Advertisement

ಪ್ರತಿಭಟಿಸಲೂ “ಕೈ’ಗೆ ಸಿಗದ ಕಾರ್ಯಕರ್ತರು

11:50 PM Jul 15, 2019 | Lakshmi GovindaRaj |

ಬೆಂಗಳೂರು: ಯಾಕೋ ಕಾಂಗ್ರೆಸ್‌ಗೆ ಕಾಡುವ ಕಾಲ ಮುಗಿದಂತೆ ಕಾಣಿಸುತ್ತಿಲ್ಲ. ಲೋಕಸಭೆ ಚುನಾವಣೆ ಸೋಲಿನ ನೋವಿನ ನಡುವೆಯೇ ಏಕಾಏಕಿ 13 ಮಂದಿ ಶಾಸಕರು ರಾಜೀನಾಮೆ ನೀಡಿ ಪಕ್ಷಕ್ಕೆ ಕೈ ಕೊಟ್ಟು ಮುಂಬೈ ಸೇರಿದ್ದರೆ, ಈ ನಡುವೆಯೇ ಅವರ ಕ್ಷೇತ್ರಗಳಲ್ಲಿ ಅವರ ವಿರುದ್ಧ ಪ್ರತಿಭಟನೆ ಮಾಡಿ ವಾಪಸ್‌ ಕರೆಸಲು ಹಾಗೂ ಒತ್ತಡ ಹೇರಲು ಪ್ರತಿಭಟನೆಗೆ ಕಾರ್ಯಕರ್ತರೂ ಸಿಗದ ಸ್ಥಿತಿ ನಿರ್ಮಾಣವಾಗಿದೆ.

Advertisement

ಕಾಂಗ್ರೆಸ್‌ನ 13 ಶಾಸಕರು ಏಕಾಏಕಿ ರಾಜೀನಾಮೆ ಸಲ್ಲಿಸಿರುವುದರಿಂದ ಮೈತ್ರಿ ಸರ್ಕಾರ ಅಲ್ಪ ಮತಕ್ಕೆ ಕುಸಿದು ಡೋಲಾಯಮಾನ ಸ್ಥಿತಿಗೆ ಬಂದು ತಲುಪಿದೆ. ಪಕ್ಷದ ನಾಯಕತ್ವ- ಮೈತ್ರಿ ಸರ್ಕಾರದ ಬಗ್ಗೆ ಮುನಿಸಿಕೊಂಡು ಮುಂಬೈನ ಹೊಟೇಲ್‌ನಲ್ಲಿ ಐಷಾರಾಮಿ ಜೀವನ ನಡೆಸುತ್ತಿರುವ ಶಾಸಕರ ವಿರುದ್ಧ ಅವರ ಕ್ಷೇತ್ರಗಳಲ್ಲಿ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಿದರೆ, ಸಾರ್ವಜನಿಕವಾಗಿ ಅವರ ವಿರುದ್ಧ ಕೆಟ್ಟ ಸಂದೇಶ ರವಾನೆಯಾಗುವುದರಿಂದ, ಮುಜುಗರಕ್ಕೊಳಗಾಗಿ ಶಾಸಕರು ವಾಪಸ್‌ ಬರುತ್ತಾರೆಂಬ ವಿಶ್ವಾಸ ಕಾಂಗ್ರೆಸ್‌ ನಾಯಕರದ್ದು.

ಅದೇ ಕಾರಣಕ್ಕೆ ಕ್ಷೇತ್ರದ ಕಾರ್ಯಕರ್ತರ ಮೂಲಕ ನಡೆಯುವ ಪ್ರತಿಭಟನೆಯ ಒತ್ತಡಕ್ಕಾದರೂ ಮಣಿದು ಶಾಸಕರು ವಾಪಸ್‌ ಬರುತ್ತಾರೆಂದು ರಾಜೀನಾಮೆ ಸಲ್ಲಿಸಿರುವ ಶಾಸಕರ ಕ್ಷೇತ್ರಗಳಲ್ಲಿ ಪಕ್ಷದ ವತಿಯಿಂದ ಪ್ರತಿಭಟನೆ ಮಾಡುವಂತೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಿಗೆ ಕೆಪಿಸಿಸಿ ವತಿಯಿಂದ ಸೂಚಿಸಲಾಗಿದೆ. ಆದರೆ, ಪಕ್ಷದ ಸೂಚನೆಗೆ ಯಾವುದೇ ಕ್ಷೇತ್ರಗಳಲ್ಲಿಯೂ ಸರಿಯಾದ ಸ್ಪಂದನೆ ದೊರೆಯುತ್ತಿಲ್ಲ ಎಂದು ತಿಳಿದು ಬಂದಿದೆ.

ಶಾಸಕರ ಹಿಂಬಾಲಕರೇ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರು: ರಾಜೀನಾಮೆ ಸಲ್ಲಿಸಿರುವ 13 ಕ್ಷೇತ್ರಗಳಲ್ಲಿ ಬಹುತೇಕ ಕ್ಷೇತ್ರಗಳಲ್ಲಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರೂ ಶಾಸಕರ ಹಿಂಬಾಲಕರೇ ಆಗಿದ್ದಾರೆ ಎನ್ನಲಾಗುತ್ತಿದೆ. ಅವರು ತಮ್ಮ ನಾಯಕರ ವಿರುದ್ಧ ಈಗ ಪ್ರತಿಭಟನೆ ಮಾಡಿದರೆ, ಮುಂದೆ ಶಾಸಕರು ವಾಪಸ್‌ ಬಂದ ಮೇಲೆ ತಮ್ಮ ವಿರುದ್ಧ ಮುನಿಸಿಕೊಂಡರೆ ರಾಜಕೀಯ ಭವಿಷ್ಯಕ್ಕೆ ಧಕ್ಕೆಯಾಗುತ್ತದೆ ಎನ್ನುವ ಕಾರಣಕ್ಕೆ ಬಹುತೇಕ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರು, ರಾಜೀನಾಮೆ ಸಲ್ಲಿಸಿ ಮುಂಬೈಗೆ ಹಾರಿರುವ ತಮ್ಮ ಕ್ಷೇತ್ರದ ಶಾಸಕರ ವಿರುದ್ಧ ಪ್ರತಿಭಟನೆಗೆ ಹಿಂದೇಟು ಹಾಕಿದ್ದಾರೆಂದು ಹೇಳಲಾಗುತ್ತಿದೆ.

ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿಯೂ ಇಬ್ಬರು ಅಥವಾ ಮೂವರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರನ್ನು ನೇಮಕ ಮಾಡಲಾಗಿರುತ್ತದೆ. ಅವರನ್ನು ಬಹುತೇಕ ಪಕ್ಷದ ಪರವಾಗಿ ಕೆಲಸ ಮಾಡುವ ಕಾರ್ಯಕರ್ತರನ್ನು ಗುರುತಿಸಿ, ಜಿಲ್ಲಾಧ್ಯಕ್ಷರು, ಜಿಲ್ಲೆಯ ಕೆಪಿಸಿಸಿ ಉಸ್ತುವಾರಿ ಕಾರ್ಯದರ್ಶಿಗಳ ಸಹಮತ ಪಡೆದು ನೇಮಕ ಮಾಡಲಾಗುತ್ತದೆ. ಆದರೆ, ಇತ್ತೀಚೆಗೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರ ನೇಮಕದಲ್ಲಿ ಸರಿಯಾದ ಮಾನದಂಡ ಅನುಸರಿಸದೇ ಶಾಸಕರು ಶಿಫಾರಸ್ಸು ಮಾಡಿದವರನ್ನೇ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ.

Advertisement

ಶಾಸಕರ ಹಿಂಬಾಲಕರನ್ನೇ ಪಕ್ಷದ ಹುದ್ದೆಗಳಿಗೆ ನೇಮಕ ಮಾಡುವ ಪ್ರವೃತ್ತಿ ಹೆಚ್ಚಾಗಿರುವುದರಿಂದ ಕಾಂಗ್ರೆಸ್‌ನಲ್ಲಿ ಪಕ್ಷದ ಪರ ಕೆಲಸ ಮಾಡುವ ಕಾರ್ಯಕರ್ತರು ಸಿಗದಂತಾಗಿದ್ದಾರೆ. ಅಲ್ಲದೇ, ಶಾಸಕರ ಅಣತಿಯಂತೆ ನಡೆಯುವವರೇ ಹೆಚ್ಚಾಗಿರುವುದರಿಂದ ಚುನಾವಣೆ ಸಂದರ್ಭದಲ್ಲಿಯೂ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರ ಮೇಲೆ ಪಕ್ಷದ ಹಿಡಿತವೇ ಇಲ್ಲದಂತಾಗಿರುತ್ತದೆ ಎಂಬ ಮಾತುಗಳು ಕಾಂಗ್ರೆಸ್‌ ವಲಯದಲ್ಲಿ ಕೇಳಿ ಬರುತ್ತಿವೆ.

ಮಸ್ಕಿ ಶಾಸಕ ಪ್ರತಾಪ್‌ಗೌಡ ಪಾಟೀಲ್‌ ಹಾಗೂ ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್‌ ವಿರುದ್ಧ ಒತ್ತಾಯ ಪೂರ್ವಕವಾಗಿ ಪ್ರತಿಭಟನೆ ಮಾಡಿದ್ದರೂ, ಆಯಾ ಕ್ಷೇತ್ರಗಳಲ್ಲಿ ಪಕ್ಷದ ಜವಾಬ್ದಾರಿ ವಹಿಸಿಕೊಂಡಿರುವ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರು ಮುಂಚೂಣಿಯಲ್ಲಿ ಗುರುತಿಸಿಕೊಂಡಿಲ್ಲ ಎನ್ನಲಾಗಿದೆ.

ಇನ್ನು ಬೆಂಗಳೂರಿನ ನಾಲ್ವರು ಶಾಸಕರ ಕ್ಷೇತ್ರಗಳಲ್ಲಿ ಪ್ರತಿಭಟಿಸುವಂತೆ ಸ್ವತಃ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಸೂಚನೆ ನೀಡಿದ್ದರೂ, ಯಾರೂ ಕ್ಯಾರೆ ಎನ್ನುತ್ತಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಪಕ್ಷದ ಸೂಚನೆ ನಿರ್ಲಕ್ಷ್ಯ ಮಾಡಿದರೂ, ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಕೂಡ ಕೆಪಿಸಿಸಿ ಹಿಂದೇಟು ಹಾಕುತ್ತಿದೆ ಎನ್ನಲಾಗುತ್ತಿದೆ.

ಏಕೆಂದರೆ, ಅತೃಪ್ತ ಶಾಸಕರನ್ನು ಮನವೊಲಿಸಿ, ವಾಪಸ್‌ ಕರೆತರುವ ಪ್ರಯತ್ನ ಮುಂದುವರಿದಿರುವುದರಿಂದ ಈ ಸಂದರ್ಭದಲ್ಲಿ ಶಾಸಕರ ಹಿಂಬಾಲಕರ ಮೇಲೆ ಕ್ರಮ ಕೈಗೊಂಡರೆ, ಅದು ರಾಜೀನಾಮೆ ಸಲ್ಲಿಸಿರುವ ಶಾಸಕರ ಆಕ್ರೋಶಕ್ಕೆ ಕಾರಣವಾಗುವ ಆತಂಕದಿಂದ ಕಾಂಗ್ರೆಸ್‌ ನಾಯಕರು ಅಸಹಾಯಕರಾಗಿದ್ದಾರೆಂದು ಹೇಳಲಾಗುತ್ತಿದೆ.

ಪದಾಧಿಕಾರಿಗಳ ವಿಸರ್ಜನೆಯೂ ಕಾರಣ: ಲೋಕಸಭೆ ಚುನಾವಣೆಯಲ್ಲಿನ ಸೋಲಿನ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹಾಗೂ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಅವರನ್ನು ಹೊರತುಪಡೆಸಿ ಏಕಾಏಕಿ ಪಕ್ಷದ ಪದಾಧಿಕಾರಿಗಳನ್ನು ವಿಸರ್ಜನೆ ಮಾಡಿರುವುದೂ ಈಗ ಪ್ರತಿಭಟನೆಗೆ ಕಾರ್ಯಕರ್ತರು ಸಿಗದಿರುವಂತಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಜಿಲ್ಲೆಗಳಿಗೆ ಉಸ್ತುವಾರಿ ಕಾರ್ಯದರ್ಶಿಗಳಿದ್ದರೆ, ಅವರು ಸ್ಥಳೀಯ ಮುಖಂಡರ ನೇತೃತ್ವದಲ್ಲಿಯಾದರೂ ಪ್ರತಿಭಟನೆ ನಡೆಸುವ ಪ್ರಯತ್ನ ನಡೆಸುತ್ತಿದ್ದರು. ಆದರೆ, ಪದಾಧಿಕಾರಿಗಳೇ ಇಲ್ಲದಿರುವುದರಿಂದ ಕಾಂಗ್ರೆಸ್‌ಗೆ ಪ್ರತಿಭಟನೆಗೂ ಕಾರ್ಯಕರ್ತರು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬ ಮಾತುಗಳು ಪಕ್ಷದ ವಲಯದಲ್ಲಿ ಕೇಳಿ ಬರುತ್ತಿವೆ.

* ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next