ನಟಿ ಮೇಘನಾ ಗಾಂವ್ಕರ್ ಜಡ್ಜ್ಮೆಂಟ್ ಮೇಲೆ ನಿರೀಕ್ಷೆ ಇಟ್ಟಿದ್ದಾರೆ. ಈ ಬಾರಿ ಪ್ರೇಕ್ಷಕರು ತಮ್ಮ ಪರವಾಗಿ ಜಡ್ಜ್ಮೆಂಟ್ ನೀಡುತ್ತಾರೆ ಎಂಬ ನಂಬಿಕೆ ಅವರದು. ಹೌದು, ಮೇಘನಾ ನಟಿಸಿರುವ “ದಿ ಜಡ್ಜ್ ಮೆಂಟ್’ ಚಿತ್ರ ಮೇ 24ರಂದು ತೆರೆಕಾಣುತ್ತಿದೆ. ಈ ಚಿತ್ರದ ಮೇಲೆ ಮೇಘನಾ ಸಾಕಷ್ಟು ನಿರೀಕ್ಷೆ ಇಟ್ಟಿದ್ದು, ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಅದು ಅವರ ಮಾತಲ್ಲೇ…
ನಿಜ ಹೇಳಬೇಕೆಂದರೆ ಜಡ್ಜ್ ಮೆಂಟ್ ಸಿನಿಮಾಕ್ಕೆ ಕೊನೆಯದಾಗಿ ಸೇರ್ಪಡೆಯಾಗಿದ್ದೇ ನಾನು. ಇನ್ನೇನು ನಾನು ಮಾಡಬೇಕಾದ ಪಾತ್ರದ ಶೂಟಿಂಗ್ ಮಾಡೋದಕ್ಕೆ ಕೆಲವು ದಿನಗಳಷ್ಟೇ ಇದೆ ಎನ್ನುವಾಗ ಈ ಸಿನಿಮಾದ ಆಫರ್ ಬಂತು. ಆ ನಂತರ ಒಂದೇ ದಿನದಲ್ಲಿ ಆ ಆಫರ್‌ನ ನಾನೂ ಒಪ್ಪಿಕೊಂಡೆ.
ಇಲ್ಲಿಯವರೆಗೆ ನಾನು ಮಾಡಿರುವ ಪಾತ್ರಗಳದ್ದು, ಒಂದು ತೂಕವಾದರೆ,ಈ ಸಿನಿಮಾದ ಪಾತ್ರದ್ದು ಇನ್ನೊಂದು ತೂಕ. ನಾನು ಇಲ್ಲಿಯವರೆಗೆ ಮಾಡಿರುವ ಪಾತ್ರಗಳಿಗಿಂತ ವಿಭಿನ್ನವಾದ ಪಾತ್ರ ಈ ಸಿನಿಮಾದಲ್ಲಿದೆ.
ಸಿನಿಮಾದ ಕಥೆ, ಪಾತ್ರ, ಕಲಾವಿದರು ಮತ್ತು ತಂತ್ರಜ್ಞರ ತಂಡ ಎಲ್ಲವೂ ಇಷ್ಟವಾಯಿತು. ಹೀಗಾಗಿ ಖುಷಿಯಿಂದ ಈ ಸಿನಿಮಾ ಒಪ್ಪಿಕೊಂಡೆ. ಈ ಸಿನಿಮಾದಲ್ಲಿ ನಾನು ಪ್ರೊಫೆಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ರವಿಚಂದ್ರನ್ ಅವರಿಗೆ ಜೋಡಿಯಾಗಿ ಅಭಿನಯಿಸಿದ್ದೇನೆ. ಇಂದಿನ ಜನರೇಶನ್ ಮಹಿಳೆಯರು ಹೇಗೆ ಸ್ವತಂತ್ರವಾಗಿ ಬದುಕಲು ಬಯಸುತ್ತಾರೋ, ಅಂಥದ್ದೇ ಒಂದು ಪಾತ್ರ ಇದಾಗಿದೆ. ನನ್ನ ಪಾತ್ರ ಮತ್ತು ಸಿನಿಮಾದಲ್ಲಿ ನಾನಿರುವ ಸನ್ನಿವೇಶಗಳು ಹೆಚ್ಚಾಗಿ ಮನೆಯಲ್ಲೇ ನಡೆಯುತ್ತದೆ. ತುಂಬ ಎಮೋಶನ್ ಕ್ಯಾರಿ ಮಾಡುವಂಥ ಪಾತ್ರ ಇದಾಗಿದೆ.
ಮೊದಲ ಬಾರಿಗೆ ರವಿಚಂದ್ರನ್ ಅವರಂಥ ಲೆಜೆಂಡರಿ ಸ್ಟಾರ್ ಜೊತೆ ಅಭಿನಯಿಸುವ ಅವಕಾಶ ಸಿಕ್ಕಿರುವುದಕ್ಕೆ ತುಂಬ ಖುಷಿಯಿದೆ. ನಾನು ಈ ಸಿನಿಮಾ ಒಪ್ಪಿಕೊಳ್ಳಲು ಇದೂ ಕೂಡ ಒಂದು ಕಾರಣ. ಕೆಲ ವರ್ಷಗಳ ಹಿಂದೆ ರವಿಚಂದ್ರನ್ ಅವರೊಂದಿಗೆ ಅಭಿನಯಿಸುವ ಅವಕಾಶ ಬಂದಿದ್ದರೂ, ಕಾರಣಾಂತರಗಳಿಂದ ಅದು ಸಾಧ್ಯವಾಗಿರಲಿಲ್ಲ. ಜಡ್ಜ್ಮೆಂಟ್ ಸಿನಿಮಾದಲ್ಲಿ ಅದು ನೆರವೇರಿದೆ.
ರವಿಚಂದ್ರನ್ ಅವರೊಂದಿಗೆ ಕೆಲಸ ಮಾಡಿದ್ದು, ನಿಜಕ್ಕೂ ಖುಷಿಕೊಟ್ಟಿದೆ. ಇದೊಂದು ಕಂಪ್ಲೀಟ್ ಕೋರ್ಟ್ ರೂಂ ಡ್ರಾಮಾ ಇರುವ ಲೀಗಲ್ ಥ್ರಿಲ್ಲರ್ ಸಿನಿಮಾ. ನನ್ನ ಪ್ರಕಾರ ಕನ್ನಡದಲ್ಲಿ ಇಂಥ ಸಿನಿಮಾಗಳು ಬಂದಿದ್ದು ತುಂಬ ವಿರಳ. ಅಂಥ ವಿರಳ ಸಿನಿಮಾಗಳ ಸಾಲಿಗೆ ಸೇರುವ ಸಿನಿಮಾವಿದು. ಒಂದಷ್ಟು ನೈಜ ಘಟನೆಗಳನ್ನು ಆಧರಿಸಿ
ಅದನ್ನು ಸಿನಿಮಾ ರೂಪದಲ್ಲಿ ತೆರೆಗೆ ತಂದಿದ್ದಾರೆ ನಿರ್ದೇಶಕ ಗುರುರಾಜ ಕುಲಕರ್ಣಿ (ನಾಡಗೌಡ). ಇಂದಿನ ಕಾನೂನು, ನ್ಯಾಯ ವ್ಯವಸ್ಥೆ ಎಲ್ಲದರ ಚಿತ್ರಣ ಈ ಸಿನಿಮಾದಲ್ಲಿದೆ. ಇದೊಂದು ಲೀಗಲ್-ಥ್ರಿಲ್ಲರ್ ಶೈಲಿಯಸಿನಿಮಾವಾಗಿರುವುದರಿಂದ, ಇದಕ್ಕಿಂತ ಹೆಚ್ಚಾಗಿ ಸಿನಿಮಾದ ಬಗ್ಗೆ ಹೆಚ್ಚೇನೂ ಹೇಳಲಾರೆ.
ಯಾವುದೇ ಸಿನಿಮಾದ ಪಾತ್ರವಾದರೂ, ಅದಕ್ಕೆ ಅದರದ್ದೇ ಆದ ಒಂದಷ್ಟು ತಯಾರಿ ಇದ್ದೇ ಇರುತ್ತದೆ. ಈ ಸಿನಿಮಾದಲ್ಲಿ ನನ್ನ ಪಾತ್ರ ತುಂಬ ಗಂಭೀರವಾಗಿದೆ.