿ ಇನ್ನೂ ಮದುವೆ ಸ್ಥಳವನ್ನು ಬಹಿರಂಗಪಡಿಸಿಲ್ಲ. ಮದುವೆ ದಿನವೇ ಇಂದು ಸರಳ ವಿವಾಹದ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಮಳೆ ಹುಡುಗಿ ತಿಳಿಸುವುದಾಗಿ ಆಮಂತ್ರಣ ಪತ್ರಿಕೆಯಲ್ಲಿ ಹೇಳಿಕೊಂಡಿದ್ದಾರೆ.