Advertisement

Thothapuri 2; ಇದು ಎಲ್ಲರಿಗೂ ರುಚಿಸುವ ತೋತಾಪುರಿ: ನಟ ಜಗ್ಗೇಶ್‌ ಮಾತು

03:07 PM Sep 25, 2023 | Team Udayavani |

ನಟರಾದ ಜಗ್ಗೇಶ್‌-ಡಾಲಿ ಧನಂಜಯ್‌ ನಟಿಸಿರುವ “ತೋತಾಪುರಿ-2′ ಚಿತ್ರ ಸೆ.28ರಂದು ತೆರೆಕಾಣುತ್ತಿದೆ. ಈಗಾಗಲೇ ಟ್ರೇಲರ್‌ ಬಿಡುಗಡೆಯಾಗಿ ಮೆಚ್ಚುಗೆ ಪಡೆಯುತ್ತಿದೆ. ಈ ಚಿತ್ರದ ಬಗ್ಗೆ ಜಗ್ಗೇಶ್‌ ನಿರೀಕ್ಷೆ ಇಟ್ಟಿದ್ದು, ತಮ್ಮ ಪಾತ್ರ ಹಾಗೂ ಇತರ ವಿಚಾರಗಳ ಕುರಿತು ಮಾತನಾಡಿದ್ದಾರೆ.

Advertisement

ತೋತಾಪುರಿ 2 ರಿಲೀಸ್‌ ಆಗುತ್ತಿದೆ. ಚಿತ್ರದ ಬಗ್ಗೆ ಏನು ಹೇಳುತ್ತೀರಿ?

ಎರಡನೇ ಭಾಗದಲ್ಲಿ ಹಾಸ್ಯವಿದೆ. ಆದರೂ ಸಂದೇಶದಲ್ಲಿ ಕೊಂಚ ಗಂಭೀರವಾದ ವಿಷಯವಿದೆ. ಎಲ್ಲಾ ಕಲಾವಿದರ ನಟನೆ ಅದ್ಭುತ. ಎರಡು ಗಂಟೆಯ ಅವಧಿಯಲ್ಲಿ ಸಂದೇಶದ ಜೊತೆಗೆ ಮನರಂಜನೆ ಖಚಿತ. ಇವತ್ತಿನ ಫಾಸ್ಟ್‌ ದುನಿಯಾಗೆ ಹೇಳಿ ಮಾಡಿಸಿದಂತಿದೆ. ಮೇಕಿಂಗ್‌, ಲೊಕೇಶನ್ಸ್‌ ಎಲ್ಲವೂ ರಿಚ್‌ ಆಗಿದೆ.

ನಿಮ್ಮ ಪಾತ್ರದ ಬಗ್ಗೆ ಹೇಳಿ?

ಮೊದಲ ಭಾಗದಲ್ಲಿ ಎಲ್ಲರ ಪಾತ್ರ ಪರಿಚಯ ಆಗಿತ್ತು. ಈ ಭಾಗದಲ್ಲಿ ಡಾಲಿ ಮತ್ತು ಸುಮನ್‌ ರಂಗನಾಥ್‌ ಲವ್‌ಸ್ಟೋರಿ ತೆರೆದುಕೊಳ್ಳುತ್ತದೆ. ಅದನ್ನು ಜೋಡಿಸುವ ಪ್ರಯತ್ನ ನನ್ನದು. ಹಾಗೆಯೇ ನನ್ನ ಕಥೆಯೂ ಅರ್ಧಕ್ಕೆ ನಿಂತಿದೆ. ತೋತಾಪುರಿ 2 ನಲ್ಲಿ ಅದೂ ಸಂಪೂರ್ಣಗೊಳ್ಳಲಿದೆ. ನಂಜಮ್ಮನ ಪಾತ್ರಕ್ಕೊಂದು ಅರ್ಥ ಕೊಡಲಾಗಿದೆ. ಒಟ್ಟಾರೆ ಮನುಷ್ಯರು ಮನುಷ್ಯರಾಗಿ ಬಾಳಿ ಅನ್ನೋದೆ ನಮ್ಮ ಸಂದೇಶ. ಸಂವಿಧಾನದಲ್ಲೂ ಅದನ್ನೇ ಹೇಳಿದ್ದಾರೆ.

Advertisement

ಟ್ರೇಲರ್‌ಗೆ ರೆಸ್ಪಾನ್ಸ್‌ ಹೇಗಿದೆ?

ತುಂಬಾ ಚೆನ್ನಾಗಿದೆ. ಹೊಸದೇನೋ ಇದೆ ಎಂದು ಹೇಳುತ್ತಿದ್ದಾರೆ. ಇನ್ನು ಬ್ಯುಸಿನೆಸ್‌ ವಿಷಯದಲ್ಲೂ ತೋತಾಪುರಿ ರೆಕಾರ್ಡ್‌ ಮಾಡಿದೆ. ಓಟಿಟಿ ಒಳ್ಳೆ ರೇಟ್‌ಗೆ ಮಾರಾಟವಾಗಿದೆ. ಅದು ನನ್ನ ಇತ್ತೀಚೆಗಿನ ಸಿನಿಮಾಗಳಲ್ಲೇ ದೊಡ್ಡ ಮೊತ್ತ. ತೋತಾಪುರಿ 2 ಸಹ ಒಳ್ಳೆ ಬ್ಯುಸಿನೆಸ್‌ ಮಾಡೋದರಲ್ಲಿ ಸಂಶಯವಿಲ್ಲ. ಈ ಸಲ ಥಿಯೇಟರ್‌ನಲ್ಲೂ ಒಳ್ಳೆ ಮನರಂಜನೆ ಸಿಗಲಿದೆ.

ಮೊದಲ ಭಾಗ ನೋಡಿದವರಿಂದ ನಿಮಗೆ ಸಿಕ್ಕ ಪ್ರತಿಕ್ರಿಯೆ?

ಎಷ್ಟೋ ಮಂದಿ ಐಎಎಸ್‌ ಆಫೀಸರ್‌ಗಳು ಆ ಸಿನಿಮಾ ನೋಡಿ ಮೆಚ್ಚಿ ಮಾತನಾಡಿದ್ದಾರೆ. ಪದೇ ಪದೇ ಹಾಕಿಕೊಂಡು ನೋಡಿ ಫೋನ್‌ ಮಾಡಿದ್ದಾರೆ. ಯುಎಸ್‌ ನಲ್ಲಿ ಸುಮಾರು ಒಂದು ತಿಂಗಳು ವಾಸವಿದ್ದೆ. ಅಲ್ಲಿನ ನಾಲ್ಕು ಸ್ಟೇಟ್‌ ಸುತ್ತಿ ಬಂದಿದ್ದೇನೆ. ಹೆಂಗಸರು, ಮಕ್ಕಳಾದಿಯಾಗಿ “ತೋತಾಪುರಿ ಬಗ್ಗೆ ಮಾತನಾಡೋದನ್ನ ನೋಡಿ ಖುಷಿಯಾಯ್ತು. “ಪಾರ್ಟ್‌ 2ಗೆ ಕಾಯ್ತಿದ್ದೇವೆ ಎಂದಿದ್ದಾರೆ. ಇದು ಎಲ್ಲರಿಗೂ ರುಚಿಸುವ ತೋತಾಪುರಿ. ಈ ಭಾಗ ಮತ್ತಷ್ಟು ಸರಳ-ಸುಂದರ.

ಹೊಸ ಸಿನಿಮಾ ಬಗ್ಗೆ ಹೇಳಿ?

ಸುಮಾರು 15 ಕಥೆಗಳನ್ನ ಕೇಳಿದೆ. ನನಗೆ ಯಾವುದೂ ಹೊಂದಿಕೆ ಆಗಲಿಲ್ಲ, ಹೀಗಾಗಿ ಯಾವುದನ್ನೂ ಓಕೆ ಮಾಡಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next