ಹೈದರಾಬಾದ್: ಕಾಂಗ್ರೆಸ್ ಪಕ್ಷ ತೊರೆದ ತೆಲುಗು ನಟಿ ವಿಜಯಶಾಂತಿ ಸೋಮವಾರ (ಡಿಸೆಂಬರ್ 07, 2020) ನವೆದೆಹಲಿಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಕೇಂದ್ರ ಗೃಹ ಸಚಿವ ಅಮತ್ ಶಾ ಅವರನ್ನು ಭೇಟಿಯಾದ ನಂತರ ವಿಜಯಲಕ್ಷ್ಮಿ ಬಿಜೆಪಿ ಸೇರ್ಪಡೆ ಬಗ್ಗೆ ನಿರ್ಧಾರ ಕೈಗೊಂಡಿರುವುದಾಗಿ ವರದಿ ತಿಳಿಸಿದೆ.
ವಿಜಯಶಾಂತಿ ದಕ್ಷಿಣ ಭಾರತದ ಸ್ಟಾರ್ ನಟಿಯಾಗಿದ್ದು, ಈಕೆ 1997ರಲ್ಲಿ ಭಾರತೀಯ ಜನತಾ ಪಕ್ಷದ ಮೂಲಕ ರಾಜಕೀಯ ಜೀವನ ಆರಂಭಿಸಿದ್ದರು. ನಂತರ ಪ್ರತ್ಯೇಕ ತೆಲಂಗಾಣ ರಾಜ್ಯಕ್ಕಾಗಿ ಹೋರಾಡುವ ನಿಟ್ಟಿನಲ್ಲಿ ವಿಜಯಶಾಂತಿ ಟಿಆರ್ ಎಸ್ ಪಕ್ಷ ಸೇರ್ಪಡೆಗೊಂಡಿದ್ದರು. 2009ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಸಂಸದರಾಗಿ ಆಯ್ಕೆಯಾಗಿದ್ದರು.
2014ರಲ್ಲಿ ಕೆ.ಚಂದ್ರಶೇಖರ್ ರಾವ್ ನೇತೃತ್ವದ ಟಿಆರ್ ಪಕ್ಷಕ್ಕೆ ಗುಡ್ ಬೈ ಹೇಳಿದ್ದ ವಿಜಯಶಾಂತಿ ಆಂಧ್ರಪ್ರದೇಶ, ತೆಲಂಗಾಣ ಪ್ರತ್ಯೇಕವಾಗುವ ಸಂದರ್ಭದಲ್ಲಿಯೇ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು.
ಇದೀಗ ವಿಜಯಶಾಂತಿ ಮತ್ತೆ ಭಾರತೀಯ ಜನತಾ ಪಕ್ಷ ಸೇರ್ಪಡೆಯಾಗುವ ಮೂಲಕ ಪಕ್ಷ 2023ರಲ್ಲಿ ನಡೆಯಲಿರುವ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಸ್ಟಾರ್ ಪ್ರಚಾರಕಿ ಹೊಣೆಗಾರಿಕೆ ವಹಿಸುವ ಸಾಧ್ಯತೆ ಇದ್ದಿರುವುದಾಗಿ ವರದಿ ತಿಳಿಸಿದೆ.
150 ಸದಸ್ಯ ಬಲದ ಗ್ರೇಟರ್ ಹೈದರಾಬಾದ್ ನಗರಪಾಲಿಕೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ 48 ವಾರ್ಡ್ ಗಳಲ್ಲಿ ಜಯ ಸಾಧಿಸಿತ್ತು. ಆಡಳಿತಾರೂಢ ಟಿಆರ್ ಎಸ್ 56 ವಾರ್ಡ್ ಗಳಲ್ಲಿ ಜಯ ಸಾಧಿಸಿತ್ತು. ಕಾಂಗ್ರೆಸ್ ಪಕ್ಷ ಕೇವಲ 2 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು.