Advertisement

Puttur: ಕಲ್ಪವೃಕ್ಷಕ್ಕೆ ಮರುಜೀವವಿತ್ತ ಎಂಜಿನಿಯರ್‌

12:50 PM Nov 18, 2024 | Team Udayavani |

ಪುತ್ತೂರು: ಕಟ್ಟಡ ಕಟ್ಟುವ ಜಾಗದಲ್ಲಿ ಗಿಡ ಮರಗಳಿವೆ ಎಂದಾಕ್ಷಣ ತತ್‌ಕ್ಷಣ ನಾವು ಮಾಡುವುದು ಆ ಗಿಡ- ಮರಗಳನ್ನು ಅನಾಯಾಸವಾಗಿ ನೆಲಕ್ಕುರುಳಿಸುವುದು. ಅನಂತರ ಅದರ ಮೇಲೆ ಕಟ್ಟಡ ನಿರ್ಮಾಣದ ಕೆಲಸ ಆರಂಭಿಸುವುದು. ಆದರೆ ಇಲ್ಲೊಬ್ಬ ಎಂಜಿನಿಯರ್‌ ಮನೆ ಕಟ್ಟಲು ತೆಂಗಿನ ಮರ ಕಡಿಯಲೇಬೇಕಾದ ಸಂದರ್ಭ ಎದುರಾದಾಗ, ಹಾಗೆ ಮಾಡದೆ ಕಲ್ಪವೃಕ್ಷಕ್ಕೆ ಜೀವದಾನ ನೀಡಿ ಮನೆ ಕಟ್ಟಲು ಮುಂದಾದ ಧನಾತ್ಮಕ ಕಥೆಯಿದು.

Advertisement

ಪುತ್ತೂರಿನ ವಾಸ್ತು ಎಂಜಿನಿಯರ್‌, ನಗರಸಭಾ ಸದಸ್ಯ ಪಿ.ಜಿ. ಜಗನ್ನಿವಾಸ ರಾವ್‌ ತೆಂಗಿನ ಮರಗಳಿಗೆ ಜೀವದಾನ ನೀಡಿದವರು. ತನ್ಮೂಲಕ ಹಸುರು ಪ್ರೀತಿಯನ್ನು ತೋರಿಸಿದವರು. ಅವರ ಕಾಳಜಿಗೆ ಆಳೆತ್ತರದ ಎರಡು ಕಲ್ಪವೃಕ್ಷ ಉಳಿ ದಿದೆ. ಕಡಿದು ಉರುಳಿಸುವುದೇ ಪರಿಹಾರ ಎಂದು ನಂಬಿರುವ ಸಾವಿರಾರು ಮಂದಿಗೆ ಉಳಿಸಲು ಮನಸ್ಸಿದ್ದರೆ ಹೀಗೊಂದು ದಾರಿ ಇದೆ ಎಂಬ ಜಾಗೃತಿ ಪಾಠ ಸಾರಲು ಎನ್ನುತ್ತಿದೆ ಸ್ಥಳಾಂತರದ ಸಂದೇಶ.

ಏನಿದು ಕಾರ್ಯಾಚರಣೆ
ನಗರದ ನಿವಾಸಿ ಪಿ.ಜಿ. ಜಗನ್ನಿವಾಸ ರಾವ್‌ ಅವರಿಗೆ ಬಲಾ°ಡಿನಲ್ಲಿ 40 ಸೆಂಟ್ಸ್‌ ಜಾಗ ಇದ್ದು ಅದರಲ್ಲಿ ಮನೆ ಕಟ್ಟಲು ಮುಂದಾದರು. ಆದರೆ ಮನೆ ನಿರ್ಮಾಣದ ಯೋಜನೆ ಪ್ರಕಾರ ಮನೆ ಕಟ್ಟುವ ಸ್ಥಳದಲ್ಲಿದ್ದ ದೊಡ್ಡ ಎರಡು ತೆಂಗಿನ ಮರಗಳನ್ನು ತೆಗೆಯಬೇಕಾದ ಸಂದರ್ಭ ಎದುರಾಯಿತು. ಇಂತಹ ಸಂದರ್ಭದಲ್ಲಿ ಹೆಚ್ಚಿನವರಿಗೆ ಸಹಜವಾಗಿ ಕಡಿದುರುಳಿಸುವ ಯೋಚನೆಗಳೇ ಬರುತ್ತದೆ. ಯಾರು ಏನೇ ಸಲಹೆ ಕೊಟ್ಟರೂ ಬಹುತೇಕರು ಅದನ್ನೇ ಮಾಡುತ್ತಾರೆ. ಆದರೆ ಜಗನ್ನಿವಾಸ್‌ ರಾವ್‌ ಭಿನ್ನವಾಗಿ ಯೋಚಿಸಿದರು. ಅವರು ಮರ ವನ್ನು ಉರುಳಿಸುವ ಯೋಚನೆ ಮಾಡಲಿಲ್ಲ. ಬದಲಿಗೆ ಅದಕ್ಕೆ ಜೀವ ಕೊಟ್ಟು ಯೋಜನೆ ಪ್ರಕಾರವೇ ಮನೆ ನಿರ್ಮಾಣಕ್ಕೆ ಮುಂದಡಿ ಇಡಲು ನಿರ್ಧಾರ ಕೈಗೊಂಡರು.

ಬೇರು ಸಮೇತ ಸ್ಥಳಾಂತರ
ನ. 16ರಂದು ತೆಂಗಿನ ಮರ ಸ್ಥಳಾಂತ ರ ಕಾರ್ಯಾಚರಣೆಗೆ ದಿನ ನಿಗದಿ ಮಾಡಿದರು. ಅದಕ್ಕೆ ಆಯ್ದುಕೊಂಡದ್ದು ಜೆಸಿಬಿ, ಇನ್ನೊಂದು ಕ್ರೇನ್‌. ಮೊದಲಿಗೆ ಸ್ಥಳಾಂತರ ಸ್ಥಳದಿಂದ 50 ಮೀ. ದೂರದಲ್ಲಿ ತೆಂಗಿನ ಮರ ನೆಡಲೆಂದು ಎರಡು ಹೊಂಡ ತೋಡಲಾಯಿತು. ಅದಾದ ಬಳಿಕ ಜೆಸಿಬಿ ಮೂಲಕ ತೆಂಗಿನ ಮರಗಳ ಸುತ್ತಲೂ ಮಣ್ಣು ಬಿಡಿಸಿ ಮುಖ್ಯ ಬೇರು ಸಮೇತ ಕ್ರೇನ್‌ ಮೂಲಕ ಎತ್ತಿಕೊಂಡು ಸ್ಥಳಾಂತರ ಮಾಡುವ ಕಾರ್ಯಾಚರಣೆ ನಡೆಯಿತು. ಜೆಸಿಬಿ ಮೂಲಕ ತೆಂಗಿನ ಮರದ ಸುತ್ತಲೂ ಮಣ್ಣು ತೆರವು ಮಾಡಿ ಬೇರು ಸಹಿತ ಮೇಲೆತ್ತುವ ಪ್ರಯತ್ನ ಒಂದೆಡೆ ಸಾಗಿದರೆ, ಇನ್ನೊಂದೆಡೆ ಕ್ರೇನ್‌ ಮೂಲಕ ತೆಂಗಿನ ಮರದ ನಡುಭಾಗಕ್ಕೆ ಬೆಲ್ಟ್ ಅಳವಡಿಸಿ ಕೆಳಗೆ ಬೀಳದಂತೆ ಭದ್ರಪಡಿಸಲಾಯಿತು. ಜೆಸಿಬಿ ತನ್ನ ಕೆಲಸ ಪೂರ್ಣಗೊಳಿಸುತ್ತಿದ್ದಂತೆ ನಿಧಾನವಾಗಿ ಕ್ರೇನ್‌ ಮೂಲಕ ತೆಂಗಿನ ಮರವನ್ನು ಹೊಸದಾಗಿ ತೋಡಿದ ಹೊಂಡಕ್ಕೆ ಸ್ಥಳಾಂತರಿಸಲಾಯಿತು. ಅಲ್ಲಿ ತೆಂಗಿನ ಮರ ನೆಡಲಾಯಿತು. ಒಂದು ತೆಂಗಿನ ಮರ ಸ್ಥಳಾಂತರಕ್ಕೆ ಸುಮಾರು ಒಂದು ಗಂಟೆ ತಗಲಿತು. ಒಟ್ಟು 3 ಗಂಟೆಗಳ ಕಾಲ ಸ್ಥಳಾಂತರ ಪ್ರಕ್ರಿಯೆ ನಡೆಯಿತು.

ಮನೆ ಕಟ್ಟುವ ಯೋಚನೆ ಮಾಡಿದ್ದೆ. ಇದಕ್ಕೆ ಎರಡು ತೆಂಗಿನ ಮರ ತೆಗೆಯಬೇಕಾದ ಅನಿವಾರ್ಯ ಉಂಟಾಯಿತು. ಗಿಡ ಮರಗಳನ್ನು ಕಡಿಯುವುದು ಸರಿ ಅಲ್ಲ ಅನ್ನುವುದು ನನ್ನ ನಿಲುವು. ನನ್ನ ಗುರುಗಳಾದ ಎಂ.ಎಸ್‌. ಪ್ರಸಾದ್‌ ಮುನಿಯಂಗಳ ಅವರು ಮರ ಕಡಿಯದೆ ಕಟ್ಟಡ ಕಟ್ಟಬೇಕು ಎಂದು ನಿರ್ದೇಶನ ನೀಡಿದ್ದರು. ಹೀಗಾಗಿ ತೆಂಗಿನಮರ ಉಳಿವಿಗಾಗಿ ಸ್ಥಳಾಂತ ರಕ್ಕೆ ಮುಂದಾದೆ. ಸ್ಥಳಾಂತರ ಮಾಡಿದ ತೆಂಗಿನ ಮರಗಳು ಶೇ.90 ರಷ್ಟು ಬದುಕಿದ ಉದಾಹರಣೆಗಳು ಇವೆ.
– ಪಿ.ಜಿ. ಜಗನ್ನಿವಾಸ ರಾವ್‌, ವಾಸ್ತು ಎಂಜಿನಿಯರ್‌

Advertisement

ಆಳ ಹೆಚ್ಚಳ, ದಿಕ್ಕು ಬದಲಾಗಬಾರದು..!
ಕೃಷಿಯಲ್ಲಿ ನನಗೆ ಹೆಚ್ಚಿನ ಅನುಭವ ಇಲ್ಲ ಎನ್ನುವ ಪಿ.ಜಿ. ಜಗನ್ನಿವಾಸ್‌ ರಾವ್‌ ಅವರು ಗಿಡ ಮರವನ್ನು ಕಡಿಯದೆ ಕಾಪಾಡಬೇಕು ಅನ್ನುವ ಯೋಚನೆಯವರು. ಅದೇ ಸ್ಥಳಾಂತರಕ್ಕೆ ಮೂಲ ಪ್ರೇರಣೆ. ಜೆಸಿಬಿ ಯಂತ್ರದ ಕೃಷ್ಣಾನಂದ, ಕ್ರೇನ್‌ ಯಂತ್ರದ ತಿಲಕ್‌ ಅವರ ಅನುಭವವೂ ಸ್ಥಳಾಂತರಕ್ಕೆ ಸಹಕಾರಿಯಾಯಿತು. ಒಟ್ಟು ಮೂರು ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ ಎರಡು ತೆಂಗಿನ ಮರಗಳ ರಕ್ಷಣೆ ಕಾರ್ಯ ನಡೆಯಿತು. ಸ್ಥಳಾಂತರದ ಸಂದರ್ಭದಲ್ಲಿ ಮೂರು ಅಂಶಗಳಿಗೆ ಗಮನ ನೀಡಲಾಯಿತು ಅನ್ನುತ್ತಾರೆ ಜಗನ್ನಿವಾಸ ರಾವ್‌. ಮೊದಲಿಗೆ ಸ್ಥಳಾಂತರ ಮಾಡಿ ನೆಡಲು ತೋಡುವ ಹೊಂಡ ಆಳವಾಗಿರಬೇಕು, ನೆಡುವ ಸಂದರ್ಭದಲ್ಲಿ ನೀರು, ಗಾಳಿ ಹೋಗಲು ಎರಡು ಪೈಪ್‌ಗ್ಳನ್ನು ಜೋಡಿಸಬೇಕು, ತೆರವು ಮಾಡುವ ಮೊದಲು ತೆಂಗಿನ ಮರ ಯಾವ ದಿಕ್ಕಿನಲ್ಲಿ ಇತ್ತೋ ನೆಡುವ ಸಂದರ್ಭದಲ್ಲಿಯು ಅದೇ ದಿಕ್ಕಿನಲ್ಲಿ ಇರಬೇಕು. ಈ ಸಲಹೆಗಳನ್ನು ಕೆಲವರೂ ನೀಡಿದ್ದರು. ಅದರಂತೆ ಮಾಡಿದೆವು. ಒಂದು ತೆಂಗಿನ ಮರ ಸ್ಥಳಾಂತರಕ್ಕೆ 5 ಸಾವಿರ ರೂ. ಖರ್ಚು ತಗಲಬಹುದು. ಆದರೆ ಅದು ಸ್ಥಳಾಂತರ ಸ್ಥಳವನ್ನು ಆಧರಿಸಿ ಹೆಚ್ಚು ಕಡಿಮೆ ಇರಬಹುದು ಎನ್ನುತ್ತಾರೆ ಜಗನ್ನಿವಾಸ ರಾವ್‌.

-ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next