Advertisement

ಸಂಶೋಧನೆಗಳಲ್ಲಿ ಕ್ರಿಯಾಶೀಲರಾಗಿ

01:11 PM Mar 26, 2017 | |

ಹರಿಹರ: ವಿದ್ಯಾರ್ಥಿಗಳು ಆರಂಭದಿಂದಲೇ ಸಂಶೋಧನಾ ಮನೋಭಾವ ಬೆಳೆಸಿಕೊಂಡು ವೈಜ್ಞಾನಿಕ ಆವಿಷ್ಕಾರಗಳಲ್ಲಿ ಕ್ರಿಯಾಶೀಲರಾಗಬೇಕು ಎಂದು ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌ ಕರೆ ನೀಡಿದರು. 

Advertisement

ವಿದ್ಯಾರ್ಥಿಗಳಲ್ಲಿ ಮೂಲ ವಿಜ್ಞಾನದ ಬಗ್ಗೆ ಜಾಗೃತಿ ಮೂಡಿಸಲು ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕಾಲೇಜು ಶಿಕ್ಷಣ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ ವಿಜ್ಞಾನ ಮೇಳ ಉದ್ಘಾಟಿಸಿ ಅವರು ಮಾತನಾಡಿದರು. 

ಇಂದಿನ ವಿಜ್ಞಾನದ ಬೆಳವಣಿಗೆಗೆ ಪ್ರಾಚೀನ ಕಾಲದಿಂದಲೂ ಹಲವರು ಶ್ರಮಿಸಿದ್ದಾರೆ. ಹಿಂದಿನವರು ಆವಿಷ್ಕರಿಸಿದ ಸಂಗತಿಗಳ ತಳಹದಿಯಲ್ಲಿ ಹೊಸತನ್ನು ಕಂಡುಕೊಳ್ಳಲಾಗುತ್ತಿದೆ. ಜ್ಞಾನ ಕಾಲದಿಂದ ಕಾಲಕ್ಕೆ ವರ್ಗಾವಣೆ ಆಗುತ್ತಿರುವುದರಿಂದಲೇ ವಿಜ್ಞಾನ ಕ್ಷೇತ್ರದಲ್ಲಿ ಇಂದು ದೊಡ್ಡ ಸಾಧನೆ ಕಾಣಲು ಸಾಧ್ಯವಾಗಿದೆ.

ಹೊಸ ತಲೆಮಾರಿನ ವಿದ್ಯಾರ್ಥಿಗಳೂ ಸಹ ತಮ್ಮ ಆಸಕ್ತಿಯ ಕ್ಷೇತ್ರಗಳಲ್ಲಿ ಸಂಶೋಧನೆ ಕೈಗೊಳ್ಳಬೇಕು ಎಂದರು. ಮನುಷ್ಯನ ಎಲ್ಲಾ ಚಟುವಟಿಕೆಗಳಿಗೂ ಶಕ್ತಿಯ ಸಂಪನ್ಮೂಲ ಅತ್ಯವಶ್ಯ. ಆದರೆ ಸಾಂಪ್ರದಾಯಿಕ ಇಂಧನ ಶಕ್ತಿಯ ಮೂಲಗಳು ಮುಗಿದು ಹೋಗುವ ಅಪಾಯ ಇರುವುದರಿಂದ ಆದಷ್ಟು ಬೇಗ ಪರ್ಯಾಯ ಶಕ್ತಿಯ ಮೂಲ ಹುಡುಕಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ವಿಜ್ಞಾನಿಗಳು ಅವಿರತ ಪ್ರಯತ್ನ ನಡೆಸಿದ್ದಾರೆ ಎಂದರು. 

ಡಿಆರ್‌ಡಿಒದ ನಿವೃತ್ತ ವಿಜ್ಞಾನಿ ಸುಧಿಧೀಂದ್ರ ಹಾಲೊªಡ್ಡೇರಿ ಮಾತನಾಡಿ, ವಿಜ್ಞಾನ ತಂತ್ರಜ್ಞಾನದ ಕ್ಷೇತ್ರದಲ್ಲಿ ಭಾರತಕ್ಕೆ  ಜಗತ್ತಿನಲ್ಲೇ 5ನೇ ಸ್ಥಾನವಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಂತೂ ವಿಶ್ವವೇ ನಮ್ಮೆಡೆಗೆ ನೋಡುವಂತೆ ಅದ್ಭುತ ಸಾಧನೆ ಮಾಡಲಾಗಿದೆ. ಇದೆ ಕಾರಣಕ್ಕೆ ವಿಶ್ವಸಂಸ್ಥೆಯಲ್ಲೂ ನಮ್ಮ ದೇಶಕ್ಕೆ ಹೆಚ್ಚಿನ ಆದ್ಯತೆ ಸಿಗುತ್ತಿದೆ ಎಂದರು.ಈ ಸಾಧನೆಯಲ್ಲಿ ಯುವಜನತೆಯ ಪಾತ್ರ ಮಹತ್ವದ್ದಾಗಿದೆ.

Advertisement

ಮಹಿಳೆಯರ ಸಬಲೀಕರಣ ಮಾಡಿ, ಅವರ ಕೊಡುಗೆ ಪಡೆಯುವಲ್ಲೂ ಭಾರತ ಮುಂಚೂಣಿಯಲ್ಲಿದೆ. ವಿಜ್ಞಾನದ ಅತ್ಯಂತ ಮಹತ್ವದ ಜ್ಞಾನ ಶಾಖೆಯಾಗಿದ್ದು, ಜಾತಿ, ಧರ್ಮ, ದೇಶ, ಖಂಡಗಳ ಗಡಿಯಾಚೆ ಎಲ್ಲಾ ಮಾನವರ ಕಲ್ಯಾಣಕ್ಕೆ ವಿಜ್ಞಾನ ಶ್ರಮಿಸುತ್ತಿದೆ. ಇಂತಹ ವಿಜ್ಞಾನದ ವಿದ್ಯಾರ್ಥಿಗಳಾಗಿ ನೀವು ಹೆಮ್ಮೆಪಡಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. 

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ವೈಜ್ಞಾನಿಕಾಧಿಕಾರಿ ಡಾ|ರಮೇಶ್‌ ಎ.ಎಂ. ಮಾತನಾಡಿ, ಶಕ್ತಿಯ ಸಂಪನ್ಮೂಲ ಸಂರಕ್ಷಿಸಲು ಅಳವಡಿಸಿಕೊಂಡಿರುವ ಪರಿಸರಾತ್ಮಕ, ಆರ್ಥಿಕ, ಭೌಗೋಳಿಕ ಹಾಗೂ ನ್ಯಾಯಿಕ ಕ್ರಮಗಳ ಬಗ್ಗೆ ಮತ್ತು

ಪರಿಸರ ಸ್ನೇಹಿ ಮತ್ತು ಸುಲಭವಾಗಿ ಪುನರ್‌ನವೀಕರಿಸಬಹುದಾದ ಅಸಾಂಪ್ರದಾಯಿಕ ಶಕ್ತಿಯ ಸಂಪನ್ಮೂಲಗಳಾದ ಸೌರಶಕ್ತಿ, ವಾಯು, ಜಲ, ಭೂ-ಉಷ್ಣ, ಅಣು, ಜೈವಿಕ, ಸಾಗರ, ಸಮುದ್ರದ ಅಲೆಗಳು ಶಕ್ತಿ ಮತ್ತು ತಾಂತ್ರಿಕ ಜ್ಞಾನದಿಂದ ಉತ್ಪಾದಿಸುವ ಶಕ್ತಿಗಳ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸಬೇಕಾಗಿದೆ ಎಂದರು. 

ಕಾಲೇಜಿನ ಭೌತಶಾಸ್ತ್ರ ವಿಭಾಗ ಮುಖ್ಯಸ್ಥ, ಮೇಳದ ಸಂಯೋಜಕ ಎಸ್‌.ರಾ.ಮನ್ನೋಪಂತರ್‌ ಮಾತನಾಡಿದರು. ಮೇಳದ ನಿಮಿತ್ತ ಆಯೋಜಿಸಿದ್ದ ವಿಜ್ಞಾನ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಸಂಜೆ ಸಮಾರೋಪ ಸಮಾರಂಭದಲ್ಲಿ ನಗದು ಬಹುಮಾನ ನೀಡಲಾಯಿತು. 

ಜಿಲ್ಲೆಯ 14 ಕಾಲೇಜಿನ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಪ್ರಾಚಾರ್ಯ ಡಾ| ಎಸ್‌.ಆರ್‌.ಅಂಜಿನಪ್ಪ, ಐಕ್ಯೂಎಸಿ ಸಂಚಾಲಕ ಸುರೇಶ್‌ ಜಿ.ಎಸ್‌., ಉಪನ್ಯಾಸಕರಾದ ವೆಂಕಟೇಶಮೂರ್ತಿ, ಬಿ.ಕೆ.ಮಂಜುನಾಥ, ಎಂ.ಎಸ್‌ .ತಿಪ್ಪೇಸ್ವಾಮಿ, ಡಾ| ದೂಪದಹಳ್ಳಿ ಬಸವರಾಜ್‌, ಟಿ.ಎಸ್‌. ಮಹಾಂತೇಶ್‌, ಗುರುರಾಜ್‌ ಜೆ.ಪಿ., ಬಿ.ನಾಗರಾಜ್‌ ಮತ್ತಿತರರಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next