ಬೆಂಗಳೂರು: ನಗರದಲ್ಲಿ ರಸ್ತೆ ಗುಂಡಿಗಳಿಂದ ಭಾರಿ ಅನಾಹುತಗಳು ಸಂಭವಿಸುತ್ತಿದ್ದರೂ, ಪಾಲಿಕೆಯ ಅಧಿಕಾರಿಗಳು ಮಾತ್ರ ಪೂರ್ಣ ಪ್ರಮಾಣದಲ್ಲಿ ಇನ್ನೂ ಗುಂಡಿಗಳನ್ನು ಮುಚ್ಚುವ ಕಾರ್ಯಕ್ಕೆ ಚಾಲನೆ ನೀಡಿಲ್ಲ. ನಗರದಲ್ಲಿ ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ 16 ಸಾವಿರಕ್ಕೂ ಹೆಚ್ಚು ರಸ್ತೆಗುಂಡಿಗಳು ಸೃಷ್ಟಿಯಾಗಿವೆ. ರಸ್ತೆ ಗುಂಡಿ ಮುಚ್ಚುವ ಕಾಮಗಾರಿ ಕೈಗೊಳ್ಳದ ಕಾರಣ ಗುಂಡಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ.
ಎರಡು ದಿನಗಳ ಹಿಂದೆ ಮೈಸೂರು ರಸ್ತೆಯ ಸಿರಸಿ ಮೇಲ್ಸೇತುವೆ ಬಳಿ ದಂಪತಿ ರಸ್ತೆ ಗುಂಡಿಯಿಂದಾಗಿ ಅಪಘಾತ ಸಂಭವಿಸಿ ಮೃತಪಟ್ಟಿದ್ದರು. ಪ್ರತಿನಿತ್ಯ ನಗರದ ನಾನಾ ಭಾಗಗಳಲ್ಲಿ ಈ ರೀತಿಯ ಅಪಘಾತಗಳು ಸಂಭವಿಸುತ್ತಲೇ ಇದ್ದು ಅಮಾಯಕರು ಪ್ರಾಣ ಕಳೆದುಕೊಳ್ಳುವಂತಾಗಿದೆ.
ಪ್ರಮುಖ ರಸ್ತೆಗಳಲ್ಲಿ ಈಗಾಗಲೇ ಸೃಷ್ಟಿಯಾಗಿರುವ ಗುಂಡಿಗಳು ದಿನೇ ದಿನೇ ಮೃತ್ಯುಕೂಪಗಳಾಗಿ ಪರಿವರ್ತನೆಯಾಗುತ್ತಿದೆ. ಮಳೆ ಬಂದಾಗ ಗುಂಡಿಗಳಲ್ಲಿ ನೀರು ನಿಂತ ಪರಿಣಾಮ ಹಲವಾರು ಕಡೆಗಳಲ್ಲಿ ಅಪಘಾತಗಳು ಸಂಭವಿಸುತ್ತಿವೆ.
ಕಳೆದ ತಿಂಗಳು ಸುರಿದ ಮಳೆಯಿಂದಾಗಿ ಪಾಲಿಕೆಯ ವ್ಯಾಪ್ತಿಯಲ್ಲಿ 5 ಸಾವಿರ ರಸ್ತೆಗುಂಡಿಗಳು ಸೃಷ್ಟಿಯಾಗಿರುವುದಾಗಿ ಪಾಲಿಕೆಯ ಅಧಿಕಾರಿಗಳು ಅಂಕಿ-ಅಂಶಗಳನ್ನು ನೀಡಿದ್ದರು. ಜತೆಗೆ ಆ ಪೈಕಿ 4,500 ಗುಂಡಿಗಳನ್ನು ಮುಚ್ಚಿರುವುದಾಗಿಯೂ ತಿಳಿಸಿದ್ದಾರೆ. ಇದೀಗ ಮತ್ತೆ 16 ಸಾವಿರ ಗುಂಡಿಗಳು ಸೃಷ್ಟಿಯಾಗಿದ್ದು, ಅನಾಹುತುಗಳು ಮಾತ್ರ ಇನ್ನೂ ತಪ್ಪಿಲ್ಲ.
ನಗರದಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ನಗರದಲ್ಲಿ 15,935 ಗುಂಡಿಗಳು ಸೃಷ್ಟಿಯಾಗಿವೆ ಎಂದು ಪಾಲಿಕೆಯ ಅಧಿಕಾರಿಗಳು ಮಾಹಿತಿ ನೀಡಿದ್ದು, ತ್ವರಿತಗತಿಯಲ್ಲಿ ರಸ್ತೆಗುಂಡಿಗಳ ಮುಚ್ಚುವ ಕೆಲಸ ನಡೆಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಮಳೆಯ ಸಬೂಬು: ಕಳೆದ ಕೆಲ ದಿನಗಳಿಂದ ಸುರಿದ ಮಳೆಯಿಂದಾಗಿ ನಗರದಲ್ಲಿ ಸಾವಿರಾರು ರಸ್ತೆಗಳು ಗುಂಡಿಗಳು ಸೃಷ್ಟಿಯಾಗಿವೆ. ಈ ನಡುವೆ ಒಂದು ವಾರದ ಮಳೆ ಬಿಡುವು ನೀಡಿತ್ತು. ಈ ಸಮಯದಲ್ಲಿ ರಸ್ತೆಗುಂಡಿಗಳನ್ನು ಸಂಪೂರ್ಣವಾಗಿ ಮುಚ್ಚುವಲ್ಲಿ ವಿಫಲವಾದ ಪಾಲಿಕೆಯ
ಅಧಿಕಾರಿಗಳು, ಇದೀಗ ಮಳೆಯಿಂದಾಗಿ ಗುಂಡಿಗಳನ್ನು ಮುಚ್ಚಲು ಆಗುತ್ತಿಲ್ಲವೆಂಬ ಸಬೂಬು ನೀಡುತ್ತಿದ್ದಾರೆ.