Advertisement
ಪೊಲೀಸರ ಸೂಚನೆಯಂತೆ ಆಯುಕ್ತರ ಕಚೇರಿಗೆ ಆಗಮಿಸಿದ್ದ ಗುಣರಂಜನ್ ಶೆಟ್ಟಿ ಅವರನ್ನು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮತ್ತು ಸಿಸಿಬಿ ಇನ್‌ಸ್ಪೆಕ್ಟರ್ ಮಹೇಶ್ ಪ್ರಸಾದ್ ಅವರು ವಿಚಾರಣೆ ನಡೆಸಿದ್ದಾರೆ. ವಿಚಾರಣೆಯ ಅನಂತರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಗುಣರಂಜನ್ ಶೆಟ್ಟಿ ಅವರು, ಮೂಲಗಳ ಮಾಹಿತಿ ಆಧರಿಸಿ ಗೃಹ ಇಲಾಖೆಗೆ ಮನವಿ ಮಾಡಿದ್ದೆ. ಸಾರ್ವಜನಿಕ ಜೀವನದಲ್ಲಿ ಇರುವುದರಿಂದ ಹಲವಾರು ಜನರೊಂದಿಗೆ ವ್ಯವಹಾರ ಇದೆ. ನಿಷ್ಠುರ ಇದ್ದವರು ಕೂಡ ಇದ್ದಾರೆ. ಮಂಗಳೂರು ಪೊಲೀಸರು ಮಾಹಿತಿ ನೀಡಲು ಬರುವಂತೆ ಸೂಚಿಸಿದ್ದರು. ನನಗೆ ಗೊತ್ತಿರುವ ಮಾಹಿತಿಯನ್ನು ಪೊಲೀಸರಿಗೆ ನೀಡಿದ್ದೇನೆ. ಇದರ ಹಿಂದೆ ಯಾರಿದ್ದಾರೆಂದು ಖಚಿತವಾಗಿ ಹೇಳಲು ಆಗುವುದಿಲ್ಲ. ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸತ್ಯ ಹೊರಬರಲಿದೆ. ಮನ್ವಿತ್ ಬಗ್ಗೆ ದೂರು ಹೇಳಿಲ್ಲ. ಆತನ ಜತೆ ಯಾವುದೇ ವೈಮನಸ್ಸಿಲ್ಲ ಎಂದು ತಿಳಿಸಿದರು.
ವಿಚಾರಣೆ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರು, ತನಿಖೆಗಾಗಿ ಮಾಹಿತಿ ಸಂಗ್ರಹಕ್ಕೆ ಕರೆಸಿಕೊಂಡಿದ್ದೇವೆ. ನಿಶ್ಚಿತವಾಗಿ ಯಾರು ಬೆದರಿಕೆ ಹಾಕಿದ್ದಾರೆಂದು ಗುಣರಂಜನ್ ಶೆಟ್ಟಿ ಅವರು ಹೇಳಿಲ್ಲ. ಕೊಲೆ ಬೆದರಿಕೆ ಇರುವುದನ್ನು ಹೇಳಿದ್ದಾರೆ. ತನಿಖೆ ಮುಂದುವರಿಯಲಿದೆ ಎಂದು ಹೇಳಿದ್ದಾರೆ. ವೈಷಮ್ಯ ಉಂಟಾಗಿತ್ತು
ಗುಣರಂಜನ್ ಶೆಟ್ಟಿ ಅವರಿಗೆ ಮನ್ವಿತ್ ರೈನಿಂದ ಜೀವ ಬೆದರಿಕೆ ಇದ್ದು, ಭದ್ರತೆ ನೀಡುವಂತೆ ಜಯಕರ್ನಾಟಕ ಜನಪರ ವೇದಿಕೆ ಸಂಘಟನೆ ಕಾರ್ಯಕರ್ತರು ಗೃಹ ಸಚಿವರಿಗೆ ಮನವಿ ಮಾಡಿದ್ದರು. ಆದರೆ ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ನನ್ನ ಮೇಲೆ ಇದುವರೆಗೆ ಯಾವುದೇ ಕ್ರಿಮಿನಲ್ ಪ್ರಕರಣಗಳು ಇಲ್ಲ. ನನ್ನ ವಿರುದ್ಧ ಯಾಕೆ ಆರೋಪ ಬರುತ್ತಿದೆ ಎಂಬುದು ಗೊತ್ತಾಗುತ್ತಿಲ್ಲ ಎಂದು ಮನ್ವಿತ್ ರೈ ಪ್ರತಿಕ್ರಿಯಿಸಿದ್ದರು. ಈ ಹಿಂದೆ ಗುಣರಂಜನ್ ಶೆಟ್ಟಿ ಹಾಗೂ ಮನ್ವಿತ್ ರೈ ಇಬ್ಬರೂ ಮುತ್ತಪ್ಪ ರೈ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದರು. ಅನಂತರ ಅವರಿಬ್ಬರ ನಡುವೆ ವೈಷಮ್ಯ ಉಂಟಾಗಿತ್ತು ಎನ್ನಲಾಗಿದೆ.